ಕವಿ, ಲೇಖಕ, ಚಿಂತಕರಾದ ರಂಗನಾಥ ಕಂಟನಕುಂಟೆಯವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಕಂಟನಕುಂಟೆಯಲ್ಲಿ ಪೂರ್ಣಗೊಳಿಸಿದ ರಂಗನಾಥ್ ಅವರು ಸರ್ಕಾರಿ ಪದವಿ ಪೂರ್ಣ ಕಾಲೇಜು ದೊಡ್ಡಬಳ್ಳಾಪುರದಲ್ಲಿ ಪಿಯುಸಿ ಮುಗಿಸಿ, ಶ್ರೀಕೊಂಗಾಡಿಯಪ್ಪ ಕಾಲೇಜಿನಲ್ಲಿ ಐಚ್ಛಿಕ ಕನ್ನಡದಲ್ಲಿ ಪದವಿ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅವರು ಆನಂತರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ನಡುವಿನ ಸಂಘರ್ಷದ ನೆಲೆಗಳು ಎಂಬ ವಿಷಯದಡಿ ತಮ್ಮ ಪಿಎಚ್.ಡಿ ಮುಗಿಸಿದ್ದಾರೆ. ಕಳೆದ ಇಪತ್ತು ವರ್ಷಗಳಿಂದ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ರಂಗನಾಥ್ ಹಲವು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಓದು ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಂಗನಾಥ್ ಅವರ ಹಲವಾರು ಕೃತಿಗಳು ಪ್ರಕಟವಾಗಿವೆ. ಅವರ ಸಂಶೋಧನಾ ಕೃತಿ- ಜನಭಾಷೆ ಮತ್ತು ಪ್ರಭುತ್ವಗಳ ಸಂಘರ್ಷ. ಲೇಖನ ಸಂಕಲನ-ಜನರ ವ್ಯಾಕರಣ. ವಿಮರ್ಶಾತ್ಮಕ ಕೃತಿ- ರಹಮತ್ ತರೀಕೆರೆ. ಭಾಷೆ ಮತ್ತು ಶಿಕ್ಷಣ ಕುರಿತ ಲೇಖನಗಳ ಸಂಕಲನ- ಸೇನೆಯಿಲ್ಲದ ಕದನ, ಹಾಗು ವಿಮರ್ಶೆಯ ಲೇಖನಗಳ ಸಂಕಲನ : ಓದಿನ ಜಾಡು. ರಂಗನಾಥ್ ಕಂಟನಕುಂಟೆಯವರ ಸಂಪಾದಿತ ಕೃತಿಗಳು : ಅರಿವಿನ ಅಡಿಗೆ (2015) ಮತ್ತು ಸರ್ಪಭೂಷಣ ಶಿವಯೋಗಗಳ ‘ಕೈವಲ್ಯ ಕಲ್ಪವಲ್ಲರಿ’(2017), ಕವನ ಸಂಕಲನಗಳು: ನದಿಯ ತೀರದ ನಡಿಗೆ (2008), ಸೋರೆದೋಣಯ ಗೀತ (2007), ಗೋಡೆಯ ಚಿತ್ರ (2011)ಹಾಗೂ ದೇವನೇಗಿಲು(2016) ಸೇರಿದಂತೆ ಹಲವಾರು ಕೃತಿ, ಲೇಖನಗಳನ್ನು ಬರೆದಿದ್ದಾರೆ.