ಜೀವನದಿಯ ತೆಪ್ಪದಲ್ಲಿ;ಕವಿ ಅಶ್ವತ್ಥ ಕಲ್ಲೇದೇವರಹಳ್ಳಿ ಅವರ ಕವನ ಸಂಕಲನ. ಒಟ್ಟು 51 ಕವಿತೆಗಳಿವೆ. ವಸ್ತು ವೈವಿಧ್ಯತೆ, ನಿರೂಪಣಾ ಶೈಲಿಯಿಂದ ಇಲ್ಲಿಯ ಕವಿತೆಗಳು ಓದುಗರ ಗಮನ ಸೆಳೆಯುತ್ತವೆ. ಕವಿಯು ತಮ್ಮ ಈ ಕವನ ಸಂಕಲನದಲ್ಲಿ ಪ್ರಸ್ತಾಪಿಸಿದಂತೆ ‘ಆಗ ತಾನೇ ಬದುಕು ಬಿಚ್ಚಿಕೊಳ್ಳುತ್ತಿದ್ದ ದಿನಗಳಲ್ಲಿ ಸಹಜ ಕುತೂಹಲಗಳೆಂಬಂತೆ ನನ್ನೊಂದಿಗೆ ಅಂಟಿಕೊಂಡು ಬಂದ ಬಣ್ಣ ಬಣ್ಣದ ಕನಸುಗಳು ನಿರೀಕ್ಷೆಗಳು ಭರವಸೆಗಳು ಬದುಕಿನ ಬಿಸಿಗೆ ಕರಗಲಾರಂಭಿಸಿದಾಗ ಕಂಡರಿಯದ ಬದುಕಿನ ಅನೇಕ ಮಜಲುಗಳು ಕಣ್ಮುಂದೆ ಧುತ್ತನೇ ತೆರೆದುಕೊಂಡವು. ಅಲ್ಲಿ ಅನುಭವಿಸಿದ ಹತಾಶೆ ನೋವು ನಿರಾಸೆಗಳು ನನ್ನಲ್ಲಿ ಉಂಟುಮಾಡಿದ ಗಾಯ ನನ್ನನ್ನು ತಲ್ಲಣಗೊಳಿಸಿತು. ಬದುಕಿನ ಬಗ್ಗೆ ನಾನು ಕಟ್ಟಿಕೊಂಡ ಆದರ್ಶದ ಹರಿಗೋಲು ಕೈತಪ್ಪಿ ನನ್ನ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿತ್ತು. ಅಂತಹ ಬದಲಾವಣೆಯ ಕಾಲಘಟ್ಟದಲ್ಲಿ ಸುಳಿ ಎಳೆದುಕೊಳ್ಳುವ ಕಡೆಗೇ ತೇಲಿಹೋಗುವ ಅನಿವಾರ್ಯತೆಯಲ್ಲಿ ನಾನೊಬ್ಬನೇ ಅನುಭವಿಸಿದ ಭಯ ಆತಂಕ ಅಸಹಾಯಕತೆ ನನ್ನನ್ನು ದಿಗ್ಬ್ರಮೆಗೊಳಿಸಿದವು. ನಿಜ ನನಗಾಗೇ ಒಂದಷ್ಟು ಕರುಣೆಯನ್ನು ಬಯಸಿದ್ದೆ. ಒಂದಷ್ಟು ಅನುಕಂಪ ಬಯಸಿದ್ದೆ. ನನ್ನದೇ ಬದುಕಿಗೆ ಅಂಗಲಾಚಿದ್ದೆ. ಆದರೆ ನನ್ನ ಸುತ್ತುವರಿದ ಪ್ರಪಂಚ ಹಾಗಿರದೇ ಅಪಹಾಸ್ಯ ಮಾಡುತ್ತದೆಂದು ತಿಳಿದ ಮೇಲೆ ಒಳಗೊಳಗೇ ನಾನು ನಿಧಾನವಾಗಿ ಬದುಕಿನ ಜಾಡು ಕಂಡುಕೊಂಡೆ. ಅಂತಹ ಅಸಹಾಯಕ ವಾತಾವರಣದಲ್ಲಿ ಒಂದೆಡೆ ಕೂತು ಹನಿಯಾಗಬಯಸಿದ್ದೆ. ಅಂತಹ ಹನಿಗಳನ್ನೇ ಒಂದೊಂದಾಗಿ ದಾಖಲಿಸುತ್ತಾ ಅವುಗಳನ್ನೇ ಕವಿತೆಗಳೆಂದು ಕರೆದೆ. ಸುಮಾರು ಹತ್ತನ್ನೆರಡು ವರ್ಷಗಳಿಂದಲೂ ಅಲ್ಲೊಂದು ಇಲ್ಲೊಂದು ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕವಿತೆಗಳು ಈಗ ಒಟ್ಟಾಗಿ ಪುಸ್ತಕ ರೂಪ ಪಡೆದಿದೆ ಎಂದು ಹೇಳಿಕೊಂಡಿದ್ದಾರೆ.
ಅಶ್ವತ್ಥಾಚಾರಿ ಕೆ.ಪಿ. (ಕಾವ್ಯನಾಮ: ಅಶ್ವತ್ಥ ಕಲ್ಲೇದೇವರಹಳ್ಳಿ) ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹಗಟಿ ಹೋಬಳಿಯ (ಜನನ: 15-01-1971) ಕಲ್ಲೇದೇವರಹಳ್ಳಿ ಗ್ರಾಮದವರು. ತಂದೆ ಪುಟ್ಟಾಚಾರ್, ತಾಯಿ ಜಯಮ್ಮ. ಭದ್ರಾವತಿಯ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಮೆಟಲರ್ಜಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಪದವೀಧರರು. ಶಿವಮೊಗ್ಗದ ಕುವೆಂಪು ವಿ.ವಿ.ಯಿಂದ (ದೂರ ಶಿಕ್ಷಣ) ಕನ್ನಡದಲ್ಲಿ ಎಂ.ಎ. ಪದವೀಧರರು. ಬೆಂಗಳೂರಿನ ಆಕ್ಸ್ ಫರ್ಡ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಇತರೆ ಭಾಷಿಕರಿಗೆ ಕನ್ನಡದ ತರಬೇತಿ ನೀಡುವುದು ಇವರ ಹವ್ಯಾಸ. ಬೆಂಗಳೂರು ಜಿಲ್ಲೆಯ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ...
READ MORE