‘ಸಾಲುಮಂಟಪ’ ಸಿದ್ಧಾರೂಢ ಗು ಕಟ್ಟಿಮನಿ ಅವರ ಕವನಸಂಕಲನವಾಗಿದೆ. ಕೃತಿಯ ಕುರಿತು ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಹೀಗೆ ಹೇಳುತ್ತಾರೆ; ಪ್ರಕೃತಿಯಲ್ಲಿ ಎಲ್ಲವೂ ಬದಲಾವಣೆಗೆ ಒಳಪಟ್ಟಿವೆ ಆದರೆ ಜಾತಿಭಾರತ ಸಾಮಾಜಿಕವಾಗಿ ಸ್ಥಗಿತ ಸ್ಥಿತಿಯಲ್ಲಿಯೇ ಇದೆ. ಈ ಡಿಜಟಲಿಕೃತ ಯುಗದಲ್ಲಿಯೂ ಮನಸ್ಸುಗಳು ಅರಳುತ್ತಿಲ್ಲ ಯಾಕೆ ಎಂಬುದು ಇಂದಿನ ಬಹುತೇಕ ಕವಿಗಳ ಪ್ರಶ್ನೆ. ಈ ಹೊತ್ತಿನ ಕಲಿತ, ದಲಿತ ಹಸಿವಿನಿಂದ ಮುಕ್ತನಾಗಿದ್ದರೂ ಅವಮಾನದಿಂದ ಮುಕ್ತನಾಗಿಲ್ಲ. ಅಸ್ಪೃಶ್ಯತೆಯ ಕರಾಳ ಮುಖಗಳು ಬೇರೆ ಬೇರೆ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಕಾಡುತ್ತವೆ. ಹೊರಗಿನವರಿಗೆ ಅದು ಕಾಣುವುದೇ ಇಲ್ಲ. ಒಳಗಿನವನಿಗೆ ಅದರ ನೋವು ಹಿಂಡಿ ಹಿಪ್ಪೆ ಮಾಡುತ್ತದೆ. ಈ ಕವಿಗೆ ಹೂವು ಅರಳುವುದು ಸೃಷ್ಟಿಯ ಮೋಹಕ ಕ್ರಿಯೆಯಾಗಿ ಕಾಣದೆ ಕೊಲೆಗಡುಕನಾಗಿ ಕಾಣುವುದು ಈ ಕಾರಣದಿಂದ, ಶೋಷಿತನು ಹೆಚ್ಚು ಶಿಕ್ಷಿತನಾದಷ್ಟು ನೋವು ತೀಕ್ಷ್ಮವಾಗುತ್ತದೆ. ಸೂಕ್ಷ್ಮಮನಸ್ಸಿನ ಸಿದ್ದಾರೂಢ ಕಟ್ಟಿಮನಿಯವರ ಕಾವ್ಯದಲ್ಲಿ ಆಕ್ರೋಶ, ತುಮುಲ, ಸಂಕಟಗಳು ವಿಭಿನ್ನ ಶೈಲಿಯಲ್ಲಿ ಅಭಿವ್ಯಕ್ತಿಗೊಂಡಿವೆ. ಒಂದು ಕವಿತೆಯಲ್ಲಿ ತಥಾಗಾರನ್ನೇ ಬಾಡಿಗೆ ಮನೆ ಕೇಳಲು ಕಳಿಸಿ ಅಚ್ಚರಿ ಮೂಡಿಸುತ್ತಾರೆ! ಮನೆಯಲ್ಲಿ ಗಾಳಿ, ಬೆಳಕು, ನೀರಿದೆ ಆದರೆ ಮನದಲ್ಲಿ? ಜಾಡಮಾಲಿಯಿಲ್ಲದ ನಗರವನ್ನು ಕಲ್ಪಿಸಿಕೊಳ್ಳಲು ಸಾಧ್ಯವೆ? ಇಂತಹ ಮಹತ್ವದ ಪ್ರಶ್ನೆಗಳನ್ನು ಎತ್ತುವ ಸಿದ್ಧಾರೂಢ ಕಟ್ಟಿಮನಿ ಭರವಸೆಯ ಕವಿಯಂತೂ ಹೌದು.
ಸಿದ್ಧಾರೂಢ ಕಟ್ಟಿಮನಿ ಅವರು ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿದರು. ತಂದೆ- ಶ್ರೀ ಗುರುನಾಥ ಸಿ ಕಟ್ಟಿಮನಿ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ- ಶ್ರೀಮತಿ ಶಕುಂತಲಾ ಗು ಕಟ್ಟಿಮನಿ. ಸಿದ್ಧಾರೂಢ ಕಟ್ಟಿಮನಿ ಅವರು ಇಂಡಿಯಲ್ಲಿ ಪ್ರಾಥಮಿಕ ಶಿಕ್ಷಣ, ಫ್ರೌಢ ಶಿಕ್ಷಣ ಮುಗಿಸಿದರು. ಮ್ಯಾಟ್ರಿಕ್ ನಂತರ ಸಾಹಿತ್ಯ ಕೃಷಿ ಆರಂಭವಾಗಿತು. ಪದವಿ ಪೂರ್ವ ಶಿಕ್ಷಣ(ವಿಜ್ಞಾನ), ಸಿಂದಗಿಯಲ್ಲಿ ಪದವಿ(ವಿಜ್ಞಾನ)ಪೂರ್ಣಗೊಳಿಸಿದರು. ಆನಂತರ ಪ್ರೌಢ ಶಿಕ್ಷಕ ತರಬೇತಿ ಪಡೆದು ಪ್ರೌಢ ಶಿಕ್ಷಕ ಸೇವೆ ಆರಂಭಿಸಿದರು. ಪ್ರಥಮ ದರ್ಜೆ ಸಹಾಯಕರಾಗಿ ಹುದ್ದೆಗೆ ನೇಮಕವಾದರು. ಬಾಗಲಕೋಟೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಬೋಧಕೇತರ ವೃತ್ತಿ ಪ್ರಾರಂಭಿಸಿದರು. ...
READ MORE