ಪ್ರೀತಿಯ ಜಾತ್ರಿ ಎಂಬುದು ಮೌನೇಶ್ ನವಲಹಳ್ಳಿ ಅವರ ಮೊದಲ ಕವನ ಸಂಕಲನ. ಬದುಕು ಎನ್ನುವುದು ತಾಯಿ ತಂದೆಯಿಂದ ,ಕುಟುಂಬ,ಸಮಾಜ,ಪ್ರಕೃತಿ ಹಾಗೂ ಪ್ರಪಂಚದಿಂದ ಎರವಲು ಪಡೆದು ಬಾಳುವಂತದ್ದು.ಸಾಹಿತ್ಯ ನಮ್ಮ ಅಂತರಂಗದ ಕನ್ನಡಿ ಇದ್ದಂತೆ. ನಮ್ಮನ್ನ ನಾವು ರೂಪುಗೊಳ್ಳಲು ಹೆಣಗಾಡಿದ ಪ್ರಸಂಗಗಳೇ ಈ ಕವಿತೆಗಳು. ಬಾಲ್ಯ,ಯೌವ್ವನ,ಉದ್ಯೋಗ,ಸಂಸಾರ ಮತ್ತು ಒಟ್ಟಾರೆ ಅರಿವಿನೊಂದಿಗಿನ ತಿಕ್ಕಾಟದ ಸಮಯದ ಪ್ರತಿಮಾ ರೂಪ. ನಾನು ಕಾಲದೊಂದಿಗೆ ಕಾದಾಡಿದ, ಮುದ್ದಾಡಿದ, ಪಡೆದಾಡಿದ ಪಯಣವೇ ನನ್ನನ್ನು ಶಬ್ದಕ್ಕೂ ಏಕಾಂತಕ್ಕೂ ದೂಡಿ, ಮನದ ದಡಕೆ ಭಾವನೆಗಳು ಬಡಿದಾಡಿ ಕೊರೆದ ಗಾಯಗಳು,ಚಿಮ್ಮಿದ ಹನಿಗಳೆಲ್ಲಾ ಆವಿಯಾಗಿ, ಘನೀರ್ಭವಿಸಿ ಮಳೆಯಾಗಿ ಕವಿತೆಯ ರೂಪು ತಾಳಿವೆ.ಇದೆಲ್ಲದರ ಜೊತೆಗೆ ಇಂಧನದಂತೆ ಕೆಲಸ ಮಾಡಿದ್ದು ಪ್ರೀತಿಯೆಂಬ ಅರಿವು ಮಾತ್ರ. ಅದಕ್ಕೆ ಇದು 'ಪ್ರೀತಿಯ ಜಾತ್ರಿ'.ಎನ್ನುತ್ತಾರೆ ಲೇಖಕ-ಕವಿ ಮೌನೇಶ್ ನವಲಹಳ್ಳಿ.
ಮೌನೇಶ್ ನವಲಹಳ್ಳಿ ಅವರು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ನವಲಹಳ್ಳಿ ಗ್ರಾಮದವರು. ಕುಷ್ಟಗಿಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ದೂರ ಶಿಕ್ಷಣದಲ್ಲಿ ಡಿಪ್ಲೊಮಾ ಪತ್ರಿಕೋದ್ಯಮ ವ್ಯಾಸಂಗ ಮಾಡಿದ್ದಾರೆ. ಬೆಂಗಳೂರಿನ 'ಅದಮ್ಯ'ರಂಗತಂಡದಲ್ಲಿ ಕೆಲ ಕಾಲ ರಂಗನಟರಾಗಿ ಅಭಿನಯಿಸಿದ್ದಾರೆ.ಸದ್ಯ, ನವಲಹಳ್ಳಿಯಲ್ಲಿ ತಮ್ಮದೇ ಆದ 'ಮೌನಗುರು ವುಡ್ ವರ್ಕ್ಸ'ಎನ್ನುವ ಬಡಗಿತನದ ಕೈಗಾರಿಕೆ ನಡೆಸುತ್ತಿದ್ದಾರೆ. 'ಪ್ರೀತಿಯ ಜಾತ್ರಿ' ಇವರ ಪ್ರಕಟಿತ ಮೊದಲ ಕವನ ಸಂಕಲನ. ...
READ MORE