ವಿಚಿತ್ರ ಸೇನನ ವೈಖರಿ

Author : ಜಯಂತ ಕಾಯ್ಕಿಣಿ

Pages 136

₹ 130.00




Year of Publication: 2021
Published by: ಅಂಕಿತ ಪುಸ್ತಕ
Address: 53, ಶ್ಯಾಮಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 08026617100

Synopsys

‘ವಿಚಿತ್ರ ಸೇನನ ವೈಖರಿ’ ಕನ್ನಡದ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರ ಕವನ ಸಂಕಲನ. ಇಲ್ಲಿ ಹಿಡಿಯ ಹೋದರೆ, ರಹಸ್ಯ, ಕಾಲಾ ಘೋಡಾ ಸಂತೆಯಿಂದ, ಹಸ್ತಾಂತರ, ಅರ್ಧ ಕಿಲೋ ಸಮುದ್ರ, ಜಾರಿಯಲ್ಲಿರುವ ನಮಸ್ಕಾರ, ಗಾಳಿಯ ಕೈಗೆ ಸಿಕ್ಕ ದನಿ, ಖೋಡಿ ಬೈರಾಗಿ, ದಿಲೀಪ, ಇಶಾರೆ, ಒಂದು ಸಣ್ಣ ನೀರವ, ಮಂಜುನಾಥನ ಕವಿತೆ, ಕೊಕ್ಕರೆಯಂತೆ ನಿಂತು, ಆ ಕಡೆ ಮುಖ ಮಾಡಿ, ಥಾಲಿ ಡಾನ್ಸ್, ತಿದ್ದುಪಡಿ, ಕಲೆ, ಕೃಷ್ಣ, ಅಂಗಿ, ಬಾಕಿ ಪುಟ, ಹಾಡುಗಾರ್ತಿಯ ಹಾಡಿನ ಪುಸ್ತಕ, ಮಾದೇವನ ಜತೆ, ಸುಣ್ಣದ ಗೋಡೆಯ ನಂಬರು, ಚೋ ಹೋ ಚೋ, ಕನಸು ಮೇಲೋಗರ, ಆಟ, ಎಂ. ವ್ಯಾಸ, ಪಂಜರದಿ ನಿಂತ ಗಿಡ, ದೀಪಸ್ತಂಭ, ಚಿಲ್ಲರೆ, ಅನಿಮಿಷ, ಗುನ್ಹೆಗಾರ, ಉಳಿದ ಸಾಲು, ಚಿನ್ಹೆ, ಮರ, ಆದರೂ ಇರಲಿ, ತಾಲೀಮು, ಬಾಳೆಗುಳಿ ಕ್ರಾಸ್, ಅದು, ಹೂ ಪ್ರಾಸಗಳು, ಹಳೆ ಪುಸ್ತಕ, ಗ್ರೂಪ್ ಫೋಟೋ, ಊರೆಂಬ ಪ್ರಾಣದೇವರು, ನೆಲಗುಣ, ಬಿಡುಗಡೆ, ಟಪಾಲು ಗಾಡಿ, ನಗೆ ಹನಿ, ಎಳನೀರು, ಮಾಣೇಶ್ವರನಿಗೆ ಹೂವಿನಂಗಿ, ವಿಷಯ ನಿಮ್ಮಲ್ಲೇ ಇರಲಿ ಹಾಗೂ ವಿಚಿತ್ರಸೇನನ ವೈಖರಿ ಎಂಬ 51 ಕವಿತೆಗಳು ಸಂಕಲನಗೊಂಡಿವೆ.

About the Author

ಜಯಂತ ಕಾಯ್ಕಿಣಿ
(24 January 1955)

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತ ಅವರ ತಂದೆ ಗೌರೀಶ ಕಾಯ್ಕಿಣಿ ಹೆಸರಾಂತ ವಿಚಾರವಾದಿ ಲೇಖಕ.  ಆಧುನಿಕ ಬದುಕಿನ ಆತಂಕಗಳನ್ನು ಕತೆಯಾಗಿಸುವ ಜಯಂತ ಕಾಯ್ಕಿಣಿ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು.  ’ಕತೆಗಾರ’ ಎಂಬ ವಿಶೇಷಣ ಇದೆಯಾದರೂ ಅವರೊಬ್ಬ ಪ್ರಮುಖ ಕವಿ ಕೂಡ ಹೌದು. ಪ್ರಬಂಧ, ಅಂಕಣ ಬರಹ, ಚಲನಚಿತ್ರ ಸಂಭಾಷಣೆ ಮತ್ತು ಗೀತರಚನೆ ಹೀಗೆ ಹಲವು ಪ್ರಕಾರಗಳಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ’ಭಾವನಾ’ ಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದ ಜಯಂತ ಅವರು ಈಟಿವಿ ವಾಹಿನಿಗಾಗಿ ’ನಮಸ್ಕಾರ’, ಬೇಂದ್ರೆ, ಕುವೆಂಪು, ಕಾರಂತ ನಮನ ಸರಣಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ರಂಗದಿಂದೊಂದಿಷ್ಟು ದೂರ, ಕೋಟಿತೀರ್ಥ, ಶ್ರಾವಣ ಮಧ್ಯಾಹ್ನ, ...

READ MORE

Reviews

’ವಿಚಿತ್ರಸೇನನ ವೈಖರಿ’ ಕೃತಿಯ ವಿಮರ್ಶೆ

ಕಣ್ಣಿನ ಭಾಷೆಯ ಕವಿತೆಗಳು

'ಪೇಟೆ ಮೆಲ್ಲಗೆ ದಿನಪತ್ರಿಕೆ ತೆರೆಯುವಾಗ, ಮಡಿಸಿಟ್ಟ ಉಡುಪಿನಂತೆ/ಮುದುಡಿ ಗ್ರಾಮಚಾವಡಿಯಲ್ಲಿ ಮಲಗುತ್ತಿದ್ದ ’(ವಿಚಿತ್ರಸೇನನ ವೈಖರಿ); 'ಕಿವಿ ಮಡಿಸಿಟ್ಟ ಪುಟದ ನೋವಿಗೆ ಯಾರು ಜವಾಬ್ದಾರರು' (ಬಾಕಿ ಪುಟ) ಈ ಸಂಕಲನದ ಇಂತಹ ಹಲವಾರು ಚಂದದ ಸಾಲುಗಳನ್ನು ಹೆಕ್ಕಿ ಹೇಳಬಹುದು. ಜಯಂತರ ಕಾವ್ಯಪ್ರಪಂಚದೊಳಗೆ ಬದುಕುವುದೆಂದರೆ ಅದು ಆ ಕ್ಷಣದಲ್ಲಿ ಬದುಕುವ ಲೋಕದ ಚಿತ್ರಣ, ಇವನ್ನು ಓದಿದಾಗ, ''ಬದುಕು ಎಷ್ಟು ಚೆನ್ನಾಗಿದೆ. ನಮಗೆ ಕಾಣದೆ, ತೋರದೆ ಇರೋದು ಇವರಿಗೇನೋ ಕಂಡುಬಿಟ್ಟಿದೆಯಲ್ಲ' ಅನ್ನಿಸುತ್ತದೆ. ಕವಿತೆಯು ಇದಕ್ಕಿಂತ ಹೆಚ್ಚಿಗೆ ಇನ್ನೇನು ಮಾಡಲು ಸಾಧ್ಯ?

ಇಪ್ಪತ್ತರ ಹದಿಹರೆಯದಲ್ಲಿ 'ರಂಗದಿಂದೊಂದಿಷ್ಟು ದೂರ' ಸಂಕಲನದೊಂದಿಗೆ ಮೊದಲಾದ ಜಯಂತ ಕಾಯ್ಕಿಣಿಯವರ ಕಾವ್ಯಯಾನದಲ್ಲಿ 'ವಿಚಿತ್ರಸೇನನ ವೈಖರಿ' ಸಂಕಲನವು ಏಳನೆಯ ಹೆಜ್ಜೆ, ಇದರಲ್ಲಿ 55 ಕವಿತೆಗಳಿವೆ. ಸುಮಾರು ಐವತ್ತು ವರ್ಷಗಳ ಕಾಲ ಕಥೆಯ ಗುಣವುಳ್ಳ ಕವಿತೆಗಳನ್ನು, ಕವಿತೆಯ ಸ್ಪರ್ಶವಿರುವ ಕಥೆಗಳನ್ನು, ಇವೆರಡೂ ಅಲ್ಲದ ಸಿನಿಮಾ ಹಾಡುಗಳನ್ನು ಬರೆಯುತ್ತ ಬಂದಿರುವ ಜಯಂತರ ಬರವಣಿಗೆಯ ಗಂಭೀರ ವಿಶ್ಲೇಷಣೆ ನಡೆಯದಿರುವುದು ಕನ್ನಡ ವಿಮರ್ಶೆಯ ಲೋಪ.

 ಕುವೆಂಪು ಅವರ ಮಲೆನಾಡು, ಕಂಬಾರರ ಶಿವಾಪುರ, ಮಹದೇವರ ದ್ಯಾವನೂರಿನ ರ ಹಾಗೆ ಜಯಂತರ ಕತೆಗಳಲ್ಲಿ ಹರೆಯ ಕಾಲದ ಮುಂಬೈ ಮತ್ತು ಕವಿತೆಗಳಲ್ಲಿ ಗೋಕರ್ಣ ಇದೆ, ಸ್ಥಳೀಯತೆ, ಪ್ರಾದೇಶಿಕತೆ ಮತ್ತು ಇವೆರಡರಿಂದ ಮೂಡುವ ಭಾಷಿಕ ನೆಲೆಗಳು ಮೇಳಗೊಂಡಿರುವ ಕವಿತೆಗಳಿವು. ಜಯಂತರ ಕವಿತೆಗಳು ಸೃಷ್ಟಿಸುವ ಚಿತ್ರಲೋಕ, ತಿಳಿವಳಿಕೆ ಮತ್ತು ಭಾವನೆಗಳನ್ನು ಬೇರೆಯ ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ ಎನ್ನುವ ಆಕೆ ಅನುಭವ ಉಂಟಾಗುವುದೇ ಇವುಗಳ ಶಕ್ತಿಯಾಗಿದೆ.

'ವಿಚಿತ್ರಸೇನನ ವೈಖರಿ' ಎಂಬ ಶೀರ್ಷಿಕೆಯಡಿಯ ಐದು ಕವಿತೆಗಳು ವಿಚಿತ್ರಸೇನನೆಂಬ ಪ್ರೋಟಾಗನಿಸ್ಟ್ ನನ್ನು ಹಲವು ಸನ್ನಿವೇಶಗಳಲ್ಲಿ ಗಮನಿಸುತ್ತವೆ. ಅವನೊಂದಿಗೆ ಸಂವಾದ ನಡೆಸುತ್ತವೆ. ವಿಚಿತ್ರಸೇನನು ಕವಿಗೆ ಹಿಡಿದ ಕನ್ನಡಿಯೂ ದೈ ಹೌದು, ಆವನ ಮೂಲಕ ಕವಿಯು ಲೋಕಕ್ಕೆ ಹಿಡಿದ ಕನ್ನಡಿಯೂ ಹೌದು, ನಮ್ಮ ಕಾಲದ 'ವ್ಯಾವಹಾರಿಕತೆಯನ್ನು ಮೀರಿದ ಇವನು, ನಾವು ಕಳೆದುಕೊಂಡ ಮುಗ್ಧಲೋಕವನ್ನು ಕಣ್ಣಮುಂದೆ ನಿಲ್ಲಿಸುತ್ತಾನೆ. ಇವನ ಮೂಲಕ ಕವಿಯು, ನಮ್ಮ ಬರಿಕಣ್ಣಿಗೆ ಕಾಣದಿರುವ ಇಲ್ಲೇ, ಈಗಲೇ ಇರುವ ಚೆಲುವು ಮತ್ತು ಒಳ್ಳೆಯತನಗಳನ್ನು ಕಾಣಿಸುತ್ತಾರೆ. ಇದು ಲೋಕವಿವರಗಳನ್ನು ಒಳಗೊಳ್ಳುವ ವಿಶಿಷ್ಟ ಸಂವೇದನೆಯಿಂದ ಮಾತ್ರ ಸಾಧ್ಯವಾಗುವಂತಹ ಸ ಕಾವ್ಯಬಗೆ.

 ಕಥೆಗಳಾಗಲು ಕಿರಿದಾದ ಅನುಭವಗಳು ಜಯಂತರ ಕವಿತೆಯಾಗುತ್ತವೆಯ?  ಅನ್ನುವ ಪ್ರಶ್ನೆ ನನಗೆ ಯಾವತ್ತಿನಿಂದ ಇದೆ. ಪ್ರತಿಯೊಂದು ಕವಿತೆಯೂ ಪುಟ್ಟದೊಂದು ಹಿಡಿ ಕಥಾಲೋಕವನ್ನು ಸೃಷ್ಟಿಸುತ್ತ, ಇವರ ಕತೆಯ ನೆಯ್ದೆಗೂ, ಕವಿತೆಯ ನೆಯ್ದೆಗೂ ಹೆಚ್ಚು ವ್ಯತ್ಯಾಸವಿಲ್ಲವೋ ಏನೋ ಅನ್ನಿಸುವಂತೆ ಮಾಡುತ್ತದೆ. ಜಯಂತರು ಲೋಕವನ್ನು ಗ್ರಹಿಸುವ ವಿಧಾನದಲ್ಲೇ 'ಇದು ಕವಿತೆ', "ಇದು ಕತೆ' ಎಂದು ವಿಂಗಡಿಸಲು ಸಾಧ್ಯವಿಲ್ಲ. ಚಿತ್ರದ ವಿವರಗಳ ಮೂಲಕ ಪ್ರಪಂಚವನ್ನು ಕಾಣುವ ಈ ನಡೆಯು 'ಇದು ಜಯಂತರು ಮಾತ್ರ ಕಾಣಬಹುದಾದ ಮತ್ತು ಕಟ್ಟಬಹುದಾದದ್ದು ಅನ್ನಿಸುತ್ತದೆ. ಜಯಂತರದ್ದು ಕಣ್ಣಿನ ಮೂಲಕ ಲೋಕ ಗ್ರಹಿಸುವ ಭಾಷೆ, ಈ 'ದೃಶ್ಯ'ಭಾಷೆಗೆ ಬಹುಪಾಲು 'ಶ್ರವಣ'ದ ಸಾರ್ಥಕತೆಯೂ ಕವನಗಳಲ್ಲಿ ಬೆರೆತಿದೆ.

ಸಮುದಾಯಗಳಿಗಿಂತ ವ್ಯಕ್ತಿಗಳು ಕುಟುಂಬಗಳು ಮುಖ್ಯವಾಗುತ್ತಿರುವ ಇವತ್ತಿನ ಸಂದರ್ಭದಲ್ಲಿ ಜಯಂತರ ಹಲವಾರು ಕವಿತೆಗಳಲ್ಲಿ ಇಡೀ ಊರು ಮಾತಾಡಿದಂತೆನಿಸುತ್ತದೆ. ದೇವರನ್ನು ಮನುಷ್ಯನಂತೆ ಕಾಣುವ, ಹಾಡುಗಾರ್ತಿಯ ಹಾಡಿನ ಪುಸ್ತಕದ ಅಕ್ಷರಗಳು ಜೀವತುಂಬ ಚಲಿಸುವಂತಹ ಅನುಭವ ನೀಡುವ ಕವಿತೆಗಳು ಜಡ-ಚೇತನಗಳ ಗಡಿಗೆರೆಗಳನ್ನು ಅಳಿಸಿ ಎಲ್ಲದರಲ್ಲೂ ಜೀವಚೈತನ್ಯದ ಆವಾಹನೆ ಮಾಡುವ ಹಾದಿಯವು. 

ವಿಚಾರಗಳ ಹೊರೆಯಿಲ್ಲದೆ. ಲೋಕದ ಉಳಿವಿನ ದಾರಿಯಾದ ಪ್ರೀತಿಸಾಧ್ಯತೆಗಳು ಬೆರಳು ತೋರಿಸುವ ಈ ಕವಿತೆಗಳು ಹಲವು ಓದುಗಳನ್ನು ಬಯಸುತ್ತವೆ. ಪ್ರತಿ ಓದು ಹೆ ಕೂಡ ಹೊಸ ಅನುಭವವಾಗಿ ನಮ್ಮನ್ನು ಅರಳಿಸುತ್ತದೆ.

(ಕೃತಿ: ಹೊಸಮನುಷ್ಯ, ಬರಹ: ಜ.ನಾ. ತೇಜಶ್ರೀ)

Related Books