ಹೊಸ ತಲೆಮಾರಿನ ಕವಯತ್ರಿ ಮಂಜುಳಾ ಹುಲಿಕುಂಟೆ ರಚಿಸಿರುವ ’ದೀಪದುಳುವಿನ ಕಾತರ’ ಹೊಸ ತಲೆಮಾರಿನ ಯುವಕ ಯುವತಿಯರ ತವಕ, ತಲ್ಲಣಗಳು ಮತ್ತು ಆತಂಕಗಳನ್ನು ಒಳಗೊಂಡಿದೆ. ಪುಸ್ತಕದ ಮುನ್ನುಡಿಯನ್ನು ಹಿರಿಯ ಸಾಹಿತಿ, ವಿಮರ್ಶಕ, ನಾಟಕಕಾರ ಕೆ.ವೈ ನಾರಾಯಣಸ್ವಾಮಿ ಬರೆದಿದ್ದು, 'ಈ ಪುಸ್ತಕ ಯುವತಲೆಮಾರಿನ ಕುರಿತು ನಾನು ಹೊಂದಿದ್ದ ಅಭಿಪ್ರಾಯವನ್ನು ಬದಲಿಸಿದೆ' ಎನ್ನುತ್ತಾರೆ.
ಕವಿತೆಗಳಲ್ಲಿ ಅಕ್ಕಮಹಾದೇವಿಯ ಛಾಪು ಇದ್ದು, ಗಾಲಿಬ್ ಕವಿತೆಯ ಭಾಷೆಯಾಗಿದ್ದಾನೆ. ಹಲವು ಕವಿತೆಗಳು ಸ್ವಗತಗಳ ರೀತಿ ಇದ್ದರೆ, ಇನ್ನು ಕೆಲವು ಕವಿತೆಗಳು ಗಾಲಿಬ್ ಜೊತೆ ನಡೆಸುವ ಸಂವಾದದಂತಿವೆ. ಬದುಕಿನ ದಟ್ಟ ವಿಷಾದವನ್ನು ನಿರೂಪಿಸುವಾಗಲೂ ಮಾತು, ಭಾಷೆ ಪ್ರಯೋಗದಲ್ಲಿ ನವಿರುತನವಿದೆ. ಮಹಿಳಾವಾದದ ಅರಿವಿರುವ ಲೇಖಕಿ ತನ್ನ ನೋವು, ಅವಮಾನಗಳಿಗೆ ಮಹಿಳಾವಾದದ ಕಠಿಣ ಮಾತು, ಭಾಷೆಗಳಿಂದ ದೂರವೇ ಉಳಿದು, ತಮ್ಮದೇ ಹೊಸ ಶೈಲಿಯಲ್ಲಿ ಪುರುಷಪ್ರಧಾನ ಆಲೋಚನೆಗಳಿಗೆ, ಭಾಷೆಗೆ ಸವಾಲೆಸೆಯುತ್ತಾರೆ. ಕವಿತೆಯ ಆಳದಲ್ಲಿ ತಾನು ಬದುಕುತ್ತಿರುವ ಸಮಾಜದ ಕುರಿತಾದ ಅರಿವಿದ್ದು, ಸಮಾಜದ ಸರಿ ತಪ್ಪುಗಳಿಗೆ ಸ್ಪಂದಿಸುವ ರೀತಿ ಹೊಸತನದಿಂದ ಕೂಡಿದೆ. ಯುದ್ಧೋನ್ಮಾದದಲ್ಲಿ ಮೈಮರೆತ ಯುವ ತಲೆಮಾರಿಗೆ ಯುದ್ಧೋನ್ಮಾದದಲ್ಲಿ ಅಬ್ಬರಿಸುವ ಯಾರ ಮನೆಯ ಮಗನೂ ಗಡಿಯಲ್ಲಿಲ್ಲ ಎಂದು ಎಚ್ಚರಿಸುತ್ತಲೆ ಯುದ್ಧದ ಕ್ರೌರ್ಯದ ಕುರಿತು ತಿಳಿಸುತ್ತಾರೆ. ಇನ್ನೂ ಅಕ್ಕನ ಪ್ರೇಮದ ಪರಿಭಾಷೆಯನ್ನೇ ಆವರಿಸಿರುವ ಪದ್ಯಗಳಲ್ಲಿ ಪ್ರೇಮವೆಂದರೆ ಮುತ್ತು, ಮೋಹ, ಹಸಿವು, ದಾಹ, ಎಲ್ಲವುಗಳಲ್ಲೂ ಕಾಡುವ ಬದುಕಷ್ಟೇ ಎನ್ನುವ ಮೂಲಕ ಪ್ರೇಮಕ್ಕೆ ಆರೋಪಿಸುವ ಶುದ್ಧತೆಗಳ ಕಲ್ಪನೆಯನ್ನೇ ತೊಡೆದುಹಾಕುತ್ತಾರೆ. ಯುವ ತಲ್ಲಣಗಳೊಂದಿಗೆ ತಾನು ಶೋಧಿಸುತ್ತಿರುವ ಲೋಕ, ಜಾತಿವಿನಾಶದ, ಧರ್ಮದ ಗಡಿಗಳಿಲ್ಲದ ಶೋಷಣೆಮುಕ್ತ ಸಮಾಜದ್ದು ಎಂಬುದು ಈ ಪುಸ್ತಕದ ಜೀವಾಳ.
ಆಡಿದ ಮಾತು ಪ್ರಮಾಣದಂತೆ ನಿಜ ಎನಿಸುವ ಹಾಗೇ ಈ ಕವಿತೆಗಳು ಓದುಗರನ್ನು ತಟ್ಟುತ್ತವೆ. ನನಗೆ ದೀಪವೆಂದರೆ ಬದುಕು ಸುಟ್ಟುಕೊಂಡು ನೆನಪು ಸದಾ ಉರಿವ ಒಡಲ ನೋವು ಬೆಳಕ ಬಣ್ಣಕ್ಕೆ ರೆಕ್ಕೆ ಸುಟ್ಟುಕೊಳ್ಳುವ ಪುಟ್ಟ ಚಿಟ್ಟಿಯ ಸಾವು ಎಂದು ಬರೆಯುವ ಮಂಜುಳಾ, ದೀಪವೂ ಸುಡಬಲ್ಲದು ಎಂಬ ತಣ್ಣನೆಯ ಸತ್ಯವನ್ನು ಅಷ್ಟೇ ನವಿರಾಗಿ ಹೇಳುತ್ತಾರೆ.
ಕವಿ, ಪತ್ರಕರ್ತೆ ಮಂಜುಳಾ ಹುಲಿಕುಂಟೆ ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ. ಹುಟ್ಟೂರಿನಲ್ಲೇ ಪ್ರಾಥಮಿಕ ಮತ್ತು ಫ್ರೌಢಶಾಲಾ ಶಿಕ್ಷಣ ಮುಗಿಸಿದ ಮಂಜುಳಾ ತ್ಯಾಮಗೊಂಡ್ಲು ಶ್ರೀಮತಿ ನರಸಮ್ಮ ತಿಮ್ಮರಾಯಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಮತ್ತು ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. ಆನಂತರ ಬೆಂಗಳೂರಿನ ಬದುಕು ಕಮ್ಯುನಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಡಿಪ್ಲಮಾ ಮಾಡಿದ್ದಾರೆ. ಕಸ್ತೂರಿ ಸುದ್ದಿವಾಹಿನಿಯಲ್ಲಿ ವೃತ್ತಿ ಬದುಕನ್ನು ಆರಂಭಿಸಿದ ಮಂಜುಳಾ, ಸುವರ್ಣ ನ್ಯೂಸ್ , ಟಿವಿ 9 ಸೇರಿದಂತೆ ಕರ್ನಾಟಕದ ಪ್ರಮುಖ ಸುದ್ದಿ ವಾಹಿನಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸಂವಾದ ಸಂಸ್ಥೆಯಲ್ಲಿ ‘ಯುವಜನರ ...
READ MORE