‘ನನ್ನಪ್ಪ ಒಂದು ಗ್ಯಾಲಕ್ಸಿ’ ಈ ಕವನ ಸಂಕಲನದ ಕವಿ ನೂರುಲ್ಲಾ ತ್ಯಾಮಗೊಂಡ್ಲು.ಇಲ್ಲಿಯ 51 ಕವನಗಳು ವರ್ತಮಾನದ ತಲ್ಲಣ, ಸಮಾಜ, ಕುಟುಂಬ ಸೇರಿದಂತೆ ಮಾನವೀಯ ಅಂಶಗಳ ವಸ್ತು ವೈವಿಧ್ಯತೆ ಹೊಂದಿವೆ.
ಕೃತಿಗೆ ಮುನ್ನುಡಿ ಬರೆದ ಗಜಲ್ ಸಾಹಿತಿ ಮೆಹಬೂಬ್ ಬೀ. ಶೇಖ್ ‘ಈ ಕವನ ಸಂಕಲನವು ಕನ್ನಡದ ಸುಂದರ ಕಾವ್ಯ ಪರಂಪರೆ ಹಾಗೂ ಸೃಜನಶೀಲತೆಯ ಮೊದಲ ಮುಗುಳು. ಅದು ಮೊಳಕೆ ಒಡೆಯುವ ಅವ್ಯಕ್ತಕ್ಕೆ ಕವಿ ಭಾಷೆ ಒದಗಿಸಿಕೊಟ್ಟಿದ್ದರಿಂದ ಕವಿತೆಗಳು ಸರಳವಾಗಿ ಮೂಡಿವೆ’ ಎಂದು ಪ್ರಶಂಸಿಸಿದ್ದಾರೆ.
ಕೃತಿಗೆ ಬೆನ್ಕುಡಿ ಬರೆದಿರುವ ಎಸ್. ನಟರಾಜ್ ಬೂದಾಳ್ ‘ಕುದಿಬಂದ ಎಸರಿನಂತಿರುವ ನೂರುಲ್ಲಾ ಕವನಗಳು ನಟ್ಟ ನಡುಬಯಲಲ್ಲಿ ಮೂರು ಗುಂಡು ಹೂಡಿ ಸಂಸಾರ ಮಾಡಿಯೇ ಸಿದ್ದ ಎನ್ನುವ ಅಲೆಮಾರಿ ಹೆಣ್ಣನ್ನು ನೆನಪಿಸುತ್ತಿವೆ. ಇನ್ನು ಸ್ವಲ್ಪ ಹೊತ್ತಿಗೆ ಮುದ್ದೆ ಬೇಯುವ ಘಮಲು ಬಂದೀತು ಎಂದು ಮೂಗರಳಿಸುವಂತೆ ಮಾಡುತ್ತವೆ. 'ಮೈಖಾನವೆಂದರೆ ನಿನಗೆ ಹೆಂಡದ ಗಡಂಗು- ನನಗೆ ನನ್ನ ಪ್ರೇಮಿಯ ವಕ್ಷಸ್ಥಲ' ಇಂತಹ ಸಾಲುಗಳನ್ನು ಬರೆಯಬಲ್ಲ ನೂರುಲ್ಲಾ ಕಾವ್ಯದ ಅಸಲಿ ಕಸುಬಿನಲ್ಲಿ ತೊಡಗಿ ಕೊಂಡಿದ್ದಾನೆ. ಕೂಡಿ,ಕಳೆದು,ಗುಣಿಸಿ ಉಳಿವ ಶೇಷವನ್ನು ಮಾತ್ರ ಸಹೃದಯ ಓದುಗರು ಸ್ವೀಕರಿಸುವರೆಂಬ ಎಚ್ಚರವೂ ಕವಿಗೆ ಇದೆ ಎಂದು ಶ್ಲಾಘಿಸಿದ್ದಾರೆ.
ನೂರುಲ್ಲಾ ತ್ಯಾಮಗೊಂಡ್ಲು ಅವರು ಹುಟ್ಟಿದ್ದು (ಜನನ: 01-07-1982)ತುಮಕೂರಿನಲ್ಲಿ ಸದ್ಯ ತ್ಯಾಮಗೊಂಡ್ಲುವಿನಲ್ಲಿ ವಾಸ. ಕುವೆಂಪು ವಿಶ್ವವಿದ್ಯಾಲಯದ ದೂರು ಶಿಕ್ಷಣದ ಮೂಲಕ ಎಂ.ಎ. ಪೂರೈಸಿದರು. ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಕಾನ್ಸ್ ಟೇಬಲ್ ಆಗಿ ಸೇರಿದ್ದು, ನಂತರ ಕೆಪಿಎಸ್ ಸಿ ಪರೀಕ್ಷೆ ಎದುರಿಸಿ ನ್ಯಾಯಾಂಗ ಇಲಾಖೆಯಲ್ಲಿ ಕರ್ಕ್ಲ್ ಆಗಿ ಮಧುಗಿರಿಯ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೂಫಿ ತತ್ವವನ್ನು ಅಪ್ಪಿಕೊಂಡಿದ್ದು, ಈಗಾಗಲೇ ‘ಬೆಳಕಿನ ಬುಗ್ಗೆ” ಕವನ ಸಂಕಲನ ಪ್ರಕಟಿಸಿದ್ದಾರೆ. ಹಂಪಿಯ ಕನ್ನಡ ವಿ.ವಿ. ನಡೆಸುವ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಬಹುಮಾನಿತರು. ‘ನನ್ನಪ್ಪ ಒಂದು ಗ್ಯಾಲಕ್ಸಿ’ ಎಂಬುದು ಇವರ ಎರಡನೇ ಕವನ ಸಂಕಲನ. ...
READ MORE............ ನಾ ನೇಯುವ ಕಾವ್ಯ ಯಾವತ್ತೂ ನನ್ನದಲ್ಲ ನನ್ನ ಮತ್ತು ಕಾವ್ಯದ ಸಂಬಂಧ ಇರುವುದಾದರೂ ಒಂದಿಷ್ಟು ಹೊತ್ತು ಮಾತ್ರ ಆ ಕಾವ್ಯದ ಬೆಳಕಿನ ಎದುರು ನಿಂತು ಸುಖವುಂಡಷ್ಟೇ ನನ್ನದು ಆಮೇಲೆ.. ಆಮೇಲೆ ಏನು ? ಏನೂ ಹೇಳಲಾರೆ ಕಾವ್ಯದ ಹೊರತು..
-ನೂರುಲ್ಲಾ ತ್ಯಾಮಗೊಂಡ್ಲು ಅವರ ಕವನ ಸಂಕಲನ ‘ನನ್ನಪ್ಪ ಒಂದು ಗ್ಯಾಲಕ್ಸಿ ’ ದಲ್ಲಿಯ ‘ನೆರಳ ಮುಂದೆ ಬೆಳಕು’ ಕವನದ ಸಾಲುಗಳು.