ಲೇಖಕಿ ಶೋಭಾ ನಾಯಕ ಅವರ ಕವನ ಸಂಕಲನ, ‘ಶಯ್ಯಾಗೃಹದ ಸುದ್ದಿಗಳು’. ಈ ಕೃತಿಗೆ ಮುನ್ನುಡಿ ಬರೆದ ವಿನಯಾ ಒಕ್ಕುಂದ ಅವರು ‘ಈ ಕವಿತೆಗಳು ಬಲು ಧ್ಯಾನಸ್ಥವಾಗಿ ಮತ್ತು ಸುಡು ಎಚ್ಚರದಲ್ಲಿ ಹೆಣ್ಣಿನ ಇತಿಗೀತಿಕೆಯನ್ನು ಹಾಡಿಕೊಳ್ಳುತ್ತಿವೆ. ಹೆಣ್ಣು ಹಾಗಂದರೇನು? ನಿಜಕ್ಕೂ ಅವಳಿಗೆ ಬೇಕಿರುವುದೇನು? ಎಂಬ ಪ್ರಶ್ನೆಯನ್ನು ನಿಷ್ಠುರವಾಗಿ ಮಾತ್ರವಲ್ಲ ಮಾರ್ದವವಾಗಿ ಕೂಡ ಉತ್ತರಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ.’ ಎಂದು ಹೇಳಿದ್ದಾರೆ.
ಶೋಭಾ ನಾಯಕ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರೈಸಿದರು. ಕಂಪ್ಯೂಟರ್ ಸಾಯನ್ಸ್ ಡಿಪ್ಲೊಮಾ ಆಂಡ್ ಇಂಜನಿಯರಿಂಗ್, ಪಿ.ಜಿ.ಡಿಪ್ಲೊಮಾ ಇನ್ ಜೈನಾಲಾಜಿ ಹಾಗೂ ಆರು ಸುವರ್ಣ ಪದಕಗಳೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಎಂ.ಫಿಲ್ ಹಾಗೂ ಪಿಹೆಚ್. ಡಿ. ಪದವಿಗಳನ್ನು ಪೂರೈಸಿದ ಇವರು ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರಕಲೆ ಹಾಗೂ ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು. ...
READ MOREಶಯ್ಯಾಗೃಹದ ಸುದ್ದಿಗಳು ಕೃತಿಯ ಮಿಮರ್ಶೆ- ಹೊಸ ಮನುಷ್ಯ
ಇಂದಿನ ಕವಿ-ಕವಿತಾ ಸಂಕಲನಗಳ ಸಂತೆಯಲ್ಲಿ ಶೋಭಾ ನಾಯಕರ ಈ 'ಶಯ್ಯಾಗೃಹದ ಸುದ್ದಿಗಳು' ಎಂಬ ಸಂಕಲನ ತನ್ನ ಶೀರ್ಷಿಕೆಯಿಂದಷ್ಟೇ ಅಲ್ಲದೆ ಕವಿತೆಗಳ ಹಿಂದಿನ ತಾಜಾ ಮನಸ್ಸು ಮತ್ತು ಅಭಿವ್ಯಕ್ತಿ ಕ್ರಮಗಳಿಂದ ಗಮನ ಸೆಳೆಯುವಂತಿದೆ. ಇಲ್ಲಿರುವ ಒಟ್ಟು ಐವತ್ತು ಕವಿತೆಗಳಲ್ಲಿನ ಬಹುತೇಕ ಕವನಗಳ ಕೇಂದ್ರ ನೆಲೆ ಒಂದೇ. ಗಂಡು-ಹೆಣ್ಣಿನ ಸೂಕ್ಷ್ಮ ಸಂಬಂಧದ ಸುತ್ತವೇ ಇರುವ ಕವಿತೆಗಳು ಆ ಮೂಲಕವೇ ಒಂದು ತಾತ್ತಿಕತೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತವೆ. ಲೈಂಗಿಕ ಅನುಭವಗಳು ಪ್ರಧಾನವಾಗಿದ್ದರೂ ಅವು ವೈಯಕ್ತಿಕ ನೆಲೆಗೆ ಸೀಮಿತವಾಗದೆ ಇಡೀ ಚರಿತ್ರೆ, ವರ್ತಮಾನದ ಪುರುಷ ಕೇಂದ್ರಿತ ಪ್ರತಿಷ್ಠೆಯನ್ನೆ ಜಿಜ್ಞಾಸೆಗೆ ಒಳಪಡಿಸುವ ನೆಲೆಗೆ ಬೆಳೆಯುವುದು ಕವನಗಳ ವಿಶೇಷವಾಗಿದೆ. ಈ ಮೂಲಕ ಗಂಡು-ಹೆಣ್ಣಿನ ಸಂಬಂಧವನ್ನು ಸಾಂಪ್ರದಾಯಿಕ ಚೌಕಟ್ಟಿನ ಆಚೆಗಿಟ್ಟು ನೋಡುವ ಸಾಧ್ಯತೆಯ ಕಡೆಗೆ ಕವಿತೆಗಳು ಚಲಿಸುತ್ತವೆ.
ಮನೆಯೊಳಗೆ ಬಿಕ್ಕಳಿಸುವ ಕವಿತೆ ನನ್ನದು / ಜಗಲಿಯಲ್ಲಿ ಮೊಳಗುವ ಚರಿತ್ರೆ ಅವನದು (ಮ.೩೨) ಎನ್ನುವ, ಕವಿತೆಯೊಂದರ ಸಾಲುಗಳು ಸಂಕಲನದ ಮ್ಯಾನಿಫೆಸ್ಟೋ ಆಗಿ ಕಾಣಿಸುತ್ತವೆ. ಇದು ಅನಾದಿಯಿಂದ ಇಲ್ಲಿಯವರೆಗೆ ಪುರುಷ-ಮಹಿಳೆಯ ಅಸ್ತಿತ್ವ ದಾಖಲಾದ ಬಗೆಯನ್ನು ಕವಿ ನೋಡುವ ರೀತಿ. ಅದರಲ್ಲಿಯೂ ಪುರುಷನ ಅಧಿಕಾರ ಸ್ಥಾಪನೆಯ ಕೇಂದ್ರ ಶಯ್ಯಾಗೃಹವೇ ಆಗಿರುವ ಕಾರಣ ಈ ಪದ ಇಡೀ ಸಂಕಲನದ ಮುಖ್ಯ ರೂಪಕವಾಗಿ ಬಂದಿದೆ. ಈ ಹಿನ್ನೆಲೆಯ ಅನೇಕ ಕವನಗಳು ಚರಿತ್ರೆಯುದ್ದಕ್ಕೂ ಸಾಗಿಬಂದ ಗಂಡಿನ ಅಹಂ, ಲಂಪಟತನಕ್ಕೆ ಸವಾಲೆಸೆಯುತ್ತವೆ. ʼಆದರೂ / ರಾತ್ರಿಗಳೆಂದರೆ ಬರೀ ಯುದ್ದವೇ ನಿನಗೆ / ನಾನು ನರಳುವಾಗ / ನಿನಗೆ ಸಿಗುವ / ಸುಖದ ಹೆಸರು: ಅಹಂ' (ಪು.೨) ಎಂಬ ಸಾಲುಗಳಲ್ಲಿರುವ ವ್ಯಂಗ್ಯ ಇದಕ್ಕೆ ಉದಾಹರಣೆ. ಯಯಾತಿಗೊಂದು ಪತ್ರ ರಾಕ್ಷಸನ ಹೆಂಡತಿ ಮಂಡೋದರಿ ಮೊದಲಾದ ಕವನಗಳಲ್ಲಿ ಈ ಭಾವವನ್ನೆ ಕಾಣಬಹುದು.
ಪರಂಪರಾಗತ ನಿಯಮಗಳ ಮುಂದೆ ವಿಸ್ಮೃತಿಗೆ ಸೇರಿದ ಒಂದು ಜಗತ್ತಿದೆ. ಅದು ಸಮಾನತೆಯ ನೆಲೆಗಟ್ಟಿನ ಮೇಲೆ ಪರಸ್ಪರ ಪ್ರೀತಿಯ ಸಾಂಗತ್ಯದಲ್ಲಿ ಅರಳಬೇಕಾದ ಜಗತ್ತು. ಅದರ ಹುಡುಕಾಟವೇ ಕವನಗಳ ಇನ್ನೊಂದು ನೆಲೆಯೂ ಆಗಿದೆ. 'ಮುಟ್ಟದಲೇ ಮಾಗಿಸುವ / ಮನದೊಡೆಯನೇ ಬೇಕು' (ಪು.೬) ಎಂಬ ಸಾಲುಗಳಾಗಲೀ, 'ಇರಬೇಕಿತ್ತು / ಈಗಲೂ... / ಮುಟ್ಟು ಮುಗಿದನಂತರವೂ / ಮುಟ್ಟುವವನು | ಮುಗಿಲಾಗಬಲ್ಲವನು' (ಪು.೭೯) ಎಂಬ ಸಾಲುಗಳಾಗಲೀ ಹೆಣ್ಣಿನ ಆಕಾಂಕ್ಷೆಗಳನ್ನು, ಕನಸುಗಳನ್ನು ನಿಸ್ಸಂಕೋಚವಾಗಿ ತೆರೆದಿಡುತ್ತವೆ.
ಇಡೀ ಸಂದರ್ಭಕ್ಕೆ ತೀಕ್ಷವಾಗಿ ಪ್ರತಿಕ್ರಿಯಿಸುವ, ಮಹಿಳೆಗೆ ಬಿಡುಗಡೆಯ ದಾರಿಗಳನ್ನು ತೋರಿಸುವ ಸ್ಫೋಟಕಶಕ್ತಿಯ ಕವನಗಳೂ ಇಲ್ಲಿವೆ. “ಕಲ್ಲಾದವರ ನೆತ್ತಿಯಮೇಲೆ', 'ಮೊಲೆಗಳು ಸದಾ ಉರಿವ ಒಲೆಗಳು', 'ಬ್ರಾಂಡೆಡ್ ಮುಕ್ತಿ' ಮೊದಲಾದ ಕವಿತೆಗಳು ಆತ್ಮಪ್ರತ್ಯಯದ ಹಂತವನ್ನು ದಾಟಿ ಸಾಮಾಜಿಕ ನೆಲೆಯ ಕಡೆ ಚಲಿಸಿವೆ. ಇಂಥ ಕವಿತೆಗಳು ಗಂಡಿನ ಅಧಿಕಾರವನ್ನು ಪ್ರಶ್ನಿಸುತ್ತ ಸ್ತ್ರೀಯ ಅಸ್ಮಿತೆಯನ್ನು ಹೆಚ್ಚು ಪ್ರಬಲವಾಗಿ ಪ್ರತಿಪಾದಿಸುತ್ತವೆ.
ಸಂಕಲನದಲ್ಲಿ ಗಮನಸೆಳೆಯುವ ಮುಖ್ಯವಾದ ಅಂಶವೆಂದರೆ ಕವಿಯ ರೂಪಕಶಕ್ತಿ, 'ಸದ್ದಿಲ್ಲದೆ”, “ನಿಲ್ಲದ ಮಳೆ', ಮೊದಲಾದ ಕವಿತೆಗಳು ಆ ಬಗೆಯ ಸಫಲ ರಚನೆಗಳು. ಇಲ್ಲಿ ರೂಪಕಗಳೇ ಅನುಭವವೊಂದನ್ನು ಕಟ್ಟಿಕೊಡುತ್ತವೆ 'ನಿತ್ಯ ಮದಲಿಂಗನ ಕಣಿವೆಯಲಿ | ಮದವೇರಿದ ಸೂರ್ಯ / ಬೆವರುವ ಕುದುರೆ' (ಪು.೨೧, ೨೨) ಎನ್ನುವಂತಹ ಮನಸೆಳೆಯುವ ಸಾಲುಗಳು ಇಲ್ಲಿವೆ. ಈ ಬಗೆಯ ಕವನಗಳು ಹೆಚ್ಚು ಸೂಕ್ಷ್ಮವಾದದ್ದನ್ನು ಹೇಳುತ್ತವೆ. ಆದರೂ ಕವಿಗೆ ʼಸುಖ / ಕೇವಲ ಒಂದು / ಹೊಂಗನಸಲ್ಲ - / ನಾವಾಗೆ ಬರೆದು / ಪೂರ್ಣಗೊಳಿಸಬೇಕಾದ ವರ್ಣಚಿತ್ರೆ (ಪ.೬೪) ಎಂಬ ಅರಿವಿರುವ ಕಾರಣ ಅನೇಕ ಕವಿತೆಗಳು ಬದುಕಿನ ಮಿತಿಗಳನ್ನು ಮಾರುವ ಬಗೆಯನ್ನು ನಿರಂತರವಾಗಿ ಶೋಧಿಸುವ ಪ್ರಯತ್ನ ಮಾಡುತ್ತವೆ.
ಅನುಭವವನ್ನು ಲೈಂಗಿಕತೆಯ ಪರಿಧಿಯಿಂದಾಚೆಗೆ ಹೆಚ್ಚು ವಿಸ್ತರಿಸಲು ಸಾಧ್ಯವಾಗದಿರುವುದು ಮತ್ತು ಅಭಿವ್ಯಕ್ತಿ ಕ್ರಮದಲ್ಲಿ ವೈವಿಧ್ಯ ಕಾಣದೆ ಇರುವುದು ಸಂಕಲನದ ಮಿತಿಯಾಗಿದೆ. ಸಮಗ್ರ ಚಿಂತನೆ ಮತ್ತು ಅಭಿವ್ಯಕ್ತಿಯಲ್ಲಿ | ಪ್ರಯೋಗಶೀಲತೆ ಸಾಧ್ಯವಾದಾಗಲೇ ಕವಿತೆಗೆ ಹೊಸ ಆಯಾಮ ದಕ್ಕುವುದು. ಅಂಥ ಸಾಧ್ಯತೆಯೊಂದು ಸಂಕಲನದಲ್ಲಿ ಗೋಚರಿಸುತ್ತದೆ.
(ಕೃಪೆ: ಪುಸ್ತಕಾವಲೋಕನ, ಬರಹ: ಸಂತೋಷ ಚೊಕ್ಕಾಡಿ)