‘ಮಣ್ಣ ಕುಸುಮದ ಹಕ್ಕಿ’ ಜಾನಪದ ತಜ್ಞ, ಲೇಖಕ ಡಾ. ಕುರುವ ಬಸವರಾಜ್ ಅವರ ಕವನ ಸಂಕಲನ. ಈ ಕೃತಿಗೆ ಎಸ್. ನಟರಾಜ ಬೂದಾಳು ಅವರ ಬೆನ್ನುಡಿ ಬರಹವಿದೆ. ಚರಿತ್ರೆ ನಮ್ಮ ಪಾಲಿಗೆ ಎಂದೂ ಒಳಿತಿನ ಗಣಿಯಾಗಿರಲಿಲ್ಲ. ಅಲ್ಲೂ ಕೇಡಾಳು ದೆವ್ವಗಳು ಕುಣಿಯುತ್ತಿದ್ದವು. ನಡುನಡುವೆ ಕರುಣಾಮೈತ್ರಿಗಳ ಕಿರುದೇವಿಗೆಯೊಂದು ಉರಿಯುತ್ತಿತ್ತು. ಅಂತಹ ಕಿರುದೀಪವೊಂದರ ಬೆಳಕೆಂಬಂತೆ ಈ ಕಥನ ಕವನ ‘ಮಣ್ಣ ಕುಸುಮದ ಹಕ್ಕಿ’ ಹರಡಿ ಬೆಳಗಿದೆ. ನಿರಂತರ ಬದಲಾವಣೆಗೆ ತೆರೆದುಕೊಂಡ ಸಮೂಹಕ್ಕೆ ಇರಬಾರದ ವಿಸ್ಮೃತಿಯೊಂದರ ದಾರುಣ ಪರಿಣಾಮವನ್ನು ಪರಮನೆಂಬೋ ಕುಂಬಾರ ಹುಡುಗನ ನೆಪದಲ್ಲಿ ಈ ಕಥನ ಕವನ ಕಟ್ಟಿಕೊಡುತ್ತದೆ. ಗೆಳೆಯ ಕುರುವ ಜನಪದರ ಬದುಕಿನ ಸಂಕಟಗಳನ್ನು ಕುರಿತು ನಿರಂತರ ಧೇನಿಸುತ್ತಾ ಬಂದವರು. ಅವರೊಡನಾಟದಲ್ಲಿ ಅವರು ಕಳಕೊಂಡದ್ದನ್ನು ಕಂಡು ಮರುಗುತ್ತಲೇ ಬಂದವರು.
ಆಧುನೀಕತೆಯೆಂಬ ಹೆಸರಿನ ಮುಖವಿಲ್ಲದ ಬದುಕಿನ ಕಡೆಗೆ ದಾಪುಗಾಲಿಡುತ್ತಾ ಹೊರಟ ಸಮೂಹದೊಡನೆ ಮಾತುಕತೆಗಿಳಿಯುವ ಧೈರ್ಯ ಕವಿಗೆ ಮಾತ್ರವೇ ಇರುತ್ತದೆ. ಮನುಷ್ಯನ ಅಂತರಂಗದಲ್ಲಿರುವ ನಿಸರ್ಗ ವಿವೇಕ ಮತ್ತೆ ಎಚ್ಚರಾದಾಗ ಇದು ಕೇಳಿಸೀತು ಎನ್ನುವ ವಿಶ್ವಾಸವೊಂದು ಕವಿಗೆ ಇರುವುದರಿಂದಲೇ ಇಂತಹ ಕಾವ್ಯ ಸಂವಾದವೊಂದ ನಮ್ಮ ನಡುವೆ ಮೂಡಲು ಸಾಧ್ಯ. ಅನಾಥವಾದ ಕುಂಬಾರ ವೃತ್ತಿಯನ್ನು ಧ್ವನಿಸುವ ಹಾಗೆ ಏಕಾಕಿಯಾದ ಪರಮನ ಜೀವನಯಾನವನ್ನು ಜನಪದರ ಅನೇಕ ಮಟ್ಟುಗಳನ್ನು ನಿರ್ವಹಿಸಬಲ್ಲ ಕುರುವ ಅವುಗಳನ್ನು ಬಳಸಿ ಹೆಣ್ಣಿಗೆ ಮಾಡಿದ್ದಾರೆ. ಅನೇಕ ಜಾನಪದೀಯ ಮಟ್ಟುಗಳು ಈ ಕಥನ ಕವನದ ಉದ್ದಕ್ಕೂ ಅನುರಣಿಸುತ್ತವೆ ಎಂದಿದ್ದಾರೆ ಎಸ್. ನಟರಾಜ ಬೂದಾಳು.
ಲೇಖಕ, ಜಾನಪದ ತಜ್ಞ ಕುರುವ ಬಸವರಾಜ್ ಅವರು ಮೂಲತಃ ಹಳೆಯ ಶಿವಮೊಗ್ಗ, ಈಗಿನ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕುರುವ ಗ್ರಾಮದವರು. ಜಾನಪದ ಲೋಕದಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕರ್ನಾಟಕ ವಿ.ವಿ.ಯಿಂದ ಎಂ.ಎ(ಕನ್ನಡ) ಪದವಿ ಮತ್ತು ಬೆಂಗಳೂರು ವಿ.ವಿ.ಯಲ್ಲಿ ‘ಜನಪದ ಮಹಾಕಾವ್ಯಗಳ ನಿರ್ಮಾಣ ಪ್ರತಿಭೆಯ ನೆಲೆಗಳು’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ಜಾನಪದ ಅಕಾಡೆಮಿ ಫೆಲೋಷಿಪ್ ಗಾಗಿ ಕರ್ನಾಟಕ ಜನಪದ ಸಂಗೀತ ಅಧ್ಯಯನ ಮಾಡಿದ್ದಾರೆ. ಪ್ರಕಟಿತ ಕೃತಿಗಳು: ಹುಲ್ಲೆಹಾಡು, ಕಾಡೊಡಲ ಹಾಡು, ಬೇಲಿ ಮ್ಯಾಗಳ ಹೂವು, ಮಣ್ಣ ಕುಸುಮದ ಹಕ್ಕಿ (ಕಾವ್ಯಸಂಗ್ರಹಗಳು) ಸೆಳೆತ, ...
READ MORE