ಕವಿ ವಿಭಾ ಅವರ ಕವನ ಸಂಕಲನ ‘ಜೀವ ಮಿಡಿತದ ಸದ್ದು’- ಈ ಕೃತಿಗೆ ಕನ್ನಡದ ಖ್ಯಾತ ಕವಿ, ಸಾಹಿತಿ ಡಾ.ಜಯಂತ ಕಾಯ್ಕಿಣಿ ಅವರು ಬೆನ್ನುಡಿ ಬರೆದಿದ್ದಾರೆ. ‘ಬರಿದಾಗದ ಕಣಜ, ಪ್ರೀತಿ, ತೂರಿ ಬರುತ್ತಿದೆ ಬೆಳಕು, ಈ ಇಂಥ ಚಿತ್ರಗಳು, ನಿರಾಕಾರಮಯ, ಕದ್ದರೆಂದು, ಏನು ದ್ವೀಪ- ಇಂಥ ಉತ್ಕೃಷ್ಟ ರಚನೆಗಳನ್ನು ಒಳಗೊಂಡಿರುವ ಈ ಸಂಕಲನದಲ್ಲಿ ನನಗೆ ಅತಿ ಇಷ್ಟ ವಾದವು- ಲ್ಯಾವಿಗಂಟಿನ ಸುತ್ತ, ಗುರುತು, ಮತ್ತು ಸದ್ದು, ಇವು ವಿಭಾ ಮಾತ್ರ ಬರೆಯ ಬಹುದಾದ ಖಾಸ್ ಕವಿತೆಗಳು’ ಎನ್ನುತ್ತಾರೆ ಕಾಯ್ಕಿಣಿ.
ಹಳೆಯ ಬಟ್ಟೆಯ ಗಂಟು ತೆಗೆದು ಅದರೊಳಗಿಂದ ಹೊಸದಾಗಿ ಸೋಕುವ ಕ್ಷಣದ ಚಿತ್ರಣ ‘ಲ್ಯಾವಿಗಂಚಿನ ಸುತ್ತ’ದಲ್ಲಿ ಭಾವೋದ್ವೀಪಕವಾಗಿದೆ. ‘ಗುರುತು’ ಕವಿತೆ ಅತ್ಯಂತ ಆಧುನಿಕವಾದ ಅಸಂಗತ ನಾಗರಿಕ ಕ್ಷಣವೊಂದನ್ನು ವಿಶಿಷ್ಟವಾಗಿ ನೋಡುತ್ತದೆ. ಯಾವುದೋ ಕಛೇರಿಯಲ್ಲಿ ಇದು ನಾನು ಮಾಡಿರುವ ಸಹಿ, ಹಿಂದೆಂದೋ ನಾನೇ ಮಾಡಿದ್ದ ಸಹಿಯೊಂದಿಗೆ ಹೊಂದಿಕೆ ಆಗದ ಹಾಸ್ಯಾಸ್ಪದ ಭಯ ಇಲ್ಲಿದೆ. ಅದು ನಾನೇ ಎಂದು ಎಷ್ಟೇ ಗೋಗರೆದರೂ ಇಲ್ಲ ಸರಿ ಫರಖ್ ಆಗಿದೆ ಅಂತ ಆರೋಪಿಸುತ್ತದೆ ಪುರಾವೆಗಳ ವಾಸ್ತವ. ‘ಸದ್ದು’ ಕವಿತೆಯಲ್ಲಿ ಪುಟ್ಟ ಬಸುರಿಯೊಬ್ಬಳ ಸೂಕ್ಷ್ಮ ಭಾವಪ್ರಪಂಚ ಇದೆ. ಯಾವುದೋ ‘ದಿಂಡಿ’ಯೊಂದರ ಸದ್ದುಗಳು ಆಕೆಯಲ್ಲಿ ಎಬ್ಬಿಸುವ ಅಲೆಗಳು ಆಳವಾಗಿವೆ ಎಂಬುದು ಜಯಂತ ಕಾಯ್ಕಿಣಿ ಅವರ ಅಭಿಪ್ರಾಯ. ಈ ಕವಿತೆಗಳು ಒಟ್ಟಾಗಿ ವಿಭಾ ಅವರ ಮೂಕಲೋಕವೊಂದನ್ನು ನಮ್ಮೆದುರು ತೆರೆದಿಡುತ್ತವೆ.
ವಿಭಾ, ಕನ್ನಡ ಕಾವ್ಯ ಲೋಕದಲ್ಲಿ ಅಚ್ಚಳಿದ ಹೆಸರು.ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೋಕಿನ ಮಹಲಿಂಗಪುರ ಅವರ ಹುಟ್ಟೂರು. ತಂದೆ- ಅರವಿಂದ ತಿರಕಪಡಿ, ತಾಯಿ- ಸಾವಿತ್ರಿ. ಎಂ.ಎ (ಇಂಗ್ಲಿಷ್) ಪದವೀಧರರು ವಿಭಾ, ಬಾಗಲಕೋಟೆಯ ವಿಭಾಗೀಯ ಅಂಚೆ ಕಛೇರಿ ಉದ್ಯೋಗಿಯಾಗಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ‘ಜೀವ ಮಿಡಿತದ ಸದ್ದು’(ಕಾವ್ಯ), ‘ಹರಿವ ನೀರೊಳಗಿನ ಉರಿ’(ಅನುವಾದ ಕಾವ್ಯ), ‘ಬೆತ್ತಲೆ ರಸ್ತೆಯ ಕನಸಿನ ದೀಪ’(ಕೈಫಿ ಅಜ್ಮಿ ಕವಿತೆಗಳ ಅನುವಾದ) ‘ನನ್ನ ಪ್ರೀತಿಯ ಅಪ್ಪ’- ಕೈಫಿ ಅಜ್ಮಿ ಕವಿತೆಗಳು (ಅನುವಾದ) ಕೃತಿಗಳನ್ನು ನೀಡಿದ್ದಾರೆ. ಸಾಹಿತ್ಯ ಸೇವೆಗಾಗಿ ಸತತ ಐದು ವರ್ಷ ಕ್ರೈಸ್ಟ್ ಕಾಲೇಜಿನ ಕಾವ್ಯ ಪ್ರಶಸ್ತಿ, ಸಂಕ್ರಮಣ, ಸಂಚಯ, ಸಕಾಲಿಕ ...
READ MORE