ಕವಯತ್ರಿ ಫರ್ಹಾನಾಜ್ ಮಸ್ಕಿ ಅವರ ‘ಮೌನ ಮನದ ಮಾತುಗಳು’ ಕೃತಿಯು ಕವನಸಂಕಲನವಾಗಿದೆ. ಬೆಂಗಳೂರಿನ ಕರ್ನಾಟಕ ಪುಸ್ತಕ ಪ್ರಾಧಿಕಾರದಿಂದ ಧನ ಸಹಾಯ ಪಡೆದ ಕೃತಿ ಇದು. 44 ಕವನಗಳಿದ್ದು ಕವಿಭಾವ ಪುರುಷ ಪ್ರಧಾನ ವ್ಯವಸ್ಥೆಯನ್ನು ನಯವಾಗಿ ತಿವಿಯುವ ಮೂಲಕ ‘ಚಹಾ ಅವಳು’ ಡೋರ್ ಬೆಲ್ಲು ಅವಳು’ ಎಂದು ಹೆಣ್ಣನ್ನು ಹೊಸ ಹೊಸ ನಿದರ್ಶನಗಳಲ್ಲಿ ರೂಪಿಸುತ್ತಾರೆ. ‘ಕುಳಿತುಕೊಳ್ಳುವುದೇ ತಪ್ಪೇ’, ’ಗಾಂಧೀಜಿಗೊಂದು ಪತ್ರ’ ಕವನಗಳು ರಚನೆಯಲ್ಲಿಯೂ ತಮ್ಮ ಹೊಸತನವನ್ನು ತೆರೆದು ಚಿಂತನೆಗೆ ಪ್ರೇರೇಪಿಸುತ್ತವೆ. ಹಾಗೆಯೇ ಪುರುಷ ದ್ವೇಷದ ಚಿಂತನೆಗಳು ಎನ್ನಿಸಿಕೊಳ್ಳದಂತೆಯೇ ‘ಅಪ್ಪ’ನ ಪ್ರೀತಿಯನ್ನು ವಿಶಾಲಾರ್ಥದಲ್ಲಿ ಅನಾವರಣಗೊಳಿಸಿದ್ದಾರೆ.
ಕೃತಿಗೆ ಬೆನ್ನುಡಿ ಬರೆದಿರುವ ಮಧುನಾಯ್ಕ ಲಂಬಾಣಿ ಅವರು, ‘ಮೌನ ಮನದ ಮಾತುಗಳು’ ಕವನಗಳಾದಾಗ ಕೃತಿಯೂ ತನ್ನ ಶಿರೋನಾಮೆಯಲ್ಲಿಯೇ ಓದುಗನಿಗೆ ಆಕರ್ಷಣೆಯನ್ನು ನೀಡುತ್ತದೆ. ಫರ್ಹಾನಾಜ್ ಮಸ್ಕಿ ಅವರ ಚೊಚ್ಚಲ ಕೃತಿ ನೈಜತೆಯಿಂದ ಕಂಗೊಳಿಸುತ್ತಿದೆ. ಸಾಮಾಜದ ತಲ್ಲಣಗಳನ್ನು ಸಾಮಾಜಿಕ ನ್ಯಾಯ, ಸ್ತ್ರೀ ಸಬಲೀಕರಣ ಇವರ ಕವನಗಳಲ್ಲಿ ಹಾಸುಹೊಕ್ಕಾಗಿವೆ. ಕವಿತೆಗಳು ಸಾಮಾಜಿಕ ಕಾಳಜಿಯನ್ನು ಹೊಂದಿದ್ದು ಓದುಗರಿಗೆ ಉತ್ತಮ ಸಂದೇಶ ನೀಡುವಂತಿದೆ. ತಮ್ಮ ಮನದ ಮಾತುಗಳನ್ನು ಓದಲು ಹುರಿದುಂಬಿಸಿ ಧನ್ಯತಾಭಾವ ಮೂಡಿಸುವಂತೆ ಮಾಡುತ್ತವೆ’ ಎಂದು ಪ್ರಶಂಸಿಸಿದ್ದಾರೆ.
ಕವಯತ್ರಿ ಫರ್ಹಾನಾಜ್ ಮಸ್ಕಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿಯವರು. ಪ್ರಸ್ತುತ , ಹುಳಿಯಾರಿನ ಬಿಎಂಎಸ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ. ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಚೊಚ್ಚಲ ಕೃತಿ ಯೋಜನೆ ಅಡಿ, ಅವರ ‘ಮೌನ ಮನದ ಮಾತುಗಳು ’ (ಕವನ ಸಂಕಲನ) ಪ್ರಕಟಗೊಂಡಿದೆ. ವಿದ್ಯಾರ್ಥಿ ಜೀವನದಿಂದಲೇ ಆಲ್ ಇಂಡಿಯಾ ರೇಡಿಯೋ ದಲ್ಲಿ ಕವನ, ಲೇಖನ, ರೆಕಾರ್ಡಿಂಗ್ ಮತ್ತು ಅಗ್ನಿ ಅಸ್ತ್ರ ಪತ್ರಿಕೆಯಲ್ಲೂ ಅಂಕಣಗಾರ್ತಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಹಲವು ಆನ್‌ಲೈನ್ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಕೃತಿಗಳು: ಮೌನ ಮನದ ಮಾತುಗಳು (ಕವನ ಸಂಕಲನ) ...
READ MORE