ಕವಿ, ಲೇಖಕಿ ರೇಣುಕಾ ಕೋಡಗುಂಟಿ ಅವರ ಕವನ ಸಂಕಲನ ‘ಕಂದೀಲಿನ ಕುಡಿ’. ವೈಚಾರಿಕತೆ ,ಛಲ ಫಲ ಹೀಗೆ ಹಲವಾರು ವಿಚಾರಗಳ ಸತ್ಯಸಂಗತಿಯನ್ನ ಚರ್ಚೆಗೆ ಈ ಕವನ ಸಂಕಲನ ಅನುವು ಮಾಡಿಕೊಡುತ್ತದೆ.
ಗಜಲ್ ಕವಿ ಅಲ್ಲಾ ಗಿರಿರಾಜ ಅವರು ಹೇಳುವಂತೆ, ‘ಕಂದೀಲಿನ ಕುಡಿ ಸುತ್ತವೂ ಅನೇಕ ಕಣ್ಣೀರಿನ ಕಥನ ಅನುಭವ ಇಲ್ಲಿ ಗರೀಬನ ಎದೆಯ ಹಾಡಾಗುತ್ತವೆ. ಇಂತಹ ಕವಿತೆ ಕಟ್ಟುವುದರ ಮೂಲಕವೇ ಪ್ರತಿ ಒಬ್ಬ ಬರಹಗಾರ ಜನಕವಿ ಆಗಬೇಕು.ಆ ನಿಟ್ಟಿನಲ್ಲಿ ರೇಣುಕಾ ಕೋಡಗುಂಟಿ ಅವರ ಕವಿತೆಗಳು ಸದರಿ ಸಂಕಲನ ದಲ್ಲಿ ಇರುವುದಕ್ಕೆ ಓದಲು ಹೆಮ್ಮೆ ಅನಿಸುತ್ತದೆ’ ಎಂದಿದ್ದಾರೆ.
ಕಥೆಗಾರ, ವಿಮರ್ಶಕ ನಟರಾಜ ಹುಳಿಯಾರ್ ಅವರು, "ಕಂದೀಲಿನಕುಡಿ" ಕವನ ಸಂಕಲನ ಪುಸ್ತಕಕ್ಕೆ ತಮ್ಮ ಅಭಿಬಿಪ್ರಾಯವನ್ನು ಪುಸ್ತಕದ ಬೆನ್ನುಡಿಯ ಮೂಲಕ ಹಂಚಿಕೊಂಡಿದ್ದಾರೆ. “ರೇಣುಕಾ ಕೋಡಗುಂಟಿ ಯವರ ' ಕಂದೀಲಿನ ಕುಡಿ' ಸಂಕಲನದ ' ಗಾಂಧಿ ಮತ್ತು ದೇವರು' ಕವಿತೆ ಗಾಂಧೀಜಿಗಿಂತ ಕೊಂಚ ಮುಂದೆ ಸಾಗಿ ಅಹಿಂಸೆಯ ಐಡಿಯಾವನ್ನು ಅರ್ಥಪೂರ್ಣವಾಗಿ ವಿಸ್ತರಿಸುತ್ತಾ, ' ನಮ್ಮ ದೇವತೆಗಳ ಕೈಯಲ್ಲಿ ಆಯುಧಗಳನ್ನು ಕಂಡಾಗಲೆಲ್ಲ ಗಾಂಧಿಯ ಕೈಯಲ್ಲಿನ ಚರಕ ನೆನಪಾಗುತ್ತದೆ' ಎಂದಾಗ ನಿಜಕ್ಕೂ ಅಚ್ಚರಿಯಾಯಿತು. ಅವರ ' ಕೌದಿ' ಕವಿತೆಯಲ್ಲಿ ಬುದ್ಧ, ಬಸವ, ಗಾಂಧಿ, ಅಕ್ಕ, ಅಲ್ಲಮರು ತಮ್ಮನ್ನೆಲ್ಲ ಕೌದಿಯ ತೇಪೆಯಾಗಿಸುವಂತೆ ಕೌದಿ ಹೊಲೆಯುವಾಕೆಯನ್ನು ಬೇಡಿ ಸೂಜಿ ಚುಚ್ಚಿಸಿಕೊಂಡು ಖುಷಿಪಡುವ ದೃಶ್ಯ ಗಾಂಧೀ ತಾತ್ವಿಕತೆಯನ್ನು ಇನ್ನಷ್ಟು ಆಳವಾಗಿಸುತ್ತದೆ.
ರೇಣುಕಾರ ಅಸಲಿ ಕವಿನೋಟದಿಂದ ಹುಟ್ಟುವ ಇಂಥ ಸುಂದರ ಚಿತ್ರಗಳು; 'ಸಮಯ' ಕವಿತೆಯಲ್ಲಿರುವ ' ಅಪ್ಪ ಕಟ್ಟಿದ ಮನೆಯ ಇಟ್ಟಿಗೆಯನ್ನು ಮಗ ಎಣಿಸುತ್ತಾ ಕೂತಿದ್ದಾನೆ....ಅಪ್ಪ ಕಟ್ಟಿದ ಗೋಡೆಯ ಭಾರ ಇಳಿಯುತ್ತಲೇ ಇಲ್ಲ...ಅವ್ವ ಒಗೆದ ಸೀರೆಯ ಕಲೆಗಳು ಹೋಗಲೇ ಇಲ್ಲ'ಥರದ ವಿಷಾದದ ಪ್ರತಿಮೆಗಳು ಅವರ ಕವಿತ್ವದ ಸಾಧ್ಯತೆಯನ್ನು ನಿಚ್ಚಳವಾಗಿ ಕಾಣಿಸುತ್ತವೆ ಎಂಬುದು ನಟರಾಜ್ ಅವರ ಮಾತು. ಅಲ್ಲದೆ “ಸಂಸ್ಕೃತಿ ಸಂಶೋಧಕಿಯಾಗಿ ರೇಣುಕಾ ಮಾಡುತ್ತಿರುವ ಗಂಭೀರ ಸಾಂಸ್ಕೃತಿಕ ಅಧ್ಯಯನಗಳು ಅವರ ಕವಿತೆಗಳಿಗೆ ಅಂಚಿನ ಸಂಸ್ಕೃತಿಗಳ ಪಿಸುದನಿಗಳನ್ನು, ಚೌಡಕಿ,ಬುಡಬುಡಕಿಯ ಲಯಗಳನ್ನು ಕೊಟ್ಟಿವೆ. ಸಂಕಲನದ ಮೊದಲ ಪದ್ಯದಲ್ಲೇ ಮಸ್ಕಿ ಕಡೆಯ ಲಯ, ನುಡಿಗಟ್ಟುಗಳು ಕಾವ್ಯಭಾಷೆಯಾಗುವುದನ್ನು ಕಂಡಾಗ ಅವರ ತಾಜಾ ಕಾವ್ಯಶಕ್ತಿ ಇಲ್ಲಿದೆ ಎನ್ನಿಸತೊಡಗುತ್ತದೆ.
ನಂತರ ಇಲ್ಲಿ ಹಣಿಕಿಕ್ಕುವ ಮಧ್ಯಮ ವರ್ಗದ ಕಾವ್ಯ ಭಾಷೆ ಕಲ್ಯಾಣ ಕರ್ನಾಟಕದ ಕಡೆಯಿಂದ ಬಯಲುಸೀಮೆಗೆ ಬಂದ ಕವಯಿತ್ರಿಯರ ಸೃಜನಶೀಲ ಬಿಕ್ಕಟ್ಟನ್ನೂ ಸೂಚಿಸುತ್ತದೆ. ಈ ನಡುವೆಯೂ ರೇಣುಕಾಗೆ ತನ್ನ ಸೀಮೆಯ ನುಡಿಗಟ್ಟುಗಳು, ಜೀವನ ದರ್ಶನಗಳು ಒದಗಿ ಬಂದಾಗಲೆಲ್ಲ ಅವರ ಕವಿತೆಗಳಲ್ಲಿ ಹೊಸ ದನಿ, ಹೊಸ ಅರ್ಥಗಳು ಮಾಡತೊಡಗುತ್ತವೆ.ಆರೋಗ್ಯಕರ ನಿಲುವು, ಸ್ತ್ರೀವಾದಿ ಪ್ರಗತಿಪರತೆ, ಸಮಕಾಲೀನ ರಾಜಕೀಯ- ಸಾಮಾಜಿಕ ಸಂವೇದನೆಗಳು ಬೆರೆತ ಕವಿತೆಗಳನ್ನು ಬರೆಯುತ್ತಿರುವ ರೇಣುಕಾ ಕೋಡಗುಂಟಿಯವರ ಸಂಶೋಧನಾ ಲೋಕದ ಸಾಮುದಾಯಿಕ ಕಾಣ್ಕೆ, ಅವರೊಳಗೆ ಹರಿಯುತ್ತಿರುವ ನೆಲದ ಭಾಷೆ ಅವರ ಕಾವ್ಯದಲ್ಲಿ ಇನ್ನಷ್ಟು ಹದವಾಗಿ ಬೆರೆಯಲಿ. ಅವರ ಸಂಶೋಧಕ ವ್ಯಕ್ತಿತ್ವ ಹಾಗೂ ಕವಿಮನಗಳೆರಡೂ ಬಿರುಕೊಡೆಯದೆ ಬೆಸೆದು, ಅವರ ಕವಿತೆಯ ಕಂದೀಲು ಸದಾ ಬೆಳಕು ಚೆಲ್ಲುತ್ತಿರಲಿ ಎಂಬುದಾಗಿ ವಿಮರ್ಶಕ ನಟರಾಜ್ ಹೇಳಿದ್ದಾರೆ.
ರೇಣುಕಾ ಕೋಡಗುಂಟಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿಯವರು. ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ಅಯ್ಯಪ್ಪ ಕೋಡಗುಂಟಿ, ತಾಯಿ ಶಾಂತಮ್ಮ ಕೋಡಗುಂಟಿ, ರೇಣುಕಾ ಕೋಡಗುಂಟಿಯವರು ವಿದ್ಯಾಭ್ಯಾಸ ಎಂ.ಎ, ಎಂ.ಫಿಲ್, ಗೃಹಿಣಿ. ಸಾಹಿತ್ಯ, ಸಂಶೋಧನೆಯಲ್ಲಿ ಅಪಾರ ಆಸಕ್ತಿ. ‘ಕೃತಿ ದೀವಿಗೆ ಟ್ರಸ್ಟ್, ನಡೆಸುತ್ತಿದ್ದಾರೆ. ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ಕೆಲಸ ಮಾಡುತ್ತಿದ್ದಾರೆ. ಕೃತಿಗಳು: ಬಳಪದ ಚೂರು(ಕವನ ಸಂಕಲನ-2011), ‘ನಮ್ಮ ಕನ್ನಾಡ ಪ್ರೇಮದ ಜೋತಿ (2011-ರಾಯಚೂರು ಜಿಲ್ಲೆಯ ಕಸಬಾ ಲಿಂಗಸೂಗೂರಿನ ಅಂಪವ್ವ ಪೂಜಾರಿ ಅವರು ಹಾಡಿರುವ ಜನಪದ ಹಾಡುಗಳ ಸಂಗ್ರಹ), ಅದೇ ಗಾಯಕರು ಹಾಡಿರುವ ‘ಇಜಬೂಪನ ಪದ’ (2019- ಎನ್ನುವ ಜನಪದ ಖಂಡಕಾವ್ಯ), ‘ಭಾಷಾವಿಜ್ಞಾನ ಸಂಶೋಧನೆ ಇಂದು’ (ಸಂಶೋಧನಾ ಪ್ರಬಂಧಗಳ ಸಂಪಾದನೆ-2011), ಕರ್ನಾಟಕದಲ್ಲಿ ಶವಸಂಸ್ಕಾರ (ಸಂಶೋಧನಾತ್ಮಕ ...
READ MORE