‘ನನ್ನ ನಲ್ಲ’ ಕೃತಿಯು ಮಧುರಚೆನ್ನ ಹಲಸಂಗಿ ಅವರ ಕವನಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಸಿಂಪಿ ಲಿಂಗಣ್ಣ, ಚಡಚಣ ಅವರು, `ಸಾಹಸ, ತಾಳ್ಮೆ, ಪರಿಶ್ರಮ, ಅದ್ಭುತ ಅನುಭವ, ಸತ್ಯಪ್ರಮಾಣಗಳನ್ನು ಕುರಿತ ನಿಷ್ಠೆ ಇವು ಲೌಕಿಕ ವಿಷಯಗಳ ಸಂಶೋಧನೆಗೂ ಆವಶ್ಯಕವಾಗಿರುವಾಗ, ಪಾರಮಾರ್ಥಿಕ ಸಂಶೋಧನೆಗೆ ತೊಡಗಿದ ಮಧುರಚೆನ್ನರು ಇವುಗಳನ್ನೆಲ್ಲ ಅಳವಡಿಸಿಕೊಂಡು ಸ್ವತಃ ತಮ್ಮ ಬಾಳನ್ನೇ ಪ್ರಯೋಗಕ್ಕೆ ಒಡ್ಡಿ ಆತ್ಮಸಂಶೋಧನೆ ನಡೆಸಿದ ಅಪೂರ್ವ ವ್ಯಕ್ತಿಯಾಗಿದ್ದಾರೆ. ಅವರು ತಮ್ಮ ಬಾಳನಿಂದ, ವ್ಯಾಸಂಗದಿಂದ. ಸಾಧನೆಯಿಂದ ನಮ್ಮ ನಾಡಿನಲ್ಲಿ ಹೊರಹೊಮ್ಮಿಸಿದ ಬೆಳಕು ನಮ್ಮ ನಾಡಿನ ಇಂದಿನ ವೈಭವವಾಗಿದೆ. ಈ ಕೃತಿಯ ಕವಿತೆಗಳು ಹೀಗಿವೆ : ಮೊಲೆಹಾಲ ರುಚಿಗೊಂಡು ಮನದ್ದಾಲ ಬಯಸೇನ ಗುಟುಗುಟುಕಿಗೊಮ್ಮೆ ಮಿಕಿಮಿಕಿ। ಏಳಮ್ಮಾ। ಹಸಿವೀಗಿ ಮೊಲೆಯುಂಡೆ ಕಸಿವಿಸಿಗೇನುಳ್ಳೆ ಹಾಲೊಲ್ಲೆ ಸಾಕು ಬಿಗಿದಪ್ಪ ಏಳಮ್ಯಾ| ಮೊಲೆಹಾಲು ಸಾಕಮ್ಮಾ ಸವಿಲಾಲಿ ಬೇಕಮ್ಮಾ ಮುದ್ದಾಡಿ ರಮಿಸಿ ಮೈದಡವ ಏಳಮ್ಮಾ! ಕವಿಯ ತನುವನ್ನು ನಿಸಿದಿಗೆಗಲ್ಲು ಮಾಡಿರದಿದ್ದರೆ ಮನು ಮಾಸತಿ ಕಲ್ಲು ಮಾಡಿರದಿದ್ದರೆ ಸಾಧನೆಯೊಂದು ವೀರಗಲ್ಲು ಆಗಿ ನಿಲ್ಲುತ್ತಿರಲಿಲ್ಲ. ಕಾವ್ಯರ್ಷಿಯ ಪ್ರಕೃತಿಯ ಅಣುರಚನೆಯೇ ಬೇರೆಯಾಗಿತ್ತು. ಅವರು ಹುಟ್ಟಾ ಕಮಲ, ಕೆಸರಲ್ಲಿ ಹುಟ್ಟಿದರೂ ಕಿತ್ತುಕೊಂಡು ಮೇಲೆದ್ದು ಮುಗಿಲಿಗೆ ಮುಖಮಾಡಿ ನಿಲ್ಲುವದನ್ನು ಅದಕ್ಕೆ ಯಾರೂ ಕಲಿಸಲಾರರು. ಕವಿಯ ಮಾತಿನಲ್ಲಿಯೇ ಆ ಪ್ರಶೋತ್ತರಗಳು ಕಂಗೊಳಿಸುತ್ತವೆ. ಏಳು, ಕಮಲವೆ ನಿನ್ನ ಯಾವ ಕರ್ಮದಿ ಬಂದು ಇಂಥ ಕೆಸರಲ್ಲಿ ಬಿದ್ದೇ? ಹೇಳು, ಕಮಲವೆ ನಿನ್ನ ಯಾವ ಪುಣ್ಯದಿ ಮತ್ತೆ ಮೊಗವೆತ್ತಿ ಮೇಲಕ್ಕೆದ್ದೇ? ಆದರೆ ಆರು ಬಿತ್ತಿದರು ಉರಿಯ ಬಿತ್ತವನ್ನು ನಿನ್ನ ಒಡಲಿನಲ್ಲಿ? ಎಂದು ಕೇಳುವವರಿಗೆ, ಬೆಳೆ ಕೊಡಬೇಕೆಂದು ಅಕ್ಕರೆ ಪಡುವವನು ಅದನ್ನು ಬಿತ್ತಿದನೆಂದು ಧಾರಾಳವಾಗಿ ಹೇಳಬಹುದಾಗಿದೆ. ಆ ಫಸಲು ಜೀವಕೋಟಿಯನ್ನೇ ತಣಿಸಬಲ್ಲದು: ಉಣಿಸಬಲ್ಲದು. ಜೀವನದ ಆರಹ ಮಹಾ ಕೃಷಿ ನಡೆಸಿದ ‘ರಂಟಿಕುಂಟಿ’ಯ ಹೆಚ್ಚು ಪರಿಚಯಕ್ಕೆ ‘ನನ್ನ ನಲ್ಲ'ವನ್ನು ಕೈಗೆತ್ತಿಕೊಳ್ಳಬೇಕು’ ಎಂದು ವರ್ಣಿಸಿದ್ದಾರೆ.
ವರಕವಿ ದ.ರಾ.ಬೇಂದ್ರೆ ಕೃತಿಯ ಮುನ್ನುಡಿಯಲ್ಲಿ ’ಮಧುರಚೆನ್ನರ ಕೃತಿಯಲ್ಲಿ ವ್ಯಂಜನ ಶಕ್ತಿಯು ವಿಫುಲವಾಗಿದೆ. ಇವರ ಭಾವಾವೇಶವು ರಸಿಕರನ್ನು ಅಂತರ್ಮುಖರನ್ನಾಗಿ ಮಾಡುವುದು. ನನ್ನ ನಲ್ಲ ಕವಿತೆಯಲ್ಲಿ ಇವರ ಅಧ್ಯಾತ್ಮಿಕ ಪುನರ್ಜನ್ಮ ವಾಗಿದ್ದರೆ, ದೇವತಾಪೃಥವೀ ಕವನವು ಶಿರೋರತ್ನವಾಗಿದೆ. ಕವನದ ಬಂಧ ಒಂದಕ್ಕಿಂತ ಒಂದು ಚೆಂದ ಎಂದು ಶ್ಲಾಘಿಸಿದ್ದಾರೆ. ಮಾತ್ರವಲ್ಲ; ‘ತನ್ನ ಮನದ ಮಾತನ್ನು ಇನ್ನೊಂದು ಮನದಲ್ಲಿ ಇಳಿಸುವ ಸೃಷ್ಟಿಕ್ರಮದಲ್ಲಿಯೇ ಮಾತು ಮುತ್ತಿಟ್ಟಂತಾಗುವುದಾದರೂ ಮನಕ್ಕೆ ಮನವು ಕೂಡುವ ಮುನ್ನ ಮುತ್ತೂ ಕೂಡ ಮಾತಿಗೆ ಕೀಳಾಗುವುದು. ಇನ್ನೊಂದು ಮನವನ್ನು ಮುಟ್ಟಬೇಕೆಂಬ ಉರ್ಮಿಯು ಕವಿಯಲ್ಲಿ ಬೇಕು’ ಎಂದು ನೇರವಾಗಿ ಮಧುರಚೆನ್ನರ ಕವಿತೆಗಳನ್ನು ವಿಶ್ಲೇಷಿಸಿ, ಇಂತಹ ಗುಣ ಮಧುರಚೆನ್ನರ ಕವಿತೆಗಳಲ್ಲಿದೆ ಎಂದು ಸಂತೋಷಿಸಿದ್ದಾರೆ.
ಸಂಕಲನದಲ್ಲಿ ನನ್ನ ನಲ್ಲ, ಶಾರದೆಗೆ, ಧ್ರುವ, ರೋಹಿಣಿ, ಕೆಸರೊಳಗಿನ ಕಮಲ, ಸುಖ-ದುಃಖ , ಮಧುರಗೀತ ಸೇರಿದಂತೆ ಒಟ್ಟು 15 ದೀರ್ಘ ಕವನಗಳಿವೆ. ಧಾರವಾಡದ ಕರ್ನಾಟಕ ಸಾಹಿತ್ಯ ಮಂದಿರವು 1933ರಲ್ಲಿ (ಪುಟ: 99) ಈ ಕವನ ಸಂಕಲನ ಪ್ರಕಟಿಸಿತ್ತು.
ಮಧುರ ಚೆನ್ನ ಅವರ ಮೂಲ ಹೆಸರು ಚೆನ್ನಮಲ್ಲಪ್ಪ ಗಲಗಲಿ. 1907ರ ಜುಲೈ 31ರಂದು ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಸೀಪದ ಹಿರೇಲೋಣಿಯಲ್ಲಿ ಜನಿಸಿದರು. ತಂದೆ ಸಿದ್ಧಲಿಂಗಪ್ಪ, ತಾಯಿ ಅಂಬವ್ವ. ಹಲಸಂಗಿಯಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ. ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದಿದ್ದರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಮಧುರಚೆನ್ನರು, ಹಲಸಂಗಿ ಗೆಳೆಯರೆಂದೇ ಪ್ರಖ್ಯಾತಿ. ಬಿಜಾಪುರಕ್ಕೆ ಹೋಗಿ ಶ್ರೀ ಕೊಣ್ಣೂರು ಹಣಮಂತರಾಯರಿಂದ ಇಂಗ್ಲಿಷ್, ಸಂಸ್ಕೃತ, ಹಳಗನ್ನಡ ಕಲಿತರು. ಸಂಶೋಧನೆ, ಜನಪದ ಸಾಹಿತ್ಯದ ಅಧ್ಯಯನ, ಆಧ್ಯಾತ್ಮಿಕ ಸಾಹಿತ್ಯದ ವ್ಯಾಸಂಗ, ಬಹುಭಾಷೆಗಳ ಅಭ್ಯಾಸ ಇತ್ಯಾದಿ ಅವರ ಅನನ್ಯವಾದ ಸಾಹಿತ್ಯೋಪಾಸನೆಯ ಪ್ರತೀಕಗಳು. 12 ವರ್ಷದ ಬಸಮ್ಮ ಅವರೊಂದಿಗೆ 16 ವರ್ಷದ ...
READ MORE