‘ಅರಿವು ತೊರೆ’ ಕೃತಿಯು ಬೇಲೂರು ರಘುನಂದನ್ ಅವರ ಕಟ್ಟುಪದ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಅರವಿಂದ ಮಾಲಗತ್ತಿ ಅವರು, ಗುರುವನ್ನು ಉದ್ದೇಶಿಸಿ ಬರೆದ ಇಲ್ಲಿನ ವಚನಗಳೆಲ್ಲ ಗುರು ಸ್ವರೂಪಿಯಾಗಿವೆ. ಶಿಷ್ಯ ಸ್ವರೂಪಿಯಾಗಿ ನಿರೂಪಿಸಿದ ಧೋರಣೆ ಕವಿಯ ವಿನಯತೆಗೆ ಸಂಕೇತವಾಗಿದ್ದು, ಅಭಿವ್ಯಕ್ತಿ ಮತ್ತು ವೈಚಾರಿಕತೆಯಲ್ಲಿ ಪ್ರೌಢಿಮೆಯನ್ನು ಹೊಂದಿದೆ. ದಿನಕ್ಕೊಂದರಂತೆ ಬರೆದ ಇಲ್ಲಿನ ವಚನಗಳು ದಿನಮಣಿಯಂತೆ ಶೋಭಾಯಮಾನವಾಗಿವೆ. ವರ್ತಮಾನದ ಸಮಸ್ಯೆಗಳಿಗೆ ಮೈಗೊಡುತ್ತ ಸಾಮಾಜಿಕ ಪ್ರಜ್ಞೆಯಿಂದ ಬೆಳಗಿವೆ. ಪಾಪಪ್ರಜ್ಞೆ ಇರುವ ವ್ಯಕ್ತಿಗಳಿಗೆ ಸೂಜಿಯಂತೆ ಚುಚ್ಚಿ ಎಚ್ಚರಿಸುವ, ತಿದ್ದುವ ತೀಡುವ ಗುಣವನ್ನು ಹೊಂದಿವೆ. ಲಯಕ್ಕಿಂತ ವೈಚಾರಿಕತೆಯನ್ನು ಮೈಗೂಡಿಸಿಕೊಂಡಿವೆ. ಕನ್ನಡ ಸಾಹಿತ್ಯದಲ್ಲಿ ವಚನ ಪ್ರಕಾರದ ಹೆಜ್ಜೆಗಳು ಮಾಸಿಲ್ಲ ಎನ್ನುವುದನ್ನು ಬೇಲೂರು ರಘುನಂದನ್ ಅವರ ಈ ಸಂಕಲನ ನೆನಪಿಸುತ್ತದೆ’ ಎಂದು ಪ್ರಶಂಸಿಸಿದ್ದಾರೆ.
ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವೀಧರರು.ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ದೇಜಗೌ ಅವರ ಅನಲಾ ಮತ್ತು ದುಷ್ಟಬುದ್ದಿ ನಾಟಕಗಳು’ ವಿಷಯವಾಗಿ ಎಂ.ಫಿಲ್ ಮತ್ತು ಕನ್ನಡ ರಂಗಭೂಮಿ ಮತ್ತು ಸಿನಿಮಾ: ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು’ ವಿಷಯವಾಗಿ ಪಿಎಚ್ ಡಿ ಪದವೀಧರರು. ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ ನಾಟಕ ಪುಸ್ತಕಗಳು ಪ್ರಕಟಗೊಂಡಿವೆ.. ಬೇಲೂರಿನ ಗಮಕ ವಿದ್ವಾನ್ ಬಿ.ಕೆ. ವನಮಾಲಾ ಅವರ ಮಾರ್ಗದರ್ಶನದಲ್ಲಿ ಪಾರೀಣ (ಸೀನಿಯರ್) ಪ್ರಥಮ ದರ್ಜೆಯಲ್ಲಿ ಗಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ...
READ MORE