ಕವಿ ಡಾ. ಶಾಂತಲಿಂಗ ಎಚ್. ಘಂಟಿ ಅವರು ಬರೆದ ಕವನಗಳ ಸಂಕಲನ-ಮೋಡದ ಮೇಲಿನ ಹದ್ದು. ಸಾಮಾಜಿಕ ವಿದ್ಯಮಾನಗಳು, ವ್ಯಕ್ತಿಗತ ಅನುಭವಗಳು, ಆಲೋಚನೆಗಳು ಇಲ್ಲಿಯ ಕವನಗಳ ವಸ್ತುಗಳಾಗಿವೆ. ಕವನಗಳ ನಿರೂಪಣಾ ಶೈಲಿಯೂ ಪರಿಣಾಮಕಾರಿಯಾಗಿದೆ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಡಾ. ನಾಗೇಂದ್ರ ಮಸೂತಿ, ‘ಈ ಕವನ ಸಂಕಲನದಲ್ಲಿ ಹನಿ ಕವಿತೆಗಳು ಮತ್ತು ಸುದೀರ್ಘ ಕವಿತೆಗಳಿವೆ. ಇವರ ಕಾವ್ಯದ ವಿಷಯ ವಸ್ತುಗಳನ್ನು ನೋಡಿದರೆ, ತುಂಬಾ ವೈವಿಧ್ಯತೆಯಿದೆ. ಅವುಗಳನ್ನು ನಿಭಾಯಿಸುವ ಪ್ರಯತ್ನ ಇಲ್ಲಿ ಮಾಡಿದ್ದಾರೆ. ಇಲ್ಲಿಯ ಈ ಚಿಂತನ ಕ್ರಮವೇ ಒಬ್ಬ ವ್ಯಕ್ತಿಯನ್ನು ದೊಡ್ಡದಾಗಿ ಬೆಳೆಸುವುದು. ಬದುಕಿನ ವೈರುಧ್ಯಗಳನ್ನು ಕಲಾತ್ಮಕವಾಗಿ ಚಿತ್ರಿಸುವ ಕೌಶಲ್ಯ ಇಲ್ಲಿದೆ. ಹನಿಯಲ್ಲೇ ಚಿಂತನದ ಹೊನಲು ಹರಿದು ಅರ್ಥದ ಅನುರಣಿತಗೊಳ್ಳುವಂತೆ ಮಾಡುವ ಶಕ್ತಿ ಕಾವ್ಯಕ್ಕಿದೆ. ಕವಿತೆಗಳಲ್ಲಿ ಭಾವ ಮತ್ತು ಉಪಮೆಗಳು ಬಳಕೆಯಾಗಿವೆ. ಸಮಾಜದ ವ್ಯತ್ಯಾಸದ ಬಗ್ಗೆ ಚಿಂತನೆ ಮಾಡಿದ್ದಾರೆ. ತನ್ನ ಹಾಗೂ ಸಮಾಜದ ಅನೇಕ ಸಂಗತಿಗಳನ್ನು ಬಿಚ್ಚಿಡುತ್ತಾರೆ. ಸಮಾಜ, ಶೈಕ್ಷಣಿಕ ವ್ಯವಸ್ಥೆ, ಸಮುದಾಯಗಳು ಸರಿಯಾಗಬೇಕೆಂಬ ಕಳಕಳಿ ಇದೆ ಎಂದು ಪ್ರಶಂಸಿಸಿದ್ದಾರೆ.
ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಪ್ರೊ. ಶಿವಗಂಗಾ ರುಮ್ಮಾ ‘ಸ್ಥಾಪಿತ ವ್ಯವಸ್ಥೆಯ ಜೊತೆ ಸಾಗುವ ಸತ್ತ ಮೀನುಗಳು ನದಿಯ ನೀರಿನೊಂದಿಗೆ ಹರಿಯುತ್ತ ಕ್ರಿಯಾಶೀಲತೆ ಇಲ್ಲದೆ ಬದುಕುತ್ತವೆ. ಆದರೆ ಜೀವಂತ ಮೀನುಗಳು ಮಾತ್ರ ನೀರು ಹರಿಯುವ ವಿರುದ್ಧ ದಿಕ್ಕಿಗೆ ಈಜುತ್ತವೆ. ಇಲ್ಲಿನ ಕವನಗಳು ಪ್ರವಾಹದ ವಿರುದ್ಧ ಈಜಲು ತುಡಿಯುತ್ತಿವೆ. ಹಲವಾರು ಕವಿತೆಗಳಲ್ಲಿ ಇವರ ಸೃಜನಶೀಲ ಶಕ್ತಿ ಮಿಂಚಿನಂತೆ ಮಿಂಚಿ ಮಾಯವಾಗುತ್ತದೆ. ಇವರು ಅಪ್ಪನನ್ನು ಕುರಿತು ಬರೆದ 'ಲೋಕವಿರೋಧಿ' ಕವನ ಕೂಡ ಲಂಕೇಶರ "ಅವ್ವ"ದಂತೆ ಅರ್ಥವಿಸ್ತಾರವನ್ನು ಪಡೆದುಕೊಳ್ಳುತ್ತ ಸಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕವಿ ಡಾ.ಶಾಂತಲಿಂಗ ಘಂಟೆ ಅವರು ಮೂಲತಃ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಗಡಿ ಗ್ರಾಮ ದರ್ಗಾ ಶಿರೂರನವರು. ತಂದೆ ಹಣಮಂತರಾಯ, ತಾಯಿ ಪುತಳಾಬಾಯಿ. ಸ್ವಗ್ರಾಮದಲ್ಲಿ ಪ್ರಾಥಮಿಕ-ಪ್ರೌಢ ಶಿಕ್ಷಣ ಪೂರೈಸಿದ್ದು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಎಂ.ಎ ಹಾಗೂ ಪಿಎಚ್ ಡಿ ಪದವಿ ಪಡೆದರು. ಸದ್ಯ, ಕಲಬುರಗಿಯ ಗೋದುತಾಯಿ ಮಹಿಳಾ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು. ಕೃತಿಗಳು: ಮೋಡದ ಮೇಲಿನ ಹದ್ದು (ಕವನ ಸಂಕಲನ) ...
READ MORE