‘ಮಣ್ಣಿಗೆ ಬಿದ್ದ ಹೂಗಳು’ ಲೇಖಕ ಬಿದಲೋಟಿ ರಂಗನಾಥ್ ಅವರ ಕವನ ಸಂಕಲನ. ಈ ಕೃತಿಗೆ ಕವಿ, ಸಂಸ್ಕೃತಿ ಚಿಂತಕ ಡಾ. ವಡ್ಡಗೆರೆ ನಾಗರಾಜಯ್ಯ ಅವರು ಬೆನ್ನುಡಿ ಬರೆದು ‘ಕಾವ್ಯವೆಂದರೆ ಎದೆಯ ದನಿಯ ಮೊರೆತ, ಕಣ್ಣ ಪಾಪೆಯ ಬೆಳಕು, ನೆಲದ ಸೊಗಡಿನ ಘಮಲು, ಅರ್ಥದ ಹಂಗು ಅಂಕುಶವಿಲ್ಲದೆ ಶಬ್ಧಶರೀರದಾಚೆಗೂ ಸ್ಫುರಿಸುವ ಭಾವ ಚಿಲುಮೆ. ರೂಪ ಮತ್ತು ಆಕೃತಿಗಳ ಮೀರಿದ ಅವರ್ಣನೀಯ ಘನ. ಕಾವ್ಯವನ್ನೇ ಉಸಿರಾಡಿ ಬದುಕುವ ಅನುಭಾವಿಗೆ ಕಾವ್ಯವೆಂದರೆ ನಿಜದ ನಡೆಯ ಬೆಡಗು’ ಎನ್ನುತ್ತಾರೆ.
ಕವಿಯು ಕಟ್ಟುವ ನುಡಿಯ ಗುಡಿ ಇವೆಲ್ಲವೂ ಮಣ್ಣಿಗೆ ಬಿದ್ದ ಹೂಗಳು ಕವನಸಂಕಲನದಲ್ಲಿ ಸಾಕಾರಗೊಂಡಿವೆ. ಹರಿವ ನೀರಿಗೆ ಮೈಯಲ್ಲಾ ಕಾಲು ಎಂಬ ಅಲ್ಲಮನ ವಚನದಂತೆ ಕವಿಯ ಎದೆಯ ದನಿಯ ತೀವ್ರ ಮೊರೆತವು ಶಬ್ಧಗಳ ಅರ್ಥದ ಹಂಗಿಗೆ ಒಳಗಾಗದಂತೆ ನೀರಿನಂತೆ ಹರಿದಿದೆ. ಕಾವ್ಯದ ರೆಕ್ಕೆ ಕಟ್ಟಿಕೊಂಡು ಅಸೀಮ ಮುಗಿಲೆತ್ತರ ಹಾರುವ ಹಕ್ಕಿಯಂತೆ ಬದುಕನ್ನುಅನುಭವಿಸಿ ತೀವ್ರವಾಗಿ ಕಾಡುವಂತೆ ಕಿಕ್ಕಿರದ ರೂಪಕಗಳಿಂದಲೂ ಪ್ರತಿಮೆಗಳಿಂದಲೂ ಇಲ್ಲಿಯ ಕವಿತೆಗಳನ್ನು ರೂಪಿಸಿದ್ದಾರೆ ಬಿದಲೋಟಿ ರಂಗನಾಥ್.
ಕವಿ ರಂಗನಾಥ ಬಿ.ಎಂ ಅವರು 1980 ಜುಲೈ 15 ರಂದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬಿದಲೋಟಿಯಲ್ಲಿ ಜನಿಸಿದರು. ವೃತ್ತಿಯಲ್ಲಿ ವಕೀಲರು. ‘ಮಣ್ಣಿಗೆ ಬಿದ್ದ ಹೂಗಳು’ ‘ಬದುಕು ಸೂಜಿ ಮತ್ತು ನೂಲು’, ಉರಿವ ಕರುಳದೀಪ ಹಾಗೂ 'ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ' ಎಂಬ ನಾಲ್ಕು ಕವನ ಸಂಕಲನಗಳು ಪ್ರಕಟವಾಗಿವೆ. ಅವರ ಕಾವ್ಯಕ್ಕೆ ‘ಸಂಕ್ರಮಣ’ ಬಹುಮಾನ ಹಾಗೂ ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ ಹಸ್ತಪ್ರತಿಗೆ 2020ನೇ ಸಾಲಿನ ರಾಜ್ಯ ಮಟ್ಟದ 'ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ' ಹಾಗೂ 'ಶಾಲೀನಿ ಪುರಸ್ಕಾರ' ಲಭಿಸಿವೆ. ...
READ MORE