ಅರ್ಥವಿದೆಯೆ ವಿದಾಯಕ್ಕೆ

Author : ಸಂತೋಷ ಚೊಕ್ಕಾಡಿ

Pages 68

₹ 110.00




Year of Publication: 2023
Published by: ಸುಬೋಧಿನಿ ಪ್ರಕಾಶನ
Address: #ನಲ್ಮನೆ, 13ನೇ ಕ್ರಾಸ್, ಗಂಗೋತ್ರಿ ಲೇ-ಔಟ್, ಮೈಸೂರು
Phone: 9480020003

Synopsys

ಒಟ್ಟು 27 ಕವಿತೆಗಳನ್ನು ಒಳಗೊಂಡ ಈ ಕವನ ಸಂಕಲನ ಕವಿ ಸಂತೋಷ ಚೊಕ್ಕಾಡಿಯವರ ನಾಲ್ಕನೆಯ ಕವನ ಸಂಕಲನ. ಬದುಕನ್ನು ನಿಸರ್ಗದಷ್ಟೇ ಸಹಜವಾಗಿ ನೋಡುವ ಕವಿ ಮನಸ್ಸು ಹೊಮ್ಮಿಸಿರುವ ಕಾವ್ಯ ಗುಚ್ಛ ಈ ಸಂಕಲನ. ಇಲ್ಲಿನ ಕವಿತೆಗಳಲ್ಲಿ ಪ್ರಕೃತಿಯನ್ನು ಸಮಕಾಲೀನ ಸಮಾಜದೊಂದಿಗೆ ಸಂವಾದಿಸುವ ಕ್ರಿಯೆಯಾಗಿ ಕವಿ ಕಾಣುತ್ತಾರೆ. ಕಳೆದು ಹೋದ ಕಾಲವನ್ನು ಹಳಹಳಿಕೆಯಿಂದ ನೋಡದೆ ಮುಂದಿನ ಹಾದಿಯ ಆಶಾಭಾವನೆಯಿಂದ ಕಾಣುತ್ತಾರೆ. ಕವನ ಸಂಕಲನಕ್ಕೆ ಹಿರಿಯ ವಿಮರ್ಶಕರಾದ ಲಕ್ಷ್ಮೀಶ ತೋಳ್ಪಾಡಿ ಮುನ್ನುಡಿ ಬರೆದಿದ್ದು, ಕವಿ, ಚಿಂತಕ ಕೆ.ಪಿ. ಸುರೇಶ ಬೆನ್ನುಡಿ ಬರೆದಿದ್ದಾರೆ.

About the Author

ಸಂತೋಷ ಚೊಕ್ಕಾಡಿ

ಲೇಖಕ ಡಾ. ಸಂತೋಷ ಚೊಕ್ಕಾಡಿ ಮೂಲತಃ ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಚೊಕ್ಕಾಡಿಯವರು.  ಕೃತಿಗಳು: ಪ್ರಾತಃ ಕಾಲದ ಪದ್ಯಗಳು (ಕವನ ಸಂಕಲನ), ದಕ್ಷಿಣ ಕನ್ನಡ ಕಾವ್ಯದ ವಿಭಿನ್ನ ನೆಲೆಗಳು  ...

READ MORE

Excerpt / E-Books

ಅರ್ಥವಿದೆಯೇ ವಿದಾಯಕ್ಕೆ ಹೊರಟು ಹೋಗಿದ್ದಾರೆ ಒಬ್ಬೊಬ್ಬರೂ ತಮ್ಮ ಕೆಲಸ ಮುಗಿಯಿತೆಂಬಂತೆ ಸಂಬಂಧದ ಎಲ್ಲ ಕುರುಹುಗಳ- ನಳಿಸುತ್ತ ಯಾವುದೋ ಅವಸರದಲ್ಲಿ; ಕೈಲಿದ್ದ ಪೆನ್ನು, ಎದುರಿದ್ದ ಪುಸ್ತಕ, ಅರ್ಧ ಬರೆದಿಟ್ಟ ಕವಿತೆ ಭವಿಷ್ಯದ ಯೋಜನೆಯ ನೂರು ಪತ್ರಗಳು ಎಲ್ಲ ಅನಾಥವೀಗ ವಾರಸುದಾರರಿಲ್ಲದೆ. ಹೊರಗೆ ಗಾಳಿ ಬೀಸುತ್ತಲೇ ಇದೆ, ಮರ ಚಿಗುರುತ್ತಲೇ ಇದೆ, ಹಾರಿದ ಹಕ್ಕಿ ಸಾಗುತ್ತಿದೆ ಗೂಡಿನ ಕಡೆಗೆ, ಕಡಲಲ್ಲಿ ಏರಿಳಿತ, ಆಕಾಶದಲ್ಲಿ ಮಿಂಚು, ಸೂರ್ಯ ಚಂದ್ರ ತಾರೆಗಳೆಲ್ಲ ತಮ್ಮ ಎಂದಿನ ದೈನಂದಿನ ದಿನಚರಿಯಲ್ಲಿ ಬದುಕಿವೆ ಆಗಮನ-ನಿರ್ಗಮನ ವೆಂಬ ವ್ಯತ್ಯಾಸವಿರದ ಅನುಭವ ವಿಶೇಷದಲ್ಲಿ. ಎಲ್ಲ ಒಂದಾದ ಪ್ರಕ್ರಿಯೆಯಲ್ಲಿ ಅರ್ಥವಿದೆಯೇ ವಿದಾಯಕ್ಕೆ? ಮದ್ದಿದೆಯೆ ನೆಕ್ಕುತ್ತಲೇ ಇರುವ ನೋವಿನ ಗಾಯಕ್ಕೆ?

Reviews

ಚೊಕ್ಕಾಡಿಯವರ ಕಾವ್ಯ, ಮಾತಿನಿಂದ ಮೌನದ ದಿಕ್ಕಿನತ್ತ ನಡೆಯುತ್ತಿರುವುದು ನಿಜ. ಆದರೆ ಮೌನದಲ್ಲಿ ಕಾಲ-ದೇಶಗಳ ಗುರುತು ಅಳಿಯುವ ವಿಹ್ವಲತೆ ಕಾವ್ಯಕ್ಕೆ ಎದುರಾಗಿರುವುದೂ ನಿಜ. ಆದುದರಿಂದಲೇ ಪಾಂಗಾಂಗ್ ಸರೋವರವನ್ನು ವರ್ಣಿಸುತ್ತ ಇಲ್ಲಿ ಹಕ್ಕಿಗಳ ಕಾಣಲಾರೆವು, ಮೀನುಗಳ ನೋಡಲಾರೆವು ಎನ್ನುವರು. ಇದು ಗುರುತು! ಆದರೆ, ಕೊಳ, ಸೂರ್ಯನನ್ನೂ ಬೆಟ್ಟಗಳನ್ನೂ ಪ್ರತಿಫಲಿಸುತ್ತ ಎಲ್ಲ ತಾನೇ ಆದ ಕೊಳ ಎನ್ನುವರು. ಸೂರ್ಯ; ಸೂರ್ಯನಲ್ಲ, ಬೆಟ್ಟ; ಬೆಟ್ಟವಲ್ಲ ಎಂದಂತೆ ಕೊಳ; ಕೊಳವಲ್ಲ ಎನ್ನಲಾರರು! ಪಾಂಗಾಂಗ್ ಸರೋವರ ಎಂದು ಹೆಸರು ಹಿಡಿದೇ ಕರೆಯುವರು. ಈ ಕರೆ ಇಷ್ಟವಾಯಿತು.
ಕಾಲವನ್ನು ಕಳ್ಳ ಬೆಕ್ಕು ಎನ್ನುವರು. (ಭರವಸೆ) ತನ್ನ ಮೈ-ಮನಗಳ ಮೇಲೆ ಅದರ ಪ್ರಭಾವವನ್ನು ಗುರುತಿಸುವರು. ಮಾತಿಗೆ ಸಿಕ್ಕಿದರೆ ಕಾಲವನ್ನು ವಾದದಲ್ಲಿ (ವಾದದಲ್ಲಿಯಾದರೂ) ಗೆಲ್ಲುವ ಆಸೆ ಎನ್ನುವರು. ಈ ಗೆಲುವನ್ನು ಕಾಲವೇ ಕರುಣಿಸಬೇಕಷ್ಟೆ! ಎಂಬ ಧ್ವನಿಯೊಂದು ಅಸ್ಪಷ್ಟವಾಗಿಯಾದರೂ ಕೇಳಿಸುತ್ತದೆ!

-ಲಕ್ಷ್ಮೀಶ ತೋಳ್ಪಾಡಿ

Related Books