‘ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ’ ಕವಿ ಬಿದಲೋಟಿ ರಂಗನಾಥ್ ಅವರ ಕವನ ಸಂಕಲನ. ಇದು ಕವಿ ಗವಿಸಿದ್ಧ ಎನ್. ಬಳ್ಳಾರಿ ರಾಜ್ಯಮಟ್ಟದ ಕಾವ್ಯ ಪ್ರಶಸ್ತಿ ಪುರಸ್ಕೃತ ಕೃತಿಯಾಗಿದೆ. ಈ ಪ್ರಶಸ್ತಿ ಸಮಿತಿಯ ತೀರ್ಪುಗಾರರಾದ ಹಿರಿಯ ಕವಿ ಈಶ್ವರ ಹತ್ತಿ ಅವರು ಇಲ್ಲಿನ ಕವಿತೆಗಳ ಕುರಿತು ಬರೆಯುತ್ತಾ.. ‘ಅದೆಷ್ಟೇ ಮಹೋನ್ನತ ಕಾವ್ಯ ಎಂದಾಗಲೂ ಕಾವ್ಯವು ತನ್ನ ಅಪಾರತೆ, ರಚನೆಯ ಅದರಾಚೆಗಿನ ದಿಗಂತದಲ್ಲಿ ತುಟಿ ಬಿಚ್ಚದ ಮೌನರಾಗದಲ್ಲಿ ಉಳಿದು ಬಿಡುತ್ತದೆ ಎಂಬುದೇ ಸತ್ಯ. ಯಾವ ಕವಿಗಾದರೂ, ಹೇಳಬೇಕೆನಿಸಿದ್ದು ಕಾವ್ಯದ ಪೂರ್ಣತ್ವದಲ್ಲಿ ಅಭಿವ್ಯಕ್ತಗೊಂಡಿದೆಯೆ ಎಂಬ ಅನುಮಾನ ಕಾಡದಿರದು. ಬಿದಲೋಟಿ ರಂಗನಾಥ್ ಕವಿತೆಗಳಲ್ಲಿ ಅಂತಹದ್ದೊಂದು ಮನಸ್ಥಿತಿ ಇರುವುದು ರುಜುವಾತು ಆಗುತ್ತದೆ ಎನ್ನುತ್ತಾರೆ’. ಜೊತೆಗೆ ತನ್ನ ಕಾವ್ಯವನ್ನು ಸಂಭ್ರಮಿಸುವಾತ ವಾಡಿಕೆಯ ಕವಿ. ಪರ್ಯಾಯವಾಗಿ ಚಿಂತಿಸಿ, ಕವಿತ್ವದ ಪೂರ್ಣತ್ವದ ದರ್ಶನಕ್ಕಾಗಿ ಹಾತೊರೆಯುವಾತ ನಿಜ ಕವಿ. ಇಲ್ಲಿನ ಕವಿತೆಗಳನ್ನು ಓದುತ್ತಿದ್ದಂತೆ, ಹೀಗೊಂದು ಕಾವ್ಯ ದೃಷ್ಟಿಯಿರುವುದು ನಿಚ್ಚಳವಾಗಿದೆ.
ಒಟ್ಟು ಕವಿತೆಗಳಲ್ಲಿ ವಸ್ತು, ಅಭಿವ್ಯಕ್ತಿ, ಆಶಯ ಇವುಗಳಲ್ಲಿ ಒಂದು ರೀತಿಯ ತಹತಹಿಕೆ ಇರುವುದು ಗಮನಾರ್ಹ, ಬಹುತೇಕ ಕವಿತೆಗಳು ಒಳಮನಸ್ಸಿನ ಪ್ರಶ್ನೆ ಮತ್ತು ತಣ್ಣಗಿನ ಪ್ರತಿಭಟನೆಯಲ್ಲಿ ಹುಟ್ಟಿಕೊಳ್ಳುತ್ತವೆ. ಸಂಕಟ, ನೋವು, ಅವಮಾನ, ಬಡತನ, ಹಸಿವು, ಕೀಳಿರಿಮೆ, ಹುಸಿನಂಬಿಕೆ, ಮೌಢ್ಯ ಮುಂತಾಗಿ ಅವುಗಳ ಸುಳಿಯಲ್ಲಿ ತೆವಳುತ್ತಾ, ಕರಾಳ ವ್ಯವಸ್ಥೆಯತ್ತ ಬೊಟ್ಟು ಮಾಡಿವೆ. ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಕವಿ ರಂಗನಾಥ ಬಿ.ಎಂ ಅವರು 1980 ಜುಲೈ 15 ರಂದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬಿದಲೋಟಿಯಲ್ಲಿ ಜನಿಸಿದರು. ವೃತ್ತಿಯಲ್ಲಿ ವಕೀಲರು. ‘ಮಣ್ಣಿಗೆ ಬಿದ್ದ ಹೂಗಳು’ ‘ಬದುಕು ಸೂಜಿ ಮತ್ತು ನೂಲು’, ಉರಿವ ಕರುಳದೀಪ ಹಾಗೂ 'ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ' ಎಂಬ ನಾಲ್ಕು ಕವನ ಸಂಕಲನಗಳು ಪ್ರಕಟವಾಗಿವೆ. ಅವರ ಕಾವ್ಯಕ್ಕೆ ‘ಸಂಕ್ರಮಣ’ ಬಹುಮಾನ ಹಾಗೂ ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ ಹಸ್ತಪ್ರತಿಗೆ 2020ನೇ ಸಾಲಿನ ರಾಜ್ಯ ಮಟ್ಟದ 'ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ' ಹಾಗೂ 'ಶಾಲೀನಿ ಪುರಸ್ಕಾರ' ಲಭಿಸಿವೆ. ...
READ MORE