‘ನದಿಯ ತೀರದ ನಡಿಗೆ’ ರಂಗನಾಥ ಕಂಟನಕುಂಟೆ ಅವರ ಕವನ ಸಂಕಲನ. ಇದು ತಮ್ಮ ಸಮಕಾಲೀನ ಸಮಾಜದ ಆಗುಹೋಗುಗಳಿಗೆ ತುಡಿವ ಕವಿತೆಗಳನ್ನು ಒಳಗೊಂಡಿರುವ ಸಂಕಲನವಾಗಿದೆ. ಇಲ್ಲಿನ ಕವಿತೆಗಳು ಕಣ್ಣೆದುರಿನ ಅನ್ಯಾಯ, ಕೌರ್ಯಕ್ಕೆ ವಿರುದ್ಧ ನಿಲ್ಲುತ್ತವೆ. ಹತಾಶೆಯನ್ನು ಪಕ್ಕಕ್ಕಿಟ್ಟು ಪ್ರತಿಭಟಿಸುತ್ತವೆ. ಕವಿ ನಶಿಸುತ್ತಿರುವ ಅಸಂಖ್ಯಾತ ಜೀವರಾಶಿ, ಸಸ್ಯರಾಶಿಯ ಕುರಿತು ಮರುಗುತ್ತಾನೆ. ಬಡವ-ಬಲಹೀನರಿಗೆ ಬದುಕುವ ದಾರಿಗಳಿಲ್ಲವೆಂಬ ಸಾಮಾಜಿಕ ಸತ್ಯವನ್ನು ತಮ್ಮ ಪದ್ಯಗಳಲ್ಲಿ ನಿರೂಪಿಸಿದ್ದಾರೆ.
ಕವಿ, ಲೇಖಕ, ಚಿಂತಕರಾದ ರಂಗನಾಥ ಕಂಟನಕುಂಟೆಯವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಕಂಟನಕುಂಟೆಯಲ್ಲಿ ಪೂರ್ಣಗೊಳಿಸಿದ ರಂಗನಾಥ್ ಅವರು ಸರ್ಕಾರಿ ಪದವಿ ಪೂರ್ಣ ಕಾಲೇಜು ದೊಡ್ಡಬಳ್ಳಾಪುರದಲ್ಲಿ ಪಿಯುಸಿ ಮುಗಿಸಿ, ಶ್ರೀಕೊಂಗಾಡಿಯಪ್ಪ ಕಾಲೇಜಿನಲ್ಲಿ ಐಚ್ಛಿಕ ಕನ್ನಡದಲ್ಲಿ ಪದವಿ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅವರು ಆನಂತರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ನಡುವಿನ ಸಂಘರ್ಷದ ನೆಲೆಗಳು ಎಂಬ ವಿಷಯದಡಿ ತಮ್ಮ ಪಿಎಚ್.ಡಿ ಮುಗಿಸಿದ್ದಾರೆ. ಕಳೆದ ಇಪತ್ತು ವರ್ಷಗಳಿಂದ ಅಧ್ಯಾಪಕರಾಗಿ ...
READ MOREಪುಸ್ತಕ ಪರಿಚಯ: ಹೊಸತು- ಏಪ್ರಿಲ್-2009
ಕಾಲ ಬದಲಾಗುತ್ತಿದೆ. ಪ್ರಾಚೀನ ಕವಿಗಳು ಶೃಂಗಾರ- ಸೌಂದರ್ಯ-ರಾಜಭೋಗ ಎಂದೆಲ್ಲ ಬಡಬಡಿಸಿದರು. ಕಾಲಸರಿದಂತೆ ಕವಿಗಳೆಲ್ಲ ಭಾವಜೀವಿಗಳಾದರು. ಅವರೆಲ್ಲರ ಕಾಲ ಹಾಗಿತ್ತು, ಬರೆದರು. ಹಿಂದೆಯೂ ಸಾಕಷ್ಟು ಕೌರ್ಯವಿತ್ತು ಯುದ್ಧಗಳೆಲ್ಲ ಲೋಕ ಕಂಟಕರ ನಾಶಕ್ಕಾಗಿ ಎಂದರು. ಯಾರೂ ಪ್ರತಿಭಟಿಸಲಿಲ್ಲ. ಆದರೆ ಇಂದಿನ ನಮ್ಮ ಕವಿಗಳು ಹಾಗಲ್ಲ ಕಣ್ಣೆದುರಿನ ಅನ್ಯಾಯ, ಕೌರ್ಯ ಕಂಡು ರೋಸಿಹೋಗಿದ್ದಾರೆ. ಹತಾಶೆಗೊಂಡ ಅವರು ಕಣ್ಣುಗಳನ್ನು ಬೆಂಕಿಯುಂಡೆ ಮಾಡಿಕೊಂಡು ಪ್ರತಿಭಟಿಸಿ ಬರೆಯುತ್ತಿದ್ದಾರೆ. ಅಸಂಖ್ಯಾತ ಜೀವರಾಶಿ, ಸಸ್ಯರಾಶಿ ನಶಿಸುತ್ತಿದ್ದು, ಬಡವ-ಬಲಹೀನರಿಗೆ ಬದುಕುವ ದಾರಿಗಳಿಲ್ಲವೆಂಬ ಸಾಮಾಜಿಕ ಸತ್ಯವನ್ನು ಪದ್ಯಗಳಲ್ಲಿ ನಿರೂಪಿಸಿದ್ದಾರೆ.