`ಪ್ರೀತಿಯು ನೀಡಿದ ಕಣ್ಣು’ ಎಚ್. ಎಸ್. ವೆಂಕಟೇಶಮೂರ್ತಿ ಅವರ ಸಮಗ್ರ ಗೀತೆಗಳಾಗಿವೆ. ಇದಕ್ಕೆ ಜೋಗಿ ಅವರ ಬೆನ್ನುಡಿ ಬರಹವಿದೆ; ನಾವು ಕೇಳಿದ ಒಂದು ಹಾಡು ನಮ್ಮೊಳಗೆ ಎಷ್ಟು ಕಾಲ ಉಳಿಯುತ್ತದೆ ಅನ್ನುವುದು ಕವಿಯನ್ನಷ್ಟೇ ಅಲ್ಲ, ನಮ್ಮ ಸಂವೇದನೆಯನ್ನೂ ಆಧರಿಸಿದ್ದು, ಎಷ್ಟೋ ಸಲ ಕವಿತೆ ಬಾಗಿಲು ಮುಚ್ಚಿ ಕುಳಿತುಬಿಡುತ್ತದೆ. ನಮ್ಮನ್ನು ಜಂಜಡದ ಜಗತ್ತಿನಲ್ಲೇ ಉಳಿಸಿ, ತಾನು ಚಿರಾಯುವಾಗಲು ಹೊರಡುತ್ತದೆ. ಎಚ್ಚೆಸ್ವಿ ಕವಿತೆಗಳು ಹಾಗಲ್ಲ, 'ಸಂಜೆಯಾಗುತ್ತಿದೆ ನಡೆನಡೆ ಗೆಳೆಯಾ' ಎನ್ನುತ್ತಲೇ ನಮ್ಮನ್ನೂ ಜೊತೆಗೆ ಕರೆದೊಯ್ಯುವ ಅವರ ಕವಿಸಾಲುಗಳು ಮಳೆಗಾಲದ ಮಧ್ಯಾಹ್ನಗಳಂತೆ ನನಗೆ ಭಾಸವಾಗುತ್ತವೆ. ಕವಿತೆಯ ಗೇಯಗುಣ ಇರುವುದು ಪ್ರಾಸದಲ್ಲೂ ಅಲ್ಲ, ಛಂದೋಬದ್ಧತೆಯಲ್ಲೂ ಅಲ್ಲ. ಅದು ಕವಿತೆಯ ಆತ್ಮದಲ್ಲಿರುತ್ತದೆ. 'ಪ್ರೀತಿಯು ನೀಡಿದ ಕಣ್ಣು' ಸಂಕಲನದ ಪುಟ ತೆರೆದಾಗೆಲ್ಲ ನನಗೆ ಅಂತಃಕರಣ ಮತ್ತು ಅನಿರ್ವಚನೀಯತೆ ಒಟ್ಟೊಟ್ಟಿಗೆ ಎದುರಾಗುತ್ತವೆ. ಈ ಸಾಲುಗಳನ್ನು ಕವಿ ಬರೆಯದೇ ಹೋದರೆ ನನಗೆ ಎಂದಿಗೂ ಅವು ದಕ್ಕುತ್ತಲೇ ಇರಲಿಲ್ಲವಲ್ಲ ಅಂತನ್ನಿಸಿ ಕವಿಯ ಬಗ್ಗೆ ಅಗಾಧ ಅಕ್ಕರೆ ಮೂಡುತ್ತದೆ. ಎಚ್ಚೆಸ್ವಿ ಭಾವಗೀತೆಯ ಪರಂಪರೆಯನ್ನು ತಮ್ಮ ಭಾವತೀವ್ರತೆ, ಅನುಭವ, ತಾಪ ಮತ್ತು ತಲ್ಲಣಗಳಿಂದ ವಿಸ್ತರಿಸುತ್ತಾ ಹೋಗಿದ್ದಾರೆ. ಇಲ್ಲಿ ನಡೆದಿರುವುದು ಪದಗಳ ಜತೆಗಿನ ರಾಸಲೀಲೆ ಮಾತ್ರವಲ್ಲ, ಭಾವದ ಜತೆಗಿನ ರಸಾನುಸಂಧಾನ. ಹೀಗಾಗಿಯೇ ಒಂದೊಂದು ಕವಿತೆಯೂ ನಮಗಾಗಿಯೇ ಕಾಯುತ್ತಿರುವಂತೆ ತೋರುತ್ತವೆ. ಅದನ್ನು ಎತ್ತಿಕೊಂಡಾಗ ಅವು ಹಿಗ್ಗುತ್ತವೆ. ಕವಿ ಮಾಡಿದ ಕವಿತೆ, ಓದುಗನ ಅಂತರಂಗದಲ್ಲಿ ನರ್ತಿಸುವುದು ಅಪರೂಪದ ಭಾಗ್ಯ. ಈ ಕವಿತೆಯ ಹುಚ್ಚಲಿ ನಾಡ ಸುಖವು ಹೆಚ್ಚಲಿ!
ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...
READ MORE