ಎಸ್. ಅನಂತ ನಾರಾಯಣ ಅವರು ಬರೆದ ಕವಿತೆಗಳ ಎರಡನೇ ಸಂಕಲನ-ಉಷಾ ಸ್ವಪ್ನ. ಬಾಳಿನ ನಂಜನ್ನು ಕಾವ್ಯರಸವಾಗಿ ಹಿಂಡಿಕೊಂಡಿರುವ ಕವಿಯ ಧೈರ್ಯವನ್ನು ಓದುಗರು ಶ್ಲಾಘಿಸಬೇಕು. ಇಲ್ಲಿಯ ಎಲ್ಲ ಪದ್ಯಗಳಲ್ಲೂ ಭಾವದ ಸಿರಿ ಹಾಗೂ ಭಾಷೆಯ ಬಿಗುವು ಇದೆ ಎಂದು ಹೇಳುವುದಿಲ್ಲ. ಆದರೆ, ಅವರದು ಪಳಗುತ್ತಿರುವ ಕೈ. ಬೆಳೆಯುತ್ತಿರುವ ಕಲೆ, ಒಳ್ಳೆಯ ಕಾವ್ಯಕ್ಕೆ ಅನುಭವದ ಕಾವು ಅಗತ್ಯ. ಕವಿಯು ಜೀವನ ಕ್ಲೇಶಗಳನ್ನು ಅರಿತಿದ್ದಾರೆ. ಸ್ವಕೀಯ ದುಃಖದಲ್ಲಿ ಮುಳುಗದೇ, ಲೋಕಾನುಭವವನ್ನು ಹೆಚ್ಚಿಸಿಕೊಂಡಿದ್ದಾರೆ. ಆತ್ಮ ಸಂಸ್ಕಾರವನ್ನು ಪಡೆದಿದ್ದಾರೆ ಎಂದು ಹಿರಿಯ ಕವಿ ತೀ.ನಂ. ಶ್ರೀಕಂಠಯ್ಯ ಅವರು ಮುನ್ನುಡಿ ಬರೆದು ಕವಿಯ ಕವನಗಳನ್ನು ಪ್ರಶಂಸಿಸಿದ್ದಾರೆ.
ಎಸ್. ಅನಂತನಾರಾಯಣ ಕನ್ನಡದ ಪ್ರಗತಿಶೀಲ ಬರಹಗಾರರಲ್ಲಿ ಪ್ರಮುಖರೆನಿಸಿದ್ದಾರೆ. ಪ್ರೊ. ಅನಂತ ನಾರಾಯಣ ಅವರು ನವೆಂಬರ್ 30, 1925 ರಲ್ಲಿ ಮೈಸೂರಿನಲ್ಲಿ ಜನಿಸಿದರು. ತಂದೆ ಆರ್. ಸದಾಶಿವಯ್ಯನವರು ಮತ್ತು ತಾಯಿ ರಂಗಮ್ಮನವರು. ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. (ಆನರ್ಸ್) ಮತ್ತು ಎಂ.ಎ. ಪದವಿಗಳನ್ನು ಪ್ರಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕಗಳೊಂದಿಗೆ ಗಳಿಸಿದರು. ಅವರು ಮೈಸೂರು ವಿಶ್ವವಿದ್ಯಾನಿಲಯದ ಹಲವಾರು ಕಾಲೇಜುಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸಂಗೀತ, ನಾಟಕ ಕಾಲೇಜಿನಲ್ಲಿ ಮೂರು ವರ್ಷ ನಾಟಕ ಶಾಸ್ತ್ರದ ಬೋಧಕರಾಗಿ, ನಾಟಕ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ಧಾರೆ. ನವೋದಯ ಕಾಲದ ಬರಹಗಾರರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದು ಸಹಜ ಕ್ರಿಯೆ. ...
READ MORE