ಸಾಹಿತಿ ಶ್ರೀದೇವಿ ಕಳಸದ ಅವರ ‘ಹಾಡಾಗದ ಸಾಲುಗಳು’ ಕೃತಿಯು ಕವನಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಯು. ಆರ್. ಅನಂತಮೂರ್ತಿ ಅವರು, ಕವನಗಳು ಇಲ್ಲಿ ಒಂದೊಂದು ಚಿತ್ರದ ಮೂಲಕ ಬೆಳೆದು ಸಾರ್ಥಕವಾಗುತ್ತಾ ಹೋಗುತ್ತವೆ. ಒಂದು ಚಿತ್ರದಿಂದ ಇನ್ನೊಂದು ಚಿತ್ರದ ಜೊತೆ ಕವಿತೆ ಬೆಳೆಯಬೇಕಾದರೆ ಅರ್ಥ ಅಥವಾ ಚಿತ್ರದ ದೃಶ್ಯ ಅಥವಾ ಶ್ರವ್ಯ ಕೊಂಡಿಗಳು ಅವಶ್ಯಬೇಕು. ಕಾವ್ಯಕ್ಕೆ ಒಗಟನ್ನು ಬಿಡಿಸುವ ಸಾಧ್ಯತೆ ಇರಬೇಕು. ಬಿಡಿಸಲು ಆಗದಿದ್ದರೆ ಅವು ಬಿಡಿಸುವಂತೆ ನಮ್ಮನ್ನು ಕಾಡುವಂತೆಯಾದರೂ ಇರಬೇಕು. ಒಳ್ಳೆಯ ಕವಿತೆ ಯಾವಾಗಲೂ ತನ್ನ ಮೂಲ ಮಾತಿನತ್ತಲೇ ನಮ್ಮ ಗಮನ ಸೆಳೆಯುತ್ತದೆ. ಹೀಗಾಗುವುದು ಯಾವಾಗ? ಅಂದಿದ್ದು ಸ್ವಲ್ಪ ಅರ್ಥವಾಗಿರಬೇಕು. ಸ್ವಲ್ಪ ಆಗಿರಬಾರದು. ಆಗ ಶಬ್ದಕ್ಕೆ ಕಾವ್ಯಗುಣ ಬರುತ್ತದೆ. ಪದ್ಯ ಚೂರು ಅನಿರೀಕ್ಷಿತವಾಗಿಯೂ ಮತ್ತು ಅನಿವಾರ್ಯವಾಗಿಯೂ ಇರಬೇಕು.ಇಂತಹ ಎಲ್ಲಾ ವಿಚಾರಗಳನ್ನು ಈ ಕೃತಿಯು ಒಳಗೊಂಡಿದೆ’ ಎಂದು ಪ್ರಶಂಸಿಸಿದ್ದಾರೆ.
ಶ್ರೀದೇವಿ ಕಳಸದ ಅವರು ಲೇಖಕಿ ಹಾಗೂ ಪರ್ತಕರ್ತೆ. ತಂದೆ ಡಾ. ದೇವದಾಸ ಕಳಸದ, ತಾಯಿ-ಕೌಸಲ್ಯ ಕಳಸದ .ಜನನ 25-08-1981 ರಂದು. ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಹಿಂದೂಸ್ತಾನಿ ಸಂಗೀತ ಕಲಾವಿದೆ. ಸಂಗೀತ ಶಿಕ್ಷಕಿಯಾಗಿ ಪಾಠ ಹೇಳಿ ಕೊಡುತ್ತಾರೆ. ಭಾವಗೀತೆಗಳಿಗೆ ಸ್ವರ-ಸಂಯೋಜಿಸಿ ಹಾಡುವುದು ಹಾಗೂ ಕಾರ್ಯಕ್ರಮ ನಿರೂಪಕಿಯೂ ಹೌದು. ಚಿತ್ರಕಲೆ ಇವರ ಹವ್ಯಾಸ. ಹಿನ್ನೆಲೆ ಧ್ವನಿ, ಸ್ಕ್ರಿಪ್ಟಿಂಗ್, ಕಾನ್ಸೆಪ್ಟ್ ಕ್ರಿಯೇಷನ್, ಇಲ್ಲಸ್ಟ್ರೇಷನ್ ವಲಯದಲ್ಲಿ ಜಾಣ್ಮೆ ಇದೆ. ಹಾಡಾಗದ ಸಾಲುಗಳು -ಇವರ ಮೊದಲ ಕವನ ಸಂಕಲನ. ಮೈಸೂರು ವಿವಿಯ ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಯೋಜನೆಗೆ ‘ನೀರು ಹೇಳುವ ನೀರೆಯರ ಕಥೆಗಳು’ ವಿಷಯವಾಗಿ ಸಂಶೋಧನೆ ನಡೆಸುತ್ತಿದ್ದಾರೆ. ...
READ MORE