‘ಋತುಗಾನ’ ಕೃತಿಯು ಜಿ. ಆರ್. ಪರಿಮಳಾರಾವ್ ಅವರ ಇಂಗ್ಲೆಡಿನ ಇಂಚರ ಹೈಕುಗಳಾಗಿವೆ. ಕೃತಿಗೆ ಮುನ್ನುಡಿ ಬರೆದಿರುವ ಗೋಪಾಲಕೃಷ್ಣ ರಾವ್ ಅವರು, ಪರಿಮಳಾರಾವ್ ಅವರ ಇಂಗ್ಲೆಡಿನ ಇಂಚರ ಹೈಕು(ಜಪಾನಿನ ಒಂದು ತ್ರಿಪದಿ ಪ್ರಕಾರ)ಗಳಾದ ‘ಋತುಗಾನ ಕಾವ್ಯ ಕೃತಿಯನ್ನು ಓದುತ್ತಿದ್ದಂತೆ ನನ್ನ ಮನಸ್ಸಿನಲ್ಲಿ ‘Holding Infinity in the palm of your hand’ ಎಂಬ ಆಂಗ್ಲ ಕವಿಯೊಬ್ಬರ ಕವನದ ಒಂದು ಸಾಲು ಥಟ್ಟನೆ ಹೊಳೆಯಿತು. ನಿಜಕ್ಕೂ ಅಂಗೈಯಲ್ಲಿ ಅನಂತತೆಯನ್ನು ಹಿಡಿದಿರಿಸಿವೆ ಇವರ ಈ ಹೈಕುಗಳು. ಇವರ ಕವನಗಳಲ್ಲಿ ಕೇವಲ ಮೂರು ಸಾಲುಗಳಿದ್ದರೂ ಅವುಗಳ ಅರ್ಥವೈಶಾಲ್ಯಕ್ಕೆ ಮಿತಿಯೇ ಇಲ್ಲ. ಇವರ ಹೈಕುಗಳನ್ನು ಮೊದಲ ಬಾರಿಗೆ ಒಮ್ಮೆ ಓದಿದಾಗ ಅವರ ಕಲಾವಂತಿಕೆ ನೈಪುಣ್ಯ ಮನಮುಟ್ಟಿದಲ್ಲಿ ಅವನ್ನು ಮತ್ತೆ ಮತ್ತೆ ಓದಿ ಮನನ ಮಾಡಿದಾಗ ಅವುಗಳಲ್ಲಿ ಅಡಗಿರುವ ತಾತ್ತ್ವಿಕ ಚಿಂತನೆ, ವೈಚಾರಿಕ ಶ್ರೀಮಂತಿಕೆಗಳ ಪರಿಚಯವಾಗುತ್ತದೆ. ಇವರಿಗೆ ಬಾಳೊಂದು ಶ್ವಾಸ-ನಿಶ್ವಾಸದ ಉಸಿರ ಹಾರ!’ ಈ ಕೇವಲ ಐದು ಪದಗಳಲ್ಲಿ ಎಂತಹ ಗಂಭೀರ ಚಿಂತನೆ ನಡೆಸಿದ್ದಾರೆ. ಕೃತಿಗೆ ಬೆನ್ನುಡಿ ಬರೆದಿರುವ ದೊಡ್ಡರಂಗೇಗೌಡ ಅವರು, ಋತುಗಾನದಲ್ಲಿ ಅಸಂಖ್ಯ ನುಡಿಮುತ್ತುಗಳಿವೆ. ಅವು ಸಂಕ್ಷಿಪ್ತವಾಗಿವೆ. ಕಿರಿದಾದ ಅಕಾರದಲ್ಲಿ ಹಿರಿದಾದುದನ್ನು ಹಿಡಿದಿರಿಸಿವೆ; ಇವು ನುಡಿ ನಕ್ಷತ್ರಗಳು; ಮಂದಾರ ಮಲ್ಲಿಗೆ ಮಾತುಗಳು; ವಾಗರ್ಥ ಹಿಡಿದಿಟ್ಟ ಅಪೂರ್ವ ಪದಪುಂಜಗಳಾಗಿವೆ. ಇಲ್ಲಿ ಲೇಖಕಿಯ ಅನುಭವದ ಮಿನಿ ಮಿನಿ.. ತನಿ ತನಿ ಹನಿಗಳಿವೆ; ಕಾವ್ಯದೇವಿಯ ಚೆಲುವಾದ ಮಣಿಗಳೆಲ್ಲ ಸೇರಿ ಸಾರಸ್ವತದ ಸುಂದರ ಹಾರವಾಗಿ ಇಲ್ಲಿನ ತ್ರಿಪದಿಗಳು ಹೊಮ್ಮಿದ್ದು ನಮ್ಮ ಕಣ್ಣು ಕೋರೈಸುತ್ತಿವೆ' ಎಂದಿದ್ದಾರೆ.
ಹನಿಗವನಗಳ ರಚನೆಯಲ್ಲಿ ಆಸಕ್ತಿಯುಳ್ಳ ಪರಿಮಳಾರಾವ್ ಜಿ. ಆರ್. ತಮ್ಮ ದಿನನಿತ್ಯದ ಅನುಭವಗಳ ಮನಸ್ಸಿನ ಮಾತುಗಳನ್ನು ಹನಿಗವನಗಳಿಗೆ ಇಳಿಸುತ್ತಾರೆ. 1941 ಜನವರಿ 06 ರಂದು ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಜನಿಸಿದರು. ’ಮಂದಾರ ಮಾಲಿನಿ’ ಅವರ ಕವನ ಸಂಕಲನ. ’ಬರ್ಥ್ ಆಫ್ ಹೋಪ್, ಅಲೆಯ ಆಲಾಪ, ಅಂತರಂಗಯಾನ, ಸ್ವರ್ಣ ಸಂಪಿಗೆ’ ಹೈಕುಗಳ ಕೃತಿ. ’ಮಿನುಗು ದೀಪ ಹನಿಗವನಗಳು, ಋತುಗಾನ’ ಅವರ ಮತ್ತಿತರ ಕೃತಿಗಳು. ‘ಸ್ಪಿಂಗ್ ಅವಾರ್ಡ್, ಸರ್ ಎಮ್. ವಿಶ್ವೇಶ್ವರಯ್ಯ ಪ್ರತಿಷ್ಠಾನದಿಂದ ಕಾವ್ಯಶ್ರೀ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಗಾರ್ಡನ್ ಆಫ್ ಪೊಯಟ್’ ಮುಂತಾದ ಗೌರವ ಪುರಸ್ಕಾರಗಳು ಸಂದಿವೆ. ...
READ MORE