ಡಿ.ಬಿ. ರಜಿಯಾ ಅವರ ಕವನ ಸಂಕಲನ ‘ಕಳೆದು ಹೋಗುತ್ತೇನೆ’. ಈ ಸಂಕಲನಕ್ಕೆ ಹಿರಿಯ ಸಾಹಿತಿ ಜಿ.ಎಸ್. ಶಿವರುದ್ರಪ್ಪ ಅವರ ಬೆನ್ನುಡಿ ಬರಹವಿದೆ. ಸಂಕಲನದ ಕುರಿತು ಬರೆಯುತ್ತಾ ‘ಇಲ್ಲಿರುವುದು ಮುಖ್ಯವಾಗಿ ಕವಿಮನಸ್ಸೊಂದು ತನ್ನ ಬಹಿರಂಗ ಜಗತ್ತಿಗೆ ಸ್ಪಂದಿಸಿದ ಅಥವಾ ಪ್ರತಿಕ್ರಿಯಿಸಿದ ಕ್ರಮಕ್ಕಿಂತ ಭಿನ್ನವಾದ ನೆಲೆಯಲ್ಲಿ, ತನ್ನೊಳಕ್ಕೇ ತಾನು ಇಳಿದು, ತನ್ನ ಅಂತರಂಗವನ್ನು ನಿರೀಕ್ಷಿಸಿಕೊಳ್ಳುವ ಹಾಗೂ ಪರೀಕ್ಷಿಸಿಕೊಳ್ಳುವ ಅಂತರ್ಮುಖೀ ಕವಿಯ ಒಂದು ಮಾದರಿ. ಮುಗ್ಧವಾದ ಮತ್ತು ಸೂಕ್ಷ್ಮವಾದ ಮನಸ್ಸೊಂದು, ತನ್ನ ಒಳ ಜಗತ್ತಿನಲ್ಲಿ ಮುಖಾಮುಖಿಯಾದ ಸಮಸ್ಯೆ, ಸವಾಲು ಹಾಗೂ ಆತಂಕಗಳ ಪರಿಣಾಮವಾದ ಸಂಘರ್ಷಗಳ ನಡುವೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪಟ್ಟ ಪಾಡುಗಳನ್ನೂ, ಕಟ್ಟಿಕೊಂಡ ಕನಸುಗಳನ್ನೂ ಇಟ್ಟುಕೊಂಡ ಅವಲಂಬನೆಗಳನ್ನೂ ಇಲ್ಲಿನ ಕವಿತೆಗಳು ಅಭಿವ್ಯಕ್ತಿಸುತ್ತವೆ. ಒಂದು ರೀತಿಯಲ್ಲಿ ಇದು ಅಂತರ್ನಿರೀಕ್ಷಣೆ ಹಾಗೂ ಶೋಧನೆಯ ಪ್ರಕ್ರಿಯೆಯೂ ಹೌದು. ಬದುಕು ಮಾಗುವ ಕ್ರಮವೇ ಹೀಗೆ. ಈಗಾಗಲೇ ತಮ್ಮ ಮೊದಲ ಕವನ ಸಂಗ್ರಹ ಛಾಯೆಯ ಮೂಲಕ ಕನ್ನಡ ಕಾವ್ಯಾಸಕ್ತರಿಗೆ ಪರಿಚಿತರಾಗಿರುವ ಶ್ರೀಮತಿ ರಜಿಯಾ ಅವರು ಪ್ರಸ್ತುತ ಕವನ ಸಂಗ್ರಹದ ಕವಿತೆಗಳಲ್ಲಿ ಪ್ರಕಟವಾಗುವ ತಾತ್ವಿಕ ಅನ್ವೇಷಣೆಯಿಂದಾಗಿ, ತಮ್ಮ ಕವಿತೆಯ ಹೊಸ ಸಾಧ್ಯತೆಗಳನ್ನು ತೆರೆದು ತೋರಿದ್ದಾರೆ’ ಎಂದು ಜಿ.ಎಸ್. ಶಿವರುದ್ರಪ್ಪನವರು ಭರವಸೆಯ ಮಾತುಗಳನ್ನಾಡಿದ್ದಾರೆ.
ಡಿ. ಬಿ. ರಜಿಯಾ ಮೂಲತಃ ಬಳ್ಳಾರಿ ಜಿಲ್ಲೆಯ ಹಿರೇಕಾಳಿನವರು. 1954 ಜನವರಿ 26ರಂದು ಜನನ. ತಂದೆ ಹೆಚ್. ಇಬ್ರಾಹಿಂ, ತಾಯಿ ಸಕೀನಾ ಬೇಗಂ. ‘ಛಾಯೆ, ಕಳೆದು ಹೋಗುತ್ತೇವೆ, ಋತು’ ಎಂಬ ಹನಿಗವನಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆಯಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ‘ವಾಸ್ತವದ ಕನವರಿಕೆ’ ಅವರ ಕಥಾ ಸಂಕಲನವಾಗಿದೆ. ಅವರಿಗೆ ಡಾ. ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿ ಬಹುಮಾನ, ಕರಾವಳಿ ಲೇಖಕಿಯರು ವಾಚಕಿಯರ ಸಂಘದ ಕೃಷ್ಣಬಾಯಿ ದತ್ತಿ ಬಹುಮಾನ, ಅಮ್ಮ ಪ್ರಶಸ್ತಿ, ಮಾತೃಶ್ರೀ ರತ್ನಮ್ಮ ಹೆಗಡೆ ಬಹುಮಾನ , ಹರಿಹರಶ್ರೀ ಪ್ರಶಸ್ತಿ, ...
READ MORE