‘ಸರಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ’ ಲೇಖಕ ಅಲ್ಲಾಗಿರಿರಾಜ್ ಕನಕಗಿರಿ ಅವರ ಕವನ ಸಂಕಲನ. 2020ನೇ ಸಾಲಿನಲ್ಲಿ ಕೊವಿಡ್ ಕಾರಣದಿಂದಾಗಿ ಇಡೀ ಜಗತ್ತು ತಲ್ಲಣಿಸಿತ್ತು. ಅಂತಹ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮನುಷ್ಯ ಸಂಬಂಧದ ಪ್ರೀತಿಯ ಸೇತುವೆ ಕಟ್ಟಿದ್ದು ಕವಿ-ಕಾವ್ಯ ಜೊತೆಗೆ ಆಯಾ ದೇಶಿಯ ಭಾಷೆಯ ಸಾಹಿತ್ಯ ಬರಹಗಳು ಎನ್ನುವ ಗಂಭೀರ ಚರ್ಚೆಯಿದೆ. ಕೆಲವೊಂದು ದೇಶದ ಮಾಧ್ಯಮಗಳು ಕೊರೊನದ ಭಯ ಸೃಷ್ಟಿಸಿದರೆ. ಕವಿಯ ಕಾವ್ಯ ಮತ್ತು ಇತರ ಸಾಹಿತ್ಯಿಕ ವಿಚಾರ ಜೊತೆಯಲ್ಲಿ ಸಂಗೀತ, ಚಿತ್ರಕಲೆಯೂ ಜನರೊಳಗೆ ಭರವಸೆ ಮೂಡಿಸಿದ್ದು ಸತ್ಯ ಸಂಗತಿ ಎನ್ನುತ್ತಾರೆ ಲೇಖಕ ಅಲ್ಲಾಗಿರಿರಾಜ್ ಕನಕಗಿರಿ.
ಈ ಕೊರೊನಾ ಕಾಲಿಟ್ಟ ಕ್ಷಣದಿಂದ ಜಗತ್ತಿನಲ್ಲಿ ಜನರು ಸಾಹಿತ್ಯ ಓದು ಮತ್ತು ಬರಹದ ಕಡೆಗೆ ಗಮನ ಹರಿದದ್ದೂ ಕೂಡ ಒಂದು ರೀತಿಯಲ್ಲಿ ದಾಖಲೆ. ಇಂತಹ ದಾಖಲೆಯ ಜಾಡು ಹಿಡಿದು ಹೊರಟ ನನಗೆ ಆಗಸ್ಟ್ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ ವಿವಿಧ ಅನುಭವಗಳಾದವು. ಈ ಅನುಭವ, ಗಮನಿಸಿದ ಕೆಲವು ಘಟನೆಗಳು. ಸ್ವತಃ ನಾನೇ ಅವಮಾನಕ್ಕೆ ಒಳಗಾದ ಕೆಲವೊಂದು ಘಟನೆಗಳನ್ನು ಇಲ್ಲಿ ಕವಿತೆ ರೂಪದಲ್ಲಿ ಲೋಕಕ್ಕೆ ಹಂಚಿಕೊಂಡಿದ್ದೇನೆ ಎಂಬುದು ಕವಿಯ ಅಭಿಪ್ರಾಯ. ಕೃಷಿ, ಕೂಲಿ ಕಾರ್ಮಿಕರು, ದಲಿತ, ದಮನಿತರ ಒಳಗೊಂಡಂತೆ ಎಲ್ಲಾ ಪ್ರಕಾರದ ದುಡಿಯುವ ವರ್ಗದ ಜನರ ಸಂಕಟ, ಬೆತ್ತಲೆ ಪಾದಗಳಲ್ಲಿ ಊರು ಕೇರಿ ಮುಟ್ಟುವ ತವಕದಲ್ಲಿ ಹಸಿವಿನಿಂದ ಹೆಗಲ ಹೆಣವಾದ ಕಂದಮ್ಮಗಳು, ನಿಶ್ಯಕ್ತಗೊಂಡು ಅರ್ಧ ದಾರಿಯಲ್ಲೇ ಉಸಿರು ಚೆಲ್ಲಿದ ಹಿರಿಯ, ಯುವ ಜೀವಗಳು. ಇಲ್ಲಿನ ಕವಿತೆಯೊಳಗಿನ ಸಾಲುಗಳಾಗಿವೆ. ಈ ಕೃತಿಗೆ 2020ನೇ ಸಾಲಿನ ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ ದೊರಕಿದೆ.
ವೃತ್ತಿಯಿಂದ ಪತ್ರಕರ್ತರಾಗಿರುವ ಅಲ್ಲಾಗಿರಿರಾಜ ಅವರ ಕೊಪ್ಪಳ ಜಿಲ್ಲೆಯ ಕನಕಗಿರಿಯವರು. ಗಜಲ್ ಬರೆಯುವುದರಲ್ಲಿ ವಿಶೇಷ ಆಸಕ್ತಿ ಹೊಂದಿರುವ ಅವರ ’ಆಜಾದಿ ಗಜಲ್’, ಸುರೂರು ಗಜಲ್, ನೂರ್ ಗಜಲ್ ಕೃತಿಗಳು ಪ್ರಕಟವಾಗಿವೆ. ...
READ MORE