‘ಸಂಜೆ ಐದರ ಸಂತೆ’ ಸೌಮ್ಯ ದಯಾನಂದ ಅವರ ರಚನೆಯ ಕವನಸಂಕಲನವಾಗಿದೆ. ಸಂಜೆ ಐದಕ್ಕೆ ಜೀವತಾಳುವ ಮಳೆಯಂತೆ ಇಲ್ಲಿನದು ಸಂಜೆ ಐದಕ್ಕೆ ಜೀವಗೂಡುವ ಸಂತೆ. ಈ ಸಂತೆಯೆಂದರೆ ಎರಡು-ಮೂರು ಗಂಟೆ ಕಾಲ ಜೀವಂತಿಕೆಯಿಂದ ನಳನಳಿಸುವ ಲೋಕ, ದಿನವೆಲ್ಲ ಮುಗಿಯಿತೆನ್ನುವಾಗ ಬದುಕು ಕಟ್ಟಿಕೊಳ್ಳುವ ಧಾವಂತದಿಂದಿರುವವರ ಅವಕಾಶ ಅರಳುವ ಸಮಯ. ಇದುವೇ ಬದುಕು ಸಂಜೆಯೆಂದರೆ ಬೆಳಕು ಕತ್ತಲುಗಳು ಸಂಧಿಸುವ ಹೊತ್ತು, ಭವಿಷ್ಯದ ಎಲ್ಲ ಕನಸುಗಳೂ ಹೊಂಬಣ್ಣದ ಹೊದಿಕೆಯಲ್ಲಿ ಗರ್ಭಿಕರಿಸುವ ಸಮಯ. ಕಪ್ಪು-ಬಿಳುಪುಗಳ ಈ ಬೆಸೆಯುವಿಕೆಯಲ್ಲೇ ಎಲ್ಲ ಬಣ್ಣಗಳೂ ಇವೆ, ಬದುಕೂ ಇದೆ. ಕೇವಲ ಬಿಳುಪೋ ಗುಲಾಬಿಯೋ ಕೆಂಪೋ ಮಾತ್ರ ಬೇಕೆನ್ನುವ ಬದಲು ಎಲ್ಲ ಬಣ್ಣಗಳನ್ನೂ ತಬ್ಬಿಕೊಳ್ಳುವ ಮನಕ್ಕೆ ಬದುಕೂ ವರ್ಣಮಯವಾಗಿ ತೆರೆದುಕೊಳ್ಳುತ್ತದೆ. ಕಾವ್ಯದ ಎಲ್ಲ ಆಯಾಮಗಳೂ ಹಾಗೆಯೇ, ಎಲ್ಲ ಆನು ಒಲಿದಂತೆ ಹಾಡುವೆ ಎಂದು ಹೊರಟಾಗ ಬಾಗು-ಬಳುಕುಗಳೊಂದಿಗೆ ಅನಾವರಣಗೊಳ್ಳುತ್ತಾ ಹೋಗುತ್ತವೆ. 'ಸಂಜೆ ಐದರ ಸಂತೆ'ಯಲ್ಲೂ ತಾವು ಬೆಳೆದ ಕವನಗಳನ್ನು ಹರವಿಟ್ಟಿದ್ದಾರೆ ಈ ಕವಯಿತ್ರಿ ಇಲ್ಲಿನ ಪ್ರತಿ ಹೂವಿಗೂ ತನ್ನದೇ ಗಂಧ, ತನ್ನದೇ ನಿರುಮ್ಮಳ ಗತಿ. ಕಾವ್ಯಲೋಕದ ವ್ಯಾಪಾರಕ್ಕೆ ವಸ್ತುವೈವಿಧ್ಯದ ನಿಯಮವೇನಿಲ್ಲ. ಕವಿಮನದ ಒಳತುಡಿತಕ್ಕೆಲ್ಲ ಕಾವ್ಯಲೋಕದ ಅಂಗಳವೇ ಆಧಾರ. ಕಾವ್ಯಕ್ಕೆ ಶರಣಾದಷ್ಟು ಅದು ಸಂತೈಸುತ್ತದೆ, ಎಲ್ಲ ಮನೋಭಿವ್ಯಕ್ತಿಗೂ ಆಡುಂಬೊಲವಾಗುತ್ತದೆ. ರವಿ ಕಾಣದ್ದನ್ನೂ ಕಾಣುವ ಕಣ್ಣೆ ಇಲ್ಲಿನ ರಚನೆಗಳ ಶಕ್ತಿ, ಇಲ್ಲಿ ಪ್ರೇಮದ ಸುಳಿಗಾಳಿಯಿದೆ. ನಿತ್ಯ ಬದುಕಿನ ವ್ಯಾಪಾರವಿದೆ. ಹೃದಯದ ನಕಲಿತನವನ್ನು ಎಚ್ಚರಿಸುವ ಮನಸ್ಸಿದೆ. ಅಮ್ಮನ ಸೆರಗಿನಡಿಯ ತಂಪಿದೆ. ಹೆಣ್ಣಿನದ ಹಾಡುಪಾಡುಗಳಿವೆ. ಕಡಲೆಂಬ ಕಾರಣಕ್ಕೆ ದಾಹ ಸಹಿಸುತ್ತ ಇರಬೇಕೇ ಎನ್ನುತ್ತ ಪ್ರಶ್ನಿಸುವ ಎಚ್ಚರವಿದೆ. ನೆನಪಿನ ನೇವರಿಕೆ ಇದೆ. ಕನಸುಕಂಗಳ ಕಾಣುವ ಕಣ್ಣುಗಳಿವೆ. ಸೀದು ಹೋದ ಬಯಕೆಗಳು ಹಳಹಳಿಕೆಯೂ ಇದೆ. ಸಣ್ಣದೊಂದು ನೋವ ತಂತಿಯೊಂದಿಗೇ ಮುನ್ನಡೆಯುವ ಧಾಡಸಿತನವಿದೆ. ಮೌನದ ನೇವರಿಕೆ ಇದೆ. ಸಾವು- ಬದುಕಿನ ಜಿಜ್ಞಾಸೆ ಇದೆ. ಸಾವಿಲ್ಲದ ನೆನಪ ವರಕ್ಕಾಗಿ ತಪನೆಯಿದೆ. ಬಗೆಬಗೆಯ ಭಾವ ಹೊತ್ತ ಸಂಕಲನಕ್ಕೆ ತಾಜಾತನದ ಸೊಂಪೂ ಇದೆ. ಅನಗತ್ಯ ಉಪಮೆ, ರೂಪಕಗಳ ಭಾರವಿಲ್ಲದ ನಿರಾಭರಣ ಕವನಗಳಿವು. ಸರಳ ಸಾಲುಗಳಲ್ಲೇ ಭಾವಾಭಿವ್ಯಕ್ತಿಗೆ ಹೊರಟಿರುವ ಈ ಪಯಣ ಸೌಮ್ಯಾ ಅವರಿಗೆ ನಿರಾಯಾಸದಾಯಕವಾಗಿರಲಿ -ವಿದ್ಯಾರಶ್ಮಿ ಪೆಲತ್ತಡ್ಕ
ಸೌಮ್ಯ ಅವರು ಮೂಲತಃ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹೂವಿನ ಹೊಳೆ ಗ್ರಾಮದವರು. ಪ್ರಸ್ತುತ ಹಾಲಿ ದಾವಣಗೆರೆ ನಗರದಲ್ಲಿ ವಾಸವಾಗಿದ್ದು, ಜಗಳೂರು ತಾಲ್ಲೂಕಿನ ದಿದ್ದಿಗೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕಿಯಾಗಿ ಕರ್ತವ್ಯದಲ್ಲಿದ್ದಾರೆ. 'ಮಾಸ್ತಿಯವರ ಸಣ್ಣ ಕಥೆಗಳಲ್ಲಿ ಸ್ತ್ರೀ ಸಂವೇದನೆ' ಎಂಬ ವಿಷಯದ ಬಗ್ಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಮಾಡುತ್ತಿದ್ದಾರೆ. ಬರವಣಿಗೆ ಅವರ ಹವ್ಯಾಸ. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಕವಿತೆ ಇವರ ಇಷ್ಟದ ಪ್ರಕಾರ. ಅನೇಕ ಕಡೆ ಇವರ ಕವಿತೆಗಳು ಪ್ರಕಟವಾಗಿವೆ. ಪುಟ್ಟ ಕಥೆಗಳನ್ನು ಪ್ರಭಾವಿಯಾಗಿ ಬರೆಯುವ ಅವರು ನಿರಂತರವಾಗಿ ...
READ MORE