ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿದ್ದ ಡಿ.ವಿ. ರಾಜಶೇಖರ್ ಅವರ ಕವಿತೆಗಳ ಸಂಕಲನ ’ಶಬ್ದದೊಳಗಣ ನಿಶ್ಯಬ್ದ’. ಈ ಸಂಕಲನದಲ್ಲಿ ಒಟ್ಟು 22 ಕವಿತೆಗಳಿವೆ. ಹಿರಿಯ ಕಲಾವಿದ ಚಂದ್ರನಾಥ ಆಚಾರ್ಯ ಅವರ ಮುಖಪುಟ ಇರುವ ಈ ಸಂಕಲನಕ್ಕೆ ಹಿರಿಯ ವಿಮರ್ಶಕ ಕಿ.ರಂ. ನಾಗರಾಜ ಅವರ ಮುನ್ನುಡಿಯಿದೆ.
ಕಿ.ರಂ. ನಾಗರಾಜ ಅವರು ’ಪ್ರಸ್ತುತ ಸಂಕಲನದಲ್ಲಿನ ’ತಾಯಿ’, ’ಸತ್ತ ಕಣ್ಣುಗಳು’, ’ಆರುವ ದೀಪಗಳು’, ’ಹೊಗೆಯ ಗೂಡಿನಲ್ಲಿ’, ”ಸತ್ತವನ ಹಿಂದೆ’ ’ಸುಡುವ ಬೆಳಕು’ -ಕವನಗಳನ್ನು ಓದಿದಾಗ ಒಂದೇ ಸಂಕಲನದಲ್ಲಿ ಹೆಚ್ಚು ಒಳ್ಳೆಯ ಕವಿತೆಗಳನ್ನು ಬರೆದಿರುವ ಕೆಲವೇ ತರುಣ ಕವಿಗಳ ಸಾಲಿಗೆ ಸೇರುತ್ತಾರೆ ಎಂದು ನನಗೆ ಅನ್ನಿಸಿದೆ. ವಿಷಾದ, ಏಕಾಕಿತನ, ಕ್ರೌರ್‍ಯದ ಬರ್ಬರತೆಯ ಸಂಕೀರ್ಣ ಅವಸ್ಥೆಗಳನ್ನು ಹಿಡಿಯುವ ರೀತಿಗಳಿಗಾಗಿ ಈ ಚಿತ್ರಗಳನ್ನು ನೋಡಬಹುದು:
ಬತ್ತಿ ಹೋದ ನದಿಗಳಲ್ಲಿ ಮುದುಡಿದ ತೆಪ್ಪಗಳೆ
ಮುತ್ತಿಲ್ಲದ ಮುಡಿಗಳಲ್ಲಿ ಅಡಗಿದ ಮೊಗ್ಗುಗಳೆ
ಕರುಳ ಕಚ್ಚಿ ಸುಖದ ಕೆನೆಯ ಕಟ್ಟಿ ಬನ್ನಿ.
ಓಡದ ದಾರಿಗಳಲ್ಲಿ ಆರಿ ಹೋದ ದೀಪಗಳೆ
ಕಂಬಳಿಯೊಳಗೆ ಮುದುಡಿದ ಮುಖಗಳೆ
ನನ್ನ ಅಪ್ಪಿ ಬನ್ನಿ
ಬೇರೆ ಬೇರೆ ಕವನಗಳಿಂದ ತೆಗೆಯಲಾಗಿರುವ ಈ ಭಾಗಗಳು ಶಬ್ದಸಂಗೀತದ ಬಲದಿಂದ ತತ್ಕಾಲೀನತೆಯೊಂದಿಗೆ ಅದರ ಆಚೆಯ ನೆಲೆಗಳನ್ನೂ ಸೃಷ್ಟಿಸುತ್ತವೆ’ ಎಂದು ಬರೆದಿದ್ದಾರೆ.
ಹಿರಿಯ ಪತ್ರಕರ್ತ ಡಿ.ವಿ. ರಾಜಶೇಖರ ಅವರು ಅಂಕಣಕಾರರು. ಲೇಖಕರು. ಪ್ರಜಾವಾಣಿ ದಿನಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ ನಂತರ ಅವರು ವಿಜಯ ಕರ್ನಾಟಕ ದಿನಪತ್ರಿಕೆಗೆ ಸಂಪಾದಕೀಯ ಸಲಹೆಗಾರರಾಗಿ ನೇಮಕಗೊಂಡರು. ನಂತರ ಕನ್ನಡ ಪ್ರಭ ದಿನಪತ್ರಿಕೆ ಹಾಗೂ ದ ಸ್ಟೇಟ್ಸ್ ಆನ್‌ಲೈನ್ ಪೋರ್ಟಲ್‌ನಲ್ಲಿಯೂ ಸಂಪಾದಕೀಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಅವರು ಕೆಲಕಾಲ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಜಾವಾಣಿಯ ವರದಿಗಾರರಾಗಿ ನೇಮಕಗೊಂಡ ನಂತರ ಹುಬ್ಬಳ್ಳಿ, ನವದೆಹಲಿ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಮೈಸೂರು ಆವೃತ್ತಿಯ ಮುಖ್ಯಸ್ಥರಾಗಿದ್ದ ಅವರು ಪ್ರಜಾವಾಣಿಯ ಭಾನುವಾರದ ...
READ MORE