ಕವಯತ್ರಿ ನೀತಾ ಕಾಬಾ ಅವರ ಕವನಗಳ ಸಂಕಲನ-ಹೊನ್ನಕಾವ್ಯ. ಒಟ್ಟು 30 ಕವನಗಳಿವೆ. ಬದುಕಿನ ನೋವು-ನಿರಾಸೆ, ಹತಾಶೆಗಳನ್ನೇ ಕೇಂದ್ರೀಕರಿಸಿದ ಹಾಗೂ ದೈವ-ಹಣೆಬರಹವನ್ನೇ ಎಲ್ಲದಕ್ಕೂ ಕಾರಣವಾಗಿಸುವ ಇಲ್ಲಿಯ ಕಾವ್ಯಗಳು ಅಂತಿಮವಾಗಿ ಜೀವನ ಪ್ರೀತಿಯನ್ನೇ ಆಶಿಸುತ್ತವೆ, ಬದುಕಿನಲ್ಲಿ ಧನಾತ್ಮಕವಾದ ಆಶಯ ಇರದಿದ್ದರೆ ಅದು ಬದುಕೆ? ಎಂದು ಪ್ರಶ್ನಿಸುವಷ್ಟರ ಮಟ್ಟಿಗೆ ಕವನಗಳ ಸ್ವರೂಪ ಪರಿವರ್ತನೆಯಾಗುವುದು ಗಮನಾರ್ಹ.
ಕೃತಿಗೆ ಮುನ್ನುಡಿ ಬರೆದ ಪತ್ರಕರ್ತ ವೆಂಕಟೇಶ ಮಾನು ‘ಕವಯತ್ರಿಯ ಬದುಕಿನಲ್ಲಿ ಕಾಡುವ ಅಂಶ-ಅವಳ ದೇಹ ಸ್ಥಿತಿ; ವಿಕಲಚೇತನೆ. ಈ ಸ್ಥಿತಿಯು ಕವಯತ್ರಿಯನ್ನು ನಿರಾಸೆಗೆ ದೂಡುತ್ತದೆ. ವಾಸ್ತವತೆಯ ನೇರ ಪ್ರತಿಬಿಂಬವೇ ಇಲ್ಲಿಯ ಕವನಗಳು. ಬಹುತೇಕ ಕವನಗಳ ಕೇಂದ್ರ ಹತಾಶೆ-ನಿರಾಸೆ-ನೋವುಗಳ ಮೂಲಕ ಆರಂಭವಾಗುತ್ತವೆ. ಏಕಾಏಕಿಯಾಗಿ ಮೋಡ ಕವಿದು ಮಿಂಚು ಮೂಡಿದಂತೆ ಕವಿತೆಯ ಸಾಲುಗಳಲ್ಲಿ ಆಶಯ, ಭರವಸೆಗಳು ತುಂಬಿಕೊಂಡು ಮಳೆ ಬರಿಸುವ ತಂಗಾಳಿಯ ಭಾವ ಸೂಸುತ್ತವೆ. ‘ಗೆಲ್ಲುವ ಛಲ ಬಿಡದಂತೆ ಮಾಡು’ ಎಂದು ಅಗೋಚರ ಶಕ್ತಿಯನ್ನು ಪ್ರಾರ್ಥಿಸುವ ‘ಛಲ’ ಕವಿತೆಯು ಕವಯತ್ರಿಯ ಒಟ್ಟು ಮನೋಧರ್ಮವೂ ಆಗಿದೆ. ಕವಯತ್ರಿಯ ಕಣ್ಣಲ್ಲಿ ನಿರಾಸೆಯೇ ತುಂಬಿಕೊಂಡಿದೆ. ಆದರೆ, ಭರವಸೆಯನ್ನೇ ಉಸಿರಾಡುತ್ತಾಳೆ ಎಂಬುದು ವಿಶೇಷ. ಸರಳ ಭಾಷೆ, ವಸ್ತು, ಕಲ್ಪನಾ ಸೌಂದರ್ಯ, ಆಕರ್ಷಕ ಶೈಲಿಯ ಮೂಲಕ ಜೀವನ ಪ್ರೀತಿಯ ಅಗತ್ಯ ಹಾಗೂ ಅನಿವಾರ್ಯತೆಯನ್ನೇ ಪ್ರತಿಪಾದಿಸುವ ಕವಿತೆಗಳು ಕವಯತ್ರಿ-ಕವಿತೆಗಳು-ಓದುಗ-ಹೀಗೆ ಒಂದು ಸೂತ್ರದಲ್ಲಿ ಬಂಧಿಯಾಗಿಸುವ ಮೋಡಿ ಇಲ್ಲಿಯ ಕವಿತೆಗಳಲ್ಲಿದೆ’ ಎಂದು ಪ್ರಶಂಸಿಸಿದ್ದಾರೆ.
ಕವಯತ್ರಿ ನೀತಾ ಕಾಬಾ ಅವರು ಕಲಬುರಗಿ ಜಿಲ್ಲೆ ಹಾಗೂ ತಾಲೂಕಿನ ಪರತಾಬಾದ್ ಹೋಬಳಿ ವ್ಯಾಪ್ತಿಯ ಹೊನ್ನಕಿರಣಗಿ ಗ್ರಾಮದವರು. ತಂದೆ ದೇವೇಂದ್ರಪ್ಪ, ತಾಯಿ ನಾಗಮ್ಮ. ಎಸ್.ಎಸ್.ಎಲ್ ಸಿ ವರೆಗೆ ಕವಯತ್ರಿಯ ವಿದ್ಯಾಭ್ಯಾಸ. ಕೃತಿಗಳು: ಹೊನ್ನಕಾವ್ಯ (ಕವನ ಸಂಕಲನ) ...
READ MORE