ಕವಯತ್ರಿ ಸವಿತಾ ನಾಗಭೂಷಣ ಅವರ ರೈತ ಗೀತೆಗಳ ಸಂಕಲನ-ಕಡೇ ಮಾತು.. ಇಲ್ಲಿಯ ಗೀತೆಗಳು ರೈತರ ದಾರುಣ ಬದುಕು, ಮುಂದುವರಿದ ಆರ್ಥಿಕ ಶೋಷಣೆ, ಸಾಲದ ಶೂಲದಲ್ಲಿ ಭವಿಷ್ಯದ ಭರವಸೆ ಕಳೆದುಕೊಂಡ ದಯನೀಯ ಸ್ಥಿತಿ, ಇತಿಹಾಸದಿಂದ ಪಾಠ ಕಲಿಯಬೇಕು ಎಂಬ ಆಶಯ ಹೀಗೆ ರೈತರ ಬದುಕನ್ನು ಪ್ರತಿನಿಧಿಸುವ ಗೀತೆಗಳು ಈ ಕೃತಿಯ ಜೀವಾಳವಾಗಿವೆ. ಕೃಷ್ಣಮೂರ್ತಿ ಹನೂರು ಅವರ ‘ಹರನೆಂಬುದೇ ಸತ್ಯ’ ಎಂಬ ಕೃತಿ ಖರೀದಿಸಿದರೆ ಇದರ ಜೊತೆಗೆ ‘ಕಡೇ ಮಾತು’ (ರೈತ ಗೀತೆಗಳ ಸಂಕಲನ) ಕೃತಿಯನ್ನು ಉಚಿತವಾಗಿ ನೀಡುವುದಾಗಿ ಪ್ರಕಾಶಕರು ಪುಸ್ತಕದಲ್ಲೇ ಸ್ಪಷ್ಟಪಡಿಸಿದ್ದಾರೆ.
ಲೇಖಕಿ ಸವಿತಾ ನಾಗಭೂಷಣ ಅವರು ತಮ್ಮ ಮಾತುಗಳಲ್ಲಿ ‘ತೊಂಭತ್ತರ ದಶಕದಲ್ಲಿ ಅನೇಕ ಅಂತಾರಾಷ್ಟ್ರೀಯ ವ್ಯಾಪಾರ ಒಪ್ಪಂದಗಳಿಗೆ ನಿರ್ವಾಹವಿಲ್ಲದೆ ಸಹಿ ಹಾಕಿರುವ ನಮ್ಮ ನೇತಾರರ ಅಸಹಾಯಕತೆಯ ಫಲವೇ ಈ ಹೊತ್ತಿನ ಕೃಷಿ ಕಾಯಿದೆಗಳಿರಬಹುದು. ಇದನ್ನು ನಿವಾರಿಸಿಕೊಳ್ಳುವ ಬಗೆಯೂ ಕಾಣದು. ನಾಳೆ ದಿನ ನಮ್ಮ ರೈತನನ್ನು ಪರದೇಶಿ ಹಂದಿ, ಹಸು, ಕುರಿ, ಕೋಳಿಗಳಿಗೆ ಬರೀ ಹಿಂಡಿ ಮೇವು ಮಾತ್ರ ಬೆಳೆಯುವಷ್ಟಕ್ಕೇ ಸೀಮಿತಗೊಳಿಸಿಬಿಡುತ್ತಾರೋ ಏನೋ. ಐ.ಟಿ. ಕೂಲಿಗಳಂತೆಯೇ ರೈತಕೂಲಿಗಳು ಮುಂದಿನ ದಿನಗಳಲ್ಲಿ ಕೈತುಂಬಾ ದುಡ್ಡು ಸಂಪಾದಿಸಬಹುದು. ಆದರೆ ನೆಮ್ಮದಿ? ರೈತ ಪರಾಧೀನನಾಗುವುದೆಂದರೆ ಇಡೀ ದೇಶವೇ ಪರಾಧೀನವಾದಂತೆ. ಈ ಹೊತ್ತು ನಮ್ಮ ದೇಶದ ಗೋದಾಮಿನಲ್ಲಿ ಕೊಳತು/ಹುಳಿತು ಹೋಗುವಷ್ಟು ಕಾಳುಕಡಿ ಇವೆ. ನಾಳೆ? ರೈತರ ಈ ಆತಂಕ ನನ್ನವೂ ಆಗಿ ‘ಕಡೇ ಮಾತು” ಮೂಡಿದೆ’ ಎಂದು ಕೃತಿಯ ಒಟ್ಟು ಸ್ವರೂಪ ಹಾಗೂ ಆಶಯವನ್ನು ಸ್ಪಷ್ಟಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಜನಿಸಿದ ಸವಿತಾ ನಾಗಭೂಷಣ ಅವರು ಬೆಳೆದದ್ದು ಮತ್ತು ಶಿಕ್ಷಣ ಪಡೆದದ್ದು ಶಿವಮೊಗ್ಗದಲ್ಲಿ. ಮಲೆನಾಡಿನ ಅನುಭವದ ಹಿನ್ನೆಲೆಯಲ್ಲಿ ಅವರ ಬಹಳಷ್ಟು ಕವಿತೆಗಳಲ್ಲಿ ಗಿಡ-ಮರ, ಹಸಿರು-ಹೂ-ಹಣ್ಣು ಮತ್ತು ಹೊಳೆ-ಮಳೆ- ಮೋಡಗಳ ಜೀವಂತ ರೂಪಕ ಒಳಗೊಂಡಿರುತ್ತವೆ. ವರ್ತಮಾನದ ಮನುಷ್ಯನ ಆಳದ ಸಂತೋಷ-ನೆಮ್ಮದಿ, ದುಃಖ- ವಿಷಾದಗಳನ್ನು ಅಂತಃಕರಣಪೂರ್ವಕವಾಗಿ ದಾಖಲಿಸುತ್ತವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾವ್ಯಕ್ಕಾಗಿ ನೀಡುವ ಪ್ರಶಸ್ತಿ ಪಡೆದ ಮೊದಲ ಕವಯತ್ರಿಯಾದ (ನಾ ಬರುತ್ತೇನೆ ಕೇಳು) ಸವಿತಾ ಅವರ ಎಲ್ಲ ಸಂಕಲನಗಳಿಗೆ ವಿವಿಧ ಸಂಘ-ಸಂಸ್ಥೆಗಳ ಬಹುಮಾನ -ಪ್ರಶಸ್ತಿ ಸಂದಿವೆ. ಅವರ ವಿಶಿಷ್ಟ ಕಾದಂಬರಿ ’ಸ್ತ್ರೀಲೋಕ’ಕ್ಕೆ ಎಂ.ಕೆ. ಇಂದಿರಾ ಮತ್ತು ಬಿ.ಎಚ್. ಶ್ರೀಧರ್ ...
READ MORE