ಮಧುರ ಚೆನ್ನ ಅವರ ಮೂಲ ಹೆಸರು ಚೆನ್ನಮಲ್ಲಪ್ಪ ಗಲಗಲಿ. 1907ರ ಜುಲೈ 31ರಂದು ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಸೀಪದ ಹಿರೇಲೋಣಿಯಲ್ಲಿ ಜನಿಸಿದರು. ತಂದೆ ಸಿದ್ಧಲಿಂಗಪ್ಪ, ತಾಯಿ ಅಂಬವ್ವ. ಹಲಸಂಗಿಯಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ. ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದಿದ್ದರು.
ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಮಧುರಚೆನ್ನರು, ಹಲಸಂಗಿ ಗೆಳೆಯರೆಂದೇ ಪ್ರಖ್ಯಾತಿ. ಬಿಜಾಪುರಕ್ಕೆ ಹೋಗಿ ಶ್ರೀ ಕೊಣ್ಣೂರು ಹಣಮಂತರಾಯರಿಂದ ಇಂಗ್ಲಿಷ್, ಸಂಸ್ಕೃತ, ಹಳಗನ್ನಡ ಕಲಿತರು. ಸಂಶೋಧನೆ, ಜನಪದ ಸಾಹಿತ್ಯದ ಅಧ್ಯಯನ, ಆಧ್ಯಾತ್ಮಿಕ ಸಾಹಿತ್ಯದ ವ್ಯಾಸಂಗ, ಬಹುಭಾಷೆಗಳ ಅಭ್ಯಾಸ ಇತ್ಯಾದಿ ಅವರ ಅನನ್ಯವಾದ ಸಾಹಿತ್ಯೋಪಾಸನೆಯ ಪ್ರತೀಕಗಳು.
12 ವರ್ಷದ ಬಸಮ್ಮ ಅವರೊಂದಿಗೆ 16 ವರ್ಷದ ಮಧುರ ಚೆನ್ನ ಅವರೊಂದಿಗೆ ವಿವಾಹವಾಯಿತು. 14ನೇ ವಯಸ್ಸಿನಲ್ಲೇ ಮಧುರಚೆನ್ನರು ಸಾಹಿತ್ಯಸೃಷ್ಟಿ, 19ನೇ ವಯಸ್ಸಿಗೆ ಶಿಲಾಶಾಸನಗಳು ಹಾಗೂ ಜನಪದ ಸಾಹಿತ್ಯ ಸಂಶೋಧನೆಯಲ್ಲಿ ತೊಡಗಿದರು. ಸಿಂಪಿ ಲಿಂಗಣ್ಣ, ಕಾಪಸೆ ರೇವಪ್ಪ, ಪಿ ಧೂಲ್ಲಾ ಅವರೊಂದಿಗೆ ಸೇರಿ ಹಲಸಂಗಿಯಲ್ಲಿ ಗೆಳೆಯರ ಬಳಗವನ್ನು ಕಟ್ಟಿದರು. ಬಾಲ್ಯದಿಂದಲೂ ಅವರದು ಆಧ್ಯಾತ್ಮಿಕತೆಯ ಕಡೆಗೆ ಒಲೆದ ಮನಸ್ಸು ಶ್ರೀ ಅರವಿಂದರನ್ನು ತಮ್ಮ ಗುರುಗಳೆಂದು ಭಾವಿಸಿದರು.
‘ಪೂರ್ವರಂಗ’, ‘ಕಾಳರಾತ್ರಿ’, ‘ಬೆಳಗು’ ಮತ್ತು ‘ಆತ್ಮಸಂಶೋಧನೆ’ ಇವು ಅವರ ಆಧ್ಯಾತ್ಮಿಕ ಸಾಧನೆಯ ಕಥನ ಗದ್ಯಕೃತಿಗಳು. ‘ಸಲಿಗೆಯ ಸಲ್ಲಾಪ’, ‘ನೋಂಪಿ’, ‘ಕೆಸರೊಳಗಿನ ಕಮಲ’, ‘ಸುಖದುಃಖ’, ‘ಸುಖ ಜೀವನ’, ‘ಧ್ರುವ’, ‘ಉಷಾದೇವಿ’, ‘ರೋಹಿಣಿ’, ‘ಮಾವಿನಗೊಲ್ಲೆ-ಇವು ಮಧುರಚೆನ್ನರ ಭಾವಗೀತೆಗಳು.
‘ವಿಜಾಪುರ ಶಾಸನ’, ‘ಅಭಿನವ ಪಂಪ ಮಹಾಕವಿ ಬರೆದ ವಿಜಾಪುರ ಶಿಲಾಲಿಪಿ’, ‘ಪ್ರಾಚೀನ ಕಾಲದ ಒಬ್ಬ ನಟಶ್ರೆಷ್ಟ ಹಾಗೂ ಒಬ್ಬ ಕವಿ’, ‘ಅರ್ಜುನವಾಡದ ಶಾಸನ’ ಇತ್ಯಾದಿ ಕೃತಿಗಳ ಮೂಲಕ ತಮ್ಮ ಸಂಶೋಧನೆಯ ತೀಕ್ಷಣತೆಯನ್ನು ತೋರಿದ್ದಾರೆ. ಅರವಿಂದ ಸಾಹಿತ್ಯ, ಶರಣ ಸಾಹಿತ್ಯ, ಜನಪದ ಸಾಹಿತ್ಯ, ಭಾಷಾಶಾಸ್ತ್ರ ಇತ್ಯಾದಿ ವಿಷಯಗಳಡಿ ಬರೆದ ಲೇಖನಗಳು ಕನ್ನಡ ಸಾಹಿತ್ಯಕ್ಕೆ ನೀಡಿದ ಮಹತ್ವದ ಕೊಡುಗೆಗಳಾಗಿವೆ. ‘ಗರತಿಯ ಹಾಡು’, ‘ಮಲ್ಲಿಗೆ ದಂಡೆ’, ‘ಜೀವನ ಸಂಗೀತ’ ಈ ಜನಪದ ಹಾಡುಗಳ, ಲಾವಣಿಗಳ ಸಂಗ್ರಹಗಳು ಇಂದಿಗೂ ಅನುಪಮ ಸಾಹಿತ್ಯ ಕೃತಿಗಳಾಗಿ ಉಳಿದಿವೆ.
ನನ್ನ ನಲ್ಲ (ಕವನಸಂಗ್ರಹ), ಪೂರ್ವರಂಗ (ಆಧ್ಯಾತ್ಮಿಕ ಆತ್ಮಕಥನ), ಕಾಳರಾತ್ರಿ, ಬೆಳಗು, ಆತ್ಮಸಂಶೋಧನೆ (ಸ್ವಾನುಭವ ಕಥನ), ಪೂರ್ಣಯೋಗದ ಪಥದಲ್ಲಿ (ಅರವಿಂದರ ಯೋಗ ವಿಚಾರಗಳು), ಕನ್ನಡಿಗರ ಕುಲಗುರು (ವಿದ್ಯಾರಣ್ಯರ ಜೀವನದ ಬಗೆಗೆ ಸಿಂಪಿ ಲಿಂಗಣ್ಣನವರ ಜೊತೆಯಲ್ಲಿ ರಚನೆ)-ಇವು ಪ್ರಸಿದ್ಧ ಕೃತಿಗಳು.
ವಿಸರ್ಜನ (ರವೀಂದ್ರನಾಥ ಠಾಕೂರರ ಬಂಗಾಲಿ ನಾಟಕದಿಂದ), ಪೂರ್ಣಯೋಗ (ಶ್ರೀ ಅರವಿಂದರ 'ಯೋಗಿಕ ಸಾಧನ'ದಿಂದ), ಮಾತೃವಾಣಿ (ಶ್ರೀ ಮಾತೆಯವರ 'ವರ್ಡ್ಸ ಆಫ್ ದ ಮದರ್'ದಿಂದ), ಬಾಳಿನಲ್ಲಿ ಬೆಳಕು (ಟಾಲ್ ಸ್ಟಾಯ್ ರ ಆತ್ಮಕಥನ: ಸಿಂಪಿ ಲಿಂಗಣ್ಣನವರ ಜೊತೆಯಲ್ಲಿ), ಧರ್ಮಕ್ಷೇತ್ರೆ ಕುರುಕ್ಷೇತ್ರೆ (ಸಿಂಪಿ ಲಿಂಗಣ್ಣನವರ ಜೊತೆಯಲ್ಲಿ)-ಇವು ಅನುವಾದ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳು.
ಬಿಜಾಪುರದಲ್ಲಿ ನಡೆದ 9ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 'ಬೀಸುವ ಕಲ್ಲಿನ ಹಾಡುಗಳು' ಪ್ರಬಂಧ ಮಂಡಿಸಿ ವಿದ್ವತ್ ಜನರಿಂದ ಪ್ರಶಂಸೆ. ಸೊಲ್ಲಾಪುರದಲ್ಲಿ 33ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆಯ ಗೌರವ ದೊರೆತಿದೆ. ಅವರು 1953 ಆಗಸ್ಟ್ 15 ರಂದು ನಿಧನರಾದರು.