‘ಹುಡುಕುವ ಆಟ’ ಕೃತಿಯು ಹೇಮಾ ವೆಂಕಟ್ ಅವರ ಕವನಸಂಕನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಕಣ್ಣೀರನ್ನೇ ಕುಡಿದು / ಎಷ್ಟು ದಿನ ಬದುಕಲಿ? / ಈ ಅಧ್ಯಾಯ / ಇಲ್ಲಿಗೇ ಮುಗಿದು ಬಿಡಲಿ. (ಪಿರಾಮಿಡ್) ಎಂದು ಮನಮುಟ್ಟುವಂತೆ ಬರೆಯುವ ಹೇಮಾ ವೆಂಕಟ್ , ಕವಿತೆಗಳಲ್ಲಿ ಒಂದು ನೋವಿನ ಎಳೆ ಉದ್ದಕ್ಕೂ ಇರುವಂತೆ ಕಾಣುತ್ತದೆ. ಅದು ಅನೇಕ ಕವಿತೆಗಳಲ್ಲಿ ಸ್ಥಾಯಿಯಾಗಿದೆ. ಅವರ ಕವಿತೆಗಳ ಬಗ್ಗೆ ಬರೆದಿರುವ ವಿಮರ್ಶಕ ಓ.ಎಲ್.ನಾಗಭೂಷಣಸ್ವಾಮಿ `ಹೇಮಾ ಅವರ ಕವಿತೆಗಳು ಸಂಚಾರಿ ಭಾವಗಳನ್ನು ನೆಚ್ಚಿಕೊಂಡ ಕವಿತೆಗಳು. ಯಾವುದೋ ಸಂಗತಿ, ನೋಟ, ಸಂಬಂಧದ ಒಂದು ಗಳಿಗೆ ಮನಸ್ಸಿನಲ್ಲಿ ಹುಟ್ಟಿಸುವ ಭಾವ ವಿಚಾರ ಅಥವಾ ಕವಿತೆಯಾಗಿಸುವತ್ತ ಹೇಮಾ ಅವರ ಒಲವಿದೆ‘ ಎಂದಿದ್ದಾರೆ. ಈ ಸಂಕಲನದ ಮುಖ್ಯ ಕವಿತೆಯಾದ `ಹುಡುಕುವ ಆಟ‘ ವನ್ನೇ ನೋಡಬಹುದು. ಮೂವತ್ತು ಬೇಸಿಗೆ ಬಿಸಿಲು / ಮಳೆಗಾಲದ ಜಡಿಮಳೆ / ಚಳಿಗಾಲದ ಥಂಡಿ / ಅವನಲ್ಲಿ ನಾನಿಲ್ಲಿ / ಸದಾ ಹುಡುಕಾಟದಲ್ಲಿ ಎನ್ನುವ ಕವಿ ಇನ್ನೂ ಆಟ ಮುಗಿಸಿಲ್ಲ. ಕೊನೆಯಲ್ಲಿ ಹೇಳುತ್ತಾರೆ: ಅವನು ಸೋತಿಲ್ಲ / ನಾನು ಗೆದ್ದಿಲ್ಲ / ಅವನು ಗೆದ್ದಿಲ್ಲ / ನಾನು ಸೋತಿಲ್ಲ . ಅಂದರೆ ಹುಡುಕಾಟ ಮತ್ತು ಬದುಕಿನ ಆಟ ಎರಡು ಮುಂದುವರೆದಿರುವುದನ್ನು, ಬದುಕಿನ ನಿರಂತರ ಚಲನಶೀಲತೆಯನ್ನು ಈ ಕವಿತೆ ಧ್ವನಿಸುತ್ತದೆ. ಬದುಕಿನ ಹುಡುಕಾಟವೇ ಮುಖ್ಯವಾಗಿರುವ ಅವರ ಕವಿತೆಗಳಲ್ಲಿ ಬದುಕಿನ ಕುರಿತ ಸಂಭ್ರಮ ಕಡಿಮೆ. ಅಂತರಂಗದ ವಿಷಾದದ ಕಡೆಗೆ ಚಲಿಸುವ ಪಯಣವಾಗಿದೆ ಇಲ್ಲಿನ ಕವಿತೆಗಳು' ಎಂದು ಪ್ರಶಂಸಿಸಿದ್ದಾರೆ.
ಕವಯತ್ರಿ, ಪತ್ರಕರ್ತೆ ಹೇಮಾ ವೆಂಕಟ್ ಅವರು 1973 ರ ಜುಲೈ 31 ರಂದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದರು. ತಂದೆ ಶಂಕರನಾರಾಯಣ, ತಾಯಿ ಹೇಮಾವತಿ. ’ನನ್ನ ಕಾಯುವ ನೆರಳು, ಹುಡುಕುವ ಆಟ’ ಪ್ರಮುಖ ಕೃತಿಗಳು. ’ಕಡೆಂಗೋಡ್ಲು ಶಂಕರಭಟ್ ಸ್ಮಾರಕ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದಿಂದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನಕ್ಕೆ ಭಾಜನರಾಗಿದ್ಧಾರೆ. ...
READ MORE