‘ಅನಾಮಧೇಯ ಗೀರುಗಳು’ 2024ನೇ ಸಾಲಿನ ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ ಪಡೆದು ಪ್ರಕಟಗೊಂಡಿರುವ ನಿಝಾಮ್ ಗೋಳಿಪಡ್ಪು ಅವರ ಕವನ ಸಂಕಲನ. ಈ ಕೃತಿಗೆ ಪ್ರತಿಭಾ ನಂದಕುಮಾರ್ ಅವರ ಮುನ್ನುಡಿ ಬರಹವಿದೆ. ಕೃತಿಗೆ ಬೆನ್ನುಡಿ ಬರೆದಿರುವ ಸಾಹಿತಿ ಕೆ. ಷರೀಫಾ ಅವರು ಕೃತಿಯ ಕುರಿತು ವಿವರಿಸುತ್ತಾ.. “ಆಳಿದವರೇ ಮುಖ ಮರೆಸಿಕೊಳ್ಳಿ ನನ್ನ ದೇಹದಲ್ಲೆಲ್ಲಾ ನೀವಿಟ್ಟ ಗೀರುಗಳಿವೆ” ಇದು ಮಂಗಳೂರು ಜಿಲ್ಲೆಯ ಸಜೀಪನಡು ಗ್ರಾಮದವರಾದ ನಿಝಾಮ್ ಗೊಳಿಪಡ್ಪು, ಸಜೀಪನಡುರವರ “ಅನಾಮಧೇಯ ಗೀರುಗಳು” ಕವನಸಂಕಲನದ ಸಾಲುಗಳು. ಇವರ ಅನಾಮಧೇಯ ಗೀರುಗಳು ಕವನ ಸಂಕಲನಕ್ಕೆ 2024ರ ಪ್ರತಿಷ್ಟಿತ, ಈ ಹೊತ್ತಿಗೆ ಕಾವ್ಯ ಪ್ರಶಸ್ತಿ ಕೊರಕಿದ್ದಕ್ಕೆ ಅಭಿನಂದನೆಗಳು. ಕೇವಲ ಪಿಯುಸಿ ಓದಿ ಕೂಲಿ ಕೆಲಸ ಮಾಡುತ್ತಿರುವ ಚಿಕ್ಕ ವಯಸ್ಸಿನ ಪೋರ ಇಂತಹ ಕವಿತೆಗಳನ್ನು ಬರೆಯಬಲ್ಲನೆ ಎಂದು ನನಗೆ ಒಂದು ಕ್ಷಣ ಅನಿಸಿದ್ದುಂಟು.
ಏಕೆಂದರೆ ನಿಝಾಮರವರ ಕವಿತೆಗಳು ಬಹಳ ಎತ್ತರದ ಕವಿತೆಗಳಾಗಿವೆ. ಪಾಬ್ಲೋ ನೆರೋದನು ಒಂದು ಪಕ್ಷಿಯ ಸಾವನ್ನು ನೋಡಿ ಬರೆದ ಮಾರ್ಮಿಕ ಕವಿತೆಯನ್ನು ನೋಡಿ ಅವರ ತಂದೆಯೂ ಈ ಪೋರ ಇಂತಹ ಕವಿತೆ ಬರೆಯಬಲ್ಲನೇ ಎಂದು ಅಂದುಕೊಂಡಿದ್ದರಂತೆ. ಇವರು ಅವಿಜ್ಞಾನಿ ಹೆಸರಿನಲ್ಲಿ ಬರೆಯುತ್ತಿದ್ದ ಕನ್ನಡದ ಹೊಚ್ಚ ಹೊಸ ಪ್ರತಿಭೆ. ಬದುಕು, ಭವಣೆ, ಇಕ್ಕಟ್ಟು, ಸಂಕಷ್ಟ, ಸಂಭ್ರಮಗಳ ನಡುವೆ ಜೀಕಿದ ಜೀವನವೇ ಇವರ ಕಾವ್ಯವಾಗಿದೆ. ಇಲ್ಲಿಯ ಬಹುತೇಕ ಕವಿತೆಗಳು ಇಂತಹ ಜೀವನ ತತ್ವದ ಪಡಿಯಚ್ಚಾಗಿವೆ. ಹಲವಾರು ತಲ್ಲಣದ ಕ್ಷಣಗಳನ್ನು ಅವರು ನೋವಿನಾಳದ ಕೋಳವೆಯೊಳಗಿಂದ ನುಡಿಯುತ್ತಾರೆ. ಇವರ ಕವಿತೆಗಳಲ್ಲಿ ಒಂದು ಭಿನ್ನವಾದ ಲೋಕವಿದೆ. ಅದನ್ನು ಮುಸ್ಲಿಂ ಸಂವೇದನೆ ಎಂಬ ಚೌಕಟ್ಟಿಗೆ ಕೂಡಿಸಲಾಗದು. ಬದುಕಿನ ನೋವಿನ, ತಲ್ಲಣದ ಕ್ಷಣಗಳನ್ನು ಮತ್ತು ಬದುಕಿನ ವಿಶಾದ, ನಿಟ್ಟುಸಿರಿನ ಕ್ಷಣಗಳನ್ನು ಕಣ್ಣಿಗೆ ಕಟ್ಟುವಂತೆ ಇಲ್ಲಿ ಹಿಡಿದಿಟ್ಟಿದ್ದಾರೆ.
ನಿಝಾಮರವರ ಕವಿತೆಗಳಲ್ಲಿ ಬುಧ್ಧಿ, ಭಾವ, ತರ್ಕ, ಶಬ್ದ, ಅರ್ಥಗಳೆಲ್ಲವೂ ಕರಗಿ ನೀರಾಗಿ ಸಂವೇದನಾ ಸ್ವರೂಪದಲ್ಲಿ ಹರಿವ ನದಿಯಾಗಿವೆ. ಇವರ ಕಾವ್ಯ ಸಹಜವಾಗಿ ಹರಿಯುತ್ತದೆ. ಇವರ ಪ್ರಥಮಕೃತಿ “ಅನಾಮಧೇಯ ಗೀರುಗಳು” ಇವರಿಗೆ ಪ್ರಶಸ್ತಿಯನ್ನೂ ಸಹ ತಂದುಕೊಟ್ಟಿರುವುದಕ್ಕೆ ಅಭಿನಂದನೆಗಳು. ಈ ಮಹತ್ವದ ಕವಿಯನ್ನು ಪೋಷಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದೂ ಆಗಿದೆ. ಅವರಿಂದ ಇನ್ನೂ ಮಹತ್ವದ ಕೃತಿಗಳು ಹೊರಬರಲೆಂಬ ಹಾರೈಸಿದ್ದಾರೆ.
ನಿಝಾಮ್ ಗೋಳಿಪಡ್ಪು ಅವರು ಮಂಗಳೂರು ಜಿಲ್ಲೆಯ ಸಜೀಪನಡು ಗ್ರಾಮದವರು. ಅವಿಜ್ಞಾನಿ ಹೆಸರಲ್ಲಿ ಕವನಗಳನ್ನು ರಚಿಸಿರುವ ನಿಝಾಮ್ ಗೋಳಿಪಡ್ಪು ಅವರು ಪದವಿಪೂರ್ವದವರೆಗೆ ಅಭ್ಯಾಸ ಮಾಡಿ, ತಮ್ಮ ಊರಿನಲ್ಲಿ ಕೂಲಿ ಕಾರ್ಮಿಕರಾಗಿದ್ದಾರೆ. ‘ಅನಾಮಧೇಯ ಗೀರುಗಳು’ ಇವರ ಪ್ರಥಮ ಕೃತಿಯಾಗಿದೆ. ...
READ MORE