ಸಾಮಾಜಿಕ ತಾಣಗಳು ಓದುಗರು ಮತ್ತು ಬರಹಗಾರರ ನಡುವಿನ ಪತ್ರಿಕೆ ಎಂಬ ದೊಡ್ಡ ಗೋಡೆಯನ್ನು ಕೆಡವಿ ಹಾಕಿದೆ. ಇಲ್ಲವಾದರೆ ಬರಹಗಾರರು ಪತ್ರಿಕೆಗಳ ದೊಣ್ಣೆನಾಯಕನ ಅಪ್ಪಣೆ ಪಡೆದೇ ಓದುಗರನ್ನು ತಲುಪಬೇಕಾಗಿತ್ತು. ಇಂದು ಸಾಮಾಜಿಕ ತಾಣಗಳ ಮೂಲಕ ಓದುಗರನ್ನು ನೇರವಾಗಿ ತಲುಪುವ ಸ್ವಾತಂತ್ರ ಕವಿಗೆ, ಬರಹಗಾರರಿಗೆ ದೊರಕಿದೆ. ಓದುಗರೇ ಲೇಖಕನನ್ನು ರೂಪಿಸುತ್ತಿದ್ದಾರೆ. ಹೀಗೆ ರೂಪಿಸಿದ ಅತ್ಯುತ್ತಮ ಕವಯತ್ರಿಯರಲ್ಲಿ ಕಾದಂಬಿನಿ ಹೆಸರನ್ನು ಪಟ್ಟಿ ಮಾಡಬಹುದು. ಸಾಮಾಜಿಕ ತಾಣಗಳ ಮೂಲಕ ಹೊರಹೊಮ್ಮಿದ ಕಾದಂಬಿನಿ ಎನ್ನುವ ಕವಯತ್ರಿ, ಹೊಸ ತಲೆಮಾರಿನ ಬಹುಮುಖ್ಯ ಬರಹಗಾರ್ತಿಯಾಗಿದ್ದಾರೆ. ಅವರ 'ಹಲಗೆ ಮತ್ತು ಮೆದುಬೆರಳು' ಕೃತಿ ಇದೀಗ ಹೊರ ಬಂದಿದೆ. ತಾಯಿಯ ಕುರಿತು ಹೇಳು ಎಂದರು ಉರಿಯದ ಒಲೆಯ ಮುಂದೆ ಕೊತಕೊತನೆ ಕುದಿದವಳು ಎಂದೆ?” ಹೀಗೆ ಧಗೆಂದು ಬೆಳಗುವ ಒಲೆಯಂತೆ ಎದೆಯನ್ನು ಆವರಿಸುವ ಸುಮಾರು 200 ಕವಿತೆಗಳು ಇಲ್ಲಿವೆ.
ಕಾದಂಬನಿ ರಾವಿ ಅವರು ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ವಾಸವಾಗಿರುವ ಇವರು ಬಿಡುವಿನ ವೇಳೆಯಲ್ಲಿ ಓದು-ಬರಹವನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ಹಲವು ಪತ್ರಿಕೆಗಳು, ವೆಬ್ ಪೋರ್ಟಲ್ ಗಳಲ್ಲಿ ಕಾದಂಬಿನಿ ಅವರ ಹಲವು ಬರಹಗಳು ಪ್ರಕಟವಾಗಿವೆ. ‘ಹಲಗೆ ಮತ್ತು ಮೆದುಬೆರಳು’, ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಅವರ ಪ್ರಕಟಿತ ಕಾವ್ಯಸಂಕಲನಗಳು. ...
READ MORE