‘ಸುರಗಿ’ ಸೀರೆ ಕವಿತೆಗಳು, ಸೀರೆ ಕುರಿತಾದ ಕವಿತೆಗಳ ಸಂಕಲನ. ಸಾಹಿತ್ಯಾಸಕ್ತ ದಂಪತಿ ಹಂದಲಗೆರೆ ಗಿರೀಶ್ ಮತ್ತು ಕವಿ ದೀಪದ ಮಲ್ಲಿ ಸಂಪಾದಿಸಿರುವ ಕೃತಿ. ಸೀರೆ ಎಂಬುದೇ ಒಂದು ಕವಿತೆ. ನೂಲು ನೂಲು ಬೆಸೆಯುತ್ತಾ ನೇಯ್ದು ಆರು ಮೊಳದ ಕವಿತೆಯದು. ಹೇಗೆ ಕವಿತೆ ಕವಿಯಿಂದ ಕವಿಗೆ ಭಿನ್ನವಾಗಿ ಒಲಿಯುವುದೋ, ಹೇಗೆ ಕವಿತೆ ಓದುಗರಿಂದ ಓದುಗರಿಗೆ ಭಿನ್ನವಾಗಿ ದಕ್ಕುವುದೋ, ಹಾಗೆಯೇ ಸೀರೆ ಎಂಬುದು ಉಟ್ಟ- ಕಂಡ ಪ್ರತಿಯೊಬ್ಬರಿಗೂ ಭಿನ್ನ ಭಿನ್ನ ಭಾವ ಹೊಮ್ಮಿಸುತ್ತದೆ. ಕೆಲವರಿಗೆ ಸೀರೆ ಎಂದರೆ ಸಂಭ್ರಮ. ಮತ್ತೆ ಕೆಲವರಿಗೆ ಸೀರೆ ಎಂದರೆ ಕರಾಳ ಛಾಯೆ, ಕೆಲವರ ಸ್ವಾಭಿಮಾನ, ಮತ್ತೆ ಕೆಲವರಿಗೆ ಬಂಧನ, ಸೀರೆ ಎಂದರೆ ಸಿರಿತನ, ಸೀರೆ ಎಂದರೆ ಬಡತನ, ಸೀರೆ ಎಂದರೆ ಮಮತೆ, ಸೀರೆ ಎಂದರೆ ಅನುಭವ, ಸೀರೆ ಎಂದರೆ ಅನುಭಾವ. ಹೀಗೆ ಸೀರೆ ಎನ್ನುವುದು ಹಲವು ನೋಟ, ಹಲವು ಕಾಣ್ಕೆ. ಇಂಥ ಸೀರೆಯು ಕನ್ನಡದ ಕವಿ ಮನುಸುಗಳ ಎದೆಗೆ ಹೇಗೆ ಒದಗಿದೆ ಎಂಬ ಕುತೂಹಲದಿಂದ ಜೀವತಳೆದ ಕೃತಿಯೇ ಸುರಗಿ. ಕನ್ನಡದ ಹಿರಿ-ಕಿರಿ ಕವಿಗಳ ಸೀರೆ ಕುರಿತ 58 ಕವಿತೆಗಳಿವೆ.
ಕವಿ, ಹೋರಾಟಗಾರ್ತಿ, ಕಲಾವಿದೆ ದೀಪಾ ಕೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಹಳ್ಳಿಯಲ್ಲಿ ಜನಿಸಿದರು. 'ದೀಪದಮಲ್ಲಿ' ಕಾವ್ಯನಾಮದಲ್ಲಿ ಬರವಣಿಗೆಯಲ್ಲಿ ತೊಡಗಿರುವ ಅವರು, ಸಾಹಿತ್ಯ, ರಂಗಭೂಮಿ ಮತ್ತು ಸಾಮಾಜಿಕ ಹೋರಾಟಗಳಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿದವರು. ಹಲವಾರು ಸಾಮಾಜಿಕ ಸಂಘಟನೆಗಳ ಮೂಲಕ ಮಹಿಳೆಯರು, ಮಕ್ಕಳು, ಯುವಜನರು, ಲೈಂಗಿಕ ಅಲ್ಪಸಂಖ್ಯಾತರು ಹಾಗೂ ರೈತರ ಬಲವರ್ಧನೆಗಾಗಿ ಕೆಲಸ ಮಾಡಿದ್ದಾರೆ. ಇವರ ʼಅಸ್ಮಿತಾʼ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2015ರಲ್ಲಿ ಚೊಚ್ಚಲ ಪುಸ್ತಕ ಬಹುಮಾನ ಲಭಿಸಿದ್ದು, ಅದೇ ಕೃತಿಗೆ ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ ʼಶ್ರೀಲೇಖಾ ದತ್ತಿ ಪ್ರಶಸ್ತಿʼಯೂ ದೊರಕಿದೆ. ಬೆಂಗಳೂರು ವಿಶ್ವವಿದ್ಯಾಲಯದ ...
READ MOREಸೀರೆಯ ಮೇಲೆ ಬರೆದ ಸಾಲು
ಸೀರೆ ಎಂಬುದು ನೂಲುನೂಲು ಬೆಸೆಯುತ್ತಾ ನೇಯ್ದ ಆರುಮೊಳದ ಕವಿತೆ, ಹೇಗೆ ಕವಿತೆ ಕವಿಯಿಂದ ಹೇಗೆ ಭಿನ್ನವಾಗಿ ಒಲಿಯುವುದೋ, ಹೇಗೆ ಕವಿತೆ ಓದುಗರಿಂದ ಓದುಗರಿಗೆ ಭಿನ್ನವಾಗಿ ದಕ್ಕುವುದೋ ಹಾಗೆಯೇ ಸೀರೆ ಎಂಬುದು ಉಟ್ಟ ಕಂಡ ಪ್ರತಿಯೊಬ್ಬರಿಗೂ ಭಿನ್ನ ಭಿನ್ನ ಭಾವ ಹೊಮ್ಮಿ ಸುತ್ತದೆ. ಇಂಥ ಸೀರೆಯು ಕನ್ನಡದ ಕವಿಮನಸುಗಳ ಎದೆಗೆ ಹೇಗೆ ಒದಗಿದೆ ಎಂಬ ಕುತೂಹಲದಲ್ಲಿ ಸೀರೆ ಕವಿತೆಗಳ ಸಂಕಲನ ಹೊರತಂದಿರುವುದಾಗಿ ದೀಪದ ಮಲ್ಲಿ ಮತ್ತು ಗಿರೀಶ್ ಹಂದಲಗೆರೆ ಮುನ್ನುಡಿಯಲ್ಲಿ ಬರೆದು ಈ ಸಂಕಲನ ಹೊರತಂದಿದ್ದಾರೆ. ಸುರಗಿ ಎಂಬ ಸೀರೆಯಂಗಡಿಯ ಮಾಲೀಕರೂ ಆಗಿರುವ ದೀಪಾ-ಗಿರೀಶ್ ತಮ್ಮ ವೃತ್ತಿಯನ್ನು ಮತ್ತು ಪ್ರವೃತ್ತಿಯನ್ನು ಈ ಸಂಕಲನದ ಮೂಲಕ ಬೆಸೆಯುತ್ತಿರುವುದು ಕುತೂಹಲಕಾರಿಯಾಗಿದೆ.
ಸುರಗಿ- ಸೀರೆ ಕವಿತಾ ಸಂಕಲನದಲ್ಲಿ ಜನಪದ ಮತ್ತು ವಚನಗಳೂ ಸೇರಿದಂತೆ 58 ಸೀರೆ ಕವಿತೆಗಳಿವೆ. ಕನ್ನಡದ ಪ್ರಮುಖ ಕವಿಗಳೆಲ್ಲರೂ ಈ ಸಂಕಲದಲ್ಲಿದ್ದಾರೆ. ವೈದೇಹಿ, ತೇಜಸ್ವಿ, ಪ್ರತಿಭಾ, ಜೆಎಸ್‌ಎಸ್, ಕೆಎಸ್‌ನ, ಲಲಿತಾ ಸಿದ್ದಬಸವಯ್ಯ, ಸುಕನ್ಯಾ ಕಳಸ, ಸಂಧ್ಯಾರಾಣಿ, ರೇಣುಕಾ, ಭಾರತಿ ಬಿವಿ, ಭುವನ ಹಿರೇಮಠ ಮುಂತಾದವರ ಕವಿತೆಗಳಲ್ಲಿ ಸೀರೆ ಅಂತರಂಗದ ದನಿಯಾಗಿ ಮೂಡಿವೆ. ಸೀರೆಯನ್ನು ತಾವು ಹೇಗೆ ಕಂಡಿದ್ದೇವೆ ಅನ್ನುವುದನ್ನು ವಿಕ್ರಮ್ ಹತ್ವಾರ್, ಸುಶ್ರುತ ದೊಡ್ಡರಿ, ಬೇಲೂರು ರಘುನಂದನ್, ಹಂದಲಗೆರೆ ಗಿರೀಶ್ ಸೇರಿದಂತೆ ಹಲವರು ವರ್ಣಿಸಿದ್ದಾರೆ. ಇಂಥ ಸಂಕಲನಗಳು ಅವುಗಳ ವಿಶಿಷ್ಟತೆಗಾಗಿ ಇಷ್ಟವಾಗುತ್ತವೆ.
ಕೃಪೆ: ವಿಜಯ ಕರ್ನಾಟಕ, (2020 ಫೆಬ್ರುವರಿ 02)