‘ಮಿಂಚು ಧ್ಯಾನಸ್ಥ ಘಳಿಗೆಯ ಅನುಭಾವ’ ಕೃತಿಯು ಕಂ.ಕ.ಮೂರ್ತಿ ಅವರ ಕವನಗಳ ಸಂಕಲನವಾಗಿದೆ. ಈ ಕವನ ಗುಚ್ಛವನ್ನು ಲೇಖಕರು ಹೀಗೆ ಬಿಂಬಿಸಿದ್ದಾರೆ : 'ಒಂದು ವಿಚಾರವನ್ನು ಮಥಿಸಿದಾಗ ಮನಸ್ಸಿನಲ್ಲಿ ಹೊಳೆದ ಕೋಲ್ಕಿಂಚುಗಳು'. 'ಇವುಗಳನ್ನು ಪದ್ಯಗಳಾದರೂ ಎನ್ನಿ ಅಥವಾ ಈ ಪ್ರಕಾರಕ್ಕೆ ಒಗ್ಗದವು ಎಂದರೂ ಚಿಂತೆ ಇಲ್ಲ' ಎಂದು ಹೇಳುತ್ತಾ ,ಅಲ್ಲಲ್ಲಿ ತಾವು ಬರೆದ ಪದ್ಯಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಕೊಟ್ಟು, ತಮಗೆ ಹೊಳೆದ ವಿಚಾರಗಳನ್ನೂ ಎದುರಿಗಿರಿಸಿದ್ದಾರೆ. ಅರೆಬೆಂದ ಅಕ್ಕಿ ಅನ್ನವಾಗುವುದಿಲ್ಲ ಅರೆ ತಿಳಿವಳಿಕೆ ಜ್ಞಾನವಾಗುವುದಿಲ್ಲ -ಹೀಗೆ ಎರಡು ಸಾಲಿನಲ್ಲೇ ವಿಚಾರಗಳನ್ನು ಬಡಿದೆಬ್ಬಿಸುವ ಕೋಲ್ಕಿಂಚುಗಳಿಲ್ಲಿ ಹಲವು.
ಅಮ್ಮನ ಪ್ರೀತಿ, ಮೌನದ ಅರ್ಥ, ಮುಸ್ಸಂಜೆಯ ತಿಳಿಗಾಳಿ, ಪ್ರೀತಿ, ಬದುಕು, ಪ್ರಕೃತಿಯ ವಿಸ್ಮಯ... ಹೀಗೆ ಇಲ್ಲಿ ಸರಳ ವಿಷಯಗಳೇ ಹಲವು ಪದ್ಯಗಳಿಗೆ ವಸ್ತುವಾಗಿವೆ. ಒಮ್ಮೆ ಅನಿಸಿತು, ಜನ್ಮಜಾತವಾಗಿ ಬೆಚ್ಚನೆಯ ಭಾವವೇ ಇಲ್ಲದೇ ಕಳೆದ ನನ್ನ ಬಾಲ್ಯದ ಬದುಕಿನ ಬಗ್ಗೆ, ತಕ್ಷಣವೇ ಉತ್ತರ ರೂಪವಾಗಿ ಕೆಳಗಿನ ಪದ್ಯ ಹೊಳೆಯಿತು. `ನನ್ನ ಹೃದಯದಲಿ ನೀ ನೆಟ್ಟ ಕಾರುಣ್ಯದ ಬೀಜ ಗಿಡವಾಗಿ, ಮರವಾಗಿ, ಹೂವಾಗಿ ಹಣ್ಣಾಗಿ ನಾನಾ ಫಲಗಳನ್ನು ಕೊಟ್ಟಾಗ ನೀ ಏನೂ ಕೊಡಲಿಲ್ಲ. ಎಂಬ ಭಾವವೇ ಮರೆಯಾಯಿತು…. ಇದು ನಿಜವಲ್ಲವೇ?' ಮನುಷ್ಯ ಹೊಂದಿರುವ ಕಾರುಣ್ಯದ ಸಂಪತ್ತಿಗಿಂತ ದೊಡ್ಡದು ಯಾವುದಿದೆ. ದೇವರು ಭೌತಿಕವಾಗಿ ಎಲ್ಲವನ್ನೂ ಕೊಟ್ಟು ಕಾರುಣ್ಯವನ್ನೇ ಕೊಡದಿದ್ದರೆ ಆ ಜೀವಕ್ಕೆ ಏನು ಬೆಲೆ ಇದೆ. ಬದುಕಿಗೆ ಏನು ಮೌಲ್ಯವಿದೆ?. ಎಲ್ಲ ಧರ್ಮದ ಸಾರಗಳು ಅಂತಿಮವಾಗಿ ನಮ್ಮಲ್ಲಿ ಹುಟ್ಟಿಸ ಬೇಕಾದ್ದು ಜೀವಕಾರುಣ್ಯವಲ್ಲವೆ? ಇಲ್ಲಿನ ಬಹುತೇಕ ಕವನಗಳು ಮಿಂಚುಗಳಂತೆ ಹೊಳೆದಿದ್ದು ಹೀಗೆ’ ಎಂದು ಹೇಳುತ್ತಾರೆ.
ಕಂ.ಕ ಮೂರ್ತಿ ಅವರು ಪತ್ರಕರ್ತರು. ಗ್ರಾಮೀಣ ಪತ್ರಿಕಾವೃತ್ತಿಯ ಮೂಲಕ ವ್ಯವಸಾಯ ಆರಂಭಿಸಿದರು. 5 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 24 ವರ್ಷಗಳಿಂದ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ರಾಜಕೀಯ ವರದಿಗಾರರು. ಹಾಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಸರ್ಕಾರಿ ನಾಮನಿರ್ದೇಶನ ಸದಸ್ಯರಾಗಿದ್ದು, ಹಲವು ಪತ್ರಿಕಾ ಸಂಘಟನೆಗಳಲ್ಲೂ ಕೆಲಸ ಮಾಡಿದ್ದಾರೆ. ಅನೇಕ ಕತೆಗಳು ಮತ್ತು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕೃತಿಗಳು : ನವೋದಯ ಪ್ರಶಸ್ತಿ-ಪುರಸ್ಕಾರಗಳು : ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ‘ಎಚ್. ಎಸ್ ದೊರೆಸ್ವಾಮಿ ವಾರ್ಷಿಕ ಪ್ರಶಸ್ತಿ. ...
READ MORE