ಗದ್ಯಗಂಧಿ: ಕವಿತೆಗಳು

Author : ಎಂ.ಆರ್. ಕಮಲ

Pages 72

₹ 70.00

Buy Now


Year of Publication: 2020
Published by: ಕಥನ ಪ್ರಕಾಶನ
Address: #15 ‘ಕಥನ’, 7ನೇಯ ಬಿ ಅಡ್ಡರಸ್ತೆ, ಗಾರ್ಡಲ್ ವಿಲ್ಲಾಸ್, ನಾಗರಬಾವಿ, ಬೆಂಗಳೂರು- 560072
Phone: 9448334622

Synopsys

‘ಗದ್ಯಗಂಧಿ’: ಕವಿತೆಗಳು ಕವಿ ಎಂ. ಆರ್. ಕಮಲ ಅವರ ಕವನ ಸಂಕಲನ. ಈ ಕೃತಿಯ ಕುರಿತು ಬರೆಯುತ್ತಾ ನೆನಪುಗಳ ಜೊತೆ ಹರಿವ ಕವಿ ಮನಸು ಒಂದೊಂದೇ ನೆನಪನ್ನೂ ಪೊಣಿಸುತ್ತಾ ಸಾಗುತ್ತದೆ. ಕೃತಿ ಪರಿಚಯಕ್ಕೆಂದು ಅವರೇ ಬರೆದ ಸಾಲುಗಳು- ‘ಕಾಲಕ್ಕೇ ಉಸಿರುಗಟ್ಟಿದೆ. ಋತುಮಾನಗಳು ಆಯಾಸದಿಂದ ರೆಪ್ಪೆ ಮುಚ್ಚಿ ತೆರೆಯುತ್ತಿವೆ. ಸಾವಿರ ಸಂಬಂಧಗಳನ್ನು ನೇಯ್ದು ಮಾಡಿದ ಅವಳ ಸೀರೆ ಅಲ್ಲಲ್ಲಿ ಎಳೆ ಬಿಟ್ಟುಕೊಳ್ಳುತ್ತಿದೆ. ರಾಗ ಮಾಲಿಕೆಯ ನೆನಪುಗಳಲ್ಲಿ `ಮೋಹನ' ರಾಗ ಬಂದು ಹೋಗಿದ್ದೇ ತಿಳಿಯಲಿಲ್ಲ. ಬದುಕಿನ ಮೃದಂಗದ `ತೀರ್ಮಾನ'ಗಳು ಆದಿಯೋ ಅಂತ್ಯವೋ? ಬೆಳಕಿನ ಮೇಲೆ ಕತ್ತಲ ಹೊದಿಕೆಯೋ, ಕತ್ತಲಿನ ಮೇಲೆ ಬೆಳಕಿನ ಹೊದಿಕೆಯೋ? ತಿಳಿಯುತ್ತಿಲ್ಲ. ಮಳೆಹನಿಗಳ ನಡುನಡುವೆ ದಾರಿ ಮಾಡಿಕೊಂಡು ಓಡಾಡುತ್ತಿದ್ದವಳು, ನಿಶ್ಯಬ್ದದಲ್ಲಿ ಶಬ್ದವನ್ನು ಹುಡುಕಿಕೊಂಡಿದ್ದವಳು! ಅವಳಿಗೂ ವಿಸ್ಮೃತಿಯ ನದಿಗೆ ಜಾರುವ ಭಯ! ಹಾಗೆಂದೇ ಎದೆಯ ಪೆಟ್ಟಿಗೆಯಲ್ಲಿ ಮುಚ್ಚಿಟ್ಟ ಒಂದೊಂದೇ ನೆನಪಿನ `ನಕ್ಷತ್ರ'ವನ್ನು ತೆಗೆದು ಗೋಡೆಗೆ, ಬೀದಿಗೆ ತೂಗು ಹಾಕುತ್ತಿದ್ದಾಳೆ. ಬಂದವರೆಲ್ಲ ಅದರ ಹೊಳಪಿನಲ್ಲಿ ಒಳಗು-ಹೊರಗನ್ನು ನೋಡಿಕೊಳ್ಳಲಿ! ಅವಳ ನೆನಪುಗಳಿಗೆ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳಿವೆ. ಕಾಲದಲ್ಲಿ ಮಾಸದ ಚೆಲುವಿದೆ. ವರ್ತಮಾನದ ಸಂಕಷ್ಟಗಳಿಗೆ ಸವಾಲೊಡ್ಡುವ ಸತ್ವವಿದೆ. ಸೊಗಡಿನ ಒಂದು ಅವರೆ ಹೊಲ, ಒಂದೇ ತೆಂಗಿನ ಗಿಡದ ನೆನಪು ಕಾಲಕ್ಕೆ ಉಸಿರು ತುಂಬಬಲ್ಲದು!’ ಹೀಗೆ ಮಾಗಿದ ಬದುಕು ಸಾಗಿದ ದಾರಿಯ ತುಂಬಾ ಅಲೆದಾಡುವ ಇಲ್ಲಿಯ ಕವಿತೆಗಳು ಎಂಥಹವರನ್ನು ಸೆಳೆದು ನಿಲ್ಲಿಸುತ್ತವೆ.

About the Author

ಎಂ.ಆರ್. ಕಮಲ
(27 March 1959)

ಕವಿ-ಅನುವಾದಕಿಯಾಗಿ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಎಂ.ಆರ್. ಕಮಲಾ ಅವರು ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಮೇಟಿಕುರ್ಕೆಯವರು. 1959ರ ಮಾರ್ಚ್‌ 27ರಂದು ಜನಿಸಿದರು. ತಂದೆ ಎಂ.ಎಚ್. ರಾಮಸ್ವಾಮಿ, ತಾಯಿ ವಿಶಾಲಾಕ್ಷಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ಎಲ್.ಎಲ್.ಬಿ. ಪದವಿ, ಸ್ನಾತಕೋತ್ತರ ಪರೀಕ್ಷೆಯಲ್ಲಿ ಪಾಶ್ಚಿಮಾತ್ಯ ಸಾಹಿತ್ಯ ಅಧ್ಯಯನಕ್ಕಾಗಿ ಬಿಎಂಶ್ರೀ ಚಿನ್ನದ ಪದಕ ವಿಜೇತರು.  ಫ್ರೆಂಚ್ ಭಾಷೆಯಲ್ಲಿ ಪದವೀಧರರು. ಶಕುಂತಲೋಪಾಖ್ಯಾನ (1988), ಜಾಣೆ ಮತ್ತು ಇತರ ಕವಿತೆಗಳು (1992), ಹೂವು ಚೆಲ್ಲಿದ ಹಾದಿ (2007), ಮಾರಿಬಿಡಿ (2017) ಕವನ ಸಂಕಲನಗಳು. ಆಫ್ರಿಕನ್-ಅಮೆರಿಕನ್ ಮತ್ತು ಅರಬ್ ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ’ಕತ್ತಲ ಹೂವಿನ ಹಾಡು (1989) ...

READ MORE

Reviews

ʼಗದ್ಯಗಂಧಿ ಕವಿತೆಗಳುʼ ಕೃತಿಯ ಪುಸ್ತಕ ವಿಮರ್ಶೆ- ಹೊಸ ಮನುಷ್ಯ

ಎಂ.ಆರ್.ಕಮಲ ಅವರ 'ಗದ್ಯಗಂಧಿ' ಜೋರಾಗಿ ಓದುತ್ತಿದ್ದೆ. ಕೇಳಿಸಿಕೊಳ್ಳುತ್ತಿದ್ದ ಗೆಳತಿ ಖುಷಿಗೊಂಡಳು, ಪುಸ್ತಕದ ಕಡೆ ಕಣ್ಣು ಹಾಯಿಸಿದಳು. ಅರೆ, ನೀನು ಇದುವರೆಗೂ ಓದಿದ್ದು ಪದ್ಯ ಅಲ್ವಾ, ಇದು ನೋಡಿದರೆ ಗದ್ಯ ಎಂದು ಅಚ್ಚರಿಪಟ್ಟಳು. ಇದೇ ಗದ್ಯಗಂಧಿಯ ವಿಶೇಷತೆ. ಕಮಲ ಈಗಾಗಲೇ ತಮ್ಮ ಸೂಕ್ಷ್ಮ ಸಂವೇದನೆಯುಳ್ಳ ಅನೇಕ ಕವಿತೆಗಳ ಮೂಲಕ, ಅನುವಾದ ಕವಿತೆಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅಪ್ತ ಬರಹದ ಭರವಸೆಯ ಕವಯಿತ್ರಿ,ಈ ಕೃತಿಯಲ್ಲಿ ಒಂದು ವಿನೂತನ ಶೈಲಿಯ ಪ್ರಯೋಗ ಮಾಡಿದ್ದಾರೆ. ಹಿನ್ನುಡಿಯಲ್ಲಿ ತಿಳಿಸಿರುವಂತೆ “ನೆನಪು , ಕನಸು ಮತ್ತು ಕನವರಿಕೆಗಳ” ಹದನಾದ ಸಂಯೋಗ ಇಲ್ಲಿದೆ. “ವಿಶಿಷ್ಟ ಕಾವ್ಯ ಗುಣವುಳ್ಳ ಕಥಾ ನಿರೂಪಣೆ” ಎಂಬುದು ಗದ್ಯದ ವ್ಯಾಖ್ಯೆ, ಆಖ್ಯಾಯಿಕೆ ಮತ್ತು ಕತೆ ಎಂಬ ಪ್ರಬೇಧಗಳನ್ನು ಗದ್ಯದಲ್ಲಿ ಗುರುತಿಸಲಾಗಿದೆ. ಅದರಲ್ಲಿ ಆಖ್ಯಾಯಿಕೆಗೆ ಕಥಾನಾಯಕನು ನಿರೂಪಕನೂ ಆಗಿರುತ್ತಾನೆ. ವರ್ಡ್ವವರ್ತ್ ಛಂದೋಬದ್ದ ರಚನೆಗಳ ಭಾಷೆಗೂ ಗದ್ಯ ಭಾಷೆಗೂ ಯಾವುದೇ ಮೂಲಭೂತ ವ್ಯತ್ಯಾಸ ಇಲ್ಲ ಎಂದೂ, ತೀವ್ರ ಭಾವಗಳ ಸ್ವಚ್ಛಂದ ಪ್ರವಾಹ ಎಂದೂ ಕಾವ್ಯ ಭಾಷೆಯನ್ನು ಕುರಿತು ಹೇಳಿದ್ದಾನೆ. ಆಯಾ ಕಾಲದ ಸಂಪ್ರದಾಯಗಳಿಗನುಗುಣವಾಗಿ ಕವಿಗಳು ಭಾಷೆಯ ವಿಚಾರದಲ್ಲಿ ಹೆಚ್ಚು ಅಥವಾ ಕಡಿಮೆ ಸ್ವಾತಂತ್ರ್ಯ ವಹಿಸಿದ್ದಾರೆ. ಕಾವ್ಯ, ಪರಿಣಾಮ ಬೀರುವುದರಲ್ಲಿ ಯಶಸ್ವಿಯಾಯಿತೇ ಎಂಬುದಷ್ಟೇ ಈ ಸ್ವಾತಂತ್ರ್ಯದ ಸಮರ್ಥನೆಗೆ ಅಧಾರ ಎಂಬೆಲ್ಲ ಸಂಗತಿಗಳನ್ನು ಗಮನಿಸಿದಾಗ ಗದ್ಯ ಗಂಧಿಗೆ ಹೆಚ್ಚು ಪುಷ್ಠಿ ಸಿಗುತ್ತದೆ. ಬಾಲ್ಯದಲ್ಲಿ ತೀವ್ರವಾಗಿ ಅನುಭವಿಸುವ ಮತ್ತದು ಈಗಲೂ ಕವಯಿತ್ರಿಯೊಳಗೆ ದೊಡ್ಡದಾಗಿ ಬೆಳೆಯುತ್ತಿರುವ ಮೇಟಿಕುರ್ಕೆ ಎಂಬ ಹಳ್ಳಿ ನೆನಪುಗಳ ಅಭಿವ್ಯಕ್ತಿಗೆ ದಾರಿಯಾಗಿದೆ.

ಇದೊಂದು ನೆನಪಿನ ಸಾಲು ದೀಪ 'ಆತ್ಮಚರಿತ್ರೆ'ಯೂ ಆಗಬಹುದಾದ ವಿವರಗಳು ಇಲ್ಲಿವೆ. ಬಾಲ್ಯದ ತೀವ್ರ ನೆನಪೇ ಈ ಕವನಗಳ ಮೂಲ. ತರತರಹದ ಹೂಗಳನ್ನು ಕಟ್ಟುತ್ತಾ ಹಾರ ಕಟ್ಟುವ ಕ್ರಿಯೆ. ಕವಯಿತ್ರಿಯ ಬಾಲ್ಯದ ಅನುಭವ ಓದುತ್ತಾ ಹೋದಂತೆ ಓದುಗರಲ್ಲು ನೆನಪಿನ ಅಲೆಯೆಬ್ಬಿಸುತ್ತದೆ.

ಕಾಲಕ್ಕೆ ಉಸಿರುಗಟ್ಟಿದೆ, ಋತುಮಾನಗಳು ಆಯಾಸದಿಂದ ರೆಪ್ಪೆ ಮುಚ್ಚಿವೆ ಸಂಬಂಧಗಳ ಸೀರೆ ಎಳೆ ಬಿಚ್ಚಿಕೊಳ್ಳುತ್ತಿದೆ ಎಂದು ಹೇಳುವ ಸಾಲುಗಳಲ್ಲಿ ಪಲ್ಲಟಗೊಂಡ ಆಧುನಿಕ ಬದುಕಿನ ವಾಸ್ತವವನ್ನು ತೆರೆದಿಡಲಾಗಿದೆ, ಈ ಸಾಲುಗಳನ್ನು ನೋಡಿದರೆ 'ಗದ್ಯ' ಕೇಳಿದರೆ ಪದ್ಯವಾಗಿ ಋಶಿ ಕೊಡುತ್ತದೆ.

ಕವಯಿತ್ರಿಗೆ ತೆಂಗಿನ ಗರಿಯೊಂದೇ ಸಾಕು ನೆನಪುಗಳ ಗರಿ ಬಿಚ್ಚಲು. ನಗರದ ಗಡಿಬಿಡಿ, ಸದ್ದುಗದ್ದಲದ ಮಧ್ಯೆ ವಲಸೆಗರಿ ಬಂದು ಬಾಲ್ಯದ ನೆನಪುಗಳ ಗರಿ ಕೆದರಿಬಿಡುತ್ತದೆ. ಗರಿ, ಕನ್ನಡಕ, ವಾಚು, ಪೊರಕೆ, ಪೀಪಿಯಾಗಿ ಕೊನೆಗೆ ಹೆಣೆದ ಚಾಪೆಯಾಗಿ ಬಿಡುತ್ತದೆ. ಹೀಗೆ ಈ ಭಾವಲಹರಿ ಹರಿದಾಡುತ್ತದೆ,

ಕಲ್ಲುಗಳಲ್ಲಿ ಕೆತ್ತನೆಯನ್ನು ಅರಸುವ, ಒಡೆದ ಬಳೆ ಚೂರುಗಳಲ್ಲಿ ನೋವಿನ ದನಿಯೊಂದಿಗೆ ಪ್ರೀತಿಯ ಅಪ್ಪುಗೆಯಿಂದಲೂ ಒಡೆದ ಬಳೆ ಚೂರಾಗಿರಬಹುದು ಎಂಬ ಜೀವನ ಪ್ರೀತಿಯನ್ನು ಕವಯಿತ್ರಿಯ ಮನಸ್ಸು ಅರಸುತ್ತದೆ.

ಕುರುಡು ಅಜ್ಜಿ ಕೈಯಲ್ಲಿ ಮುಟ್ಟಿಯೇ ಗುರುತು ಹಚ್ಚುವ ರೀತಿ ಕವಯಿತ್ರಿಗೆ ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳಲು ಒಳ ಮನಸ್ಸು ಸಾಕೆಂಬ ದರ್ಶನ ನೀಡುತ್ತದೆ. ಹೊರಗಿನ ಹೂಗಳು ಒಳಗಿವೆಯೇ, ಒಳಗಿನ ಹೂಗಳು ಹೊರಗಿವೆಯೋ ಎಂದು ಕೇಳಿಕೊಳ್ಳುತ್ತಾರೆ,

ಇಲ್ಲಿರುವ ಹೆಚ್ಚಿನ ಕವಿತೆಗಳು ಓದಿನ ಸುಖವನ್ನು ನೀಡುತ್ತವೆ. ಓದುಗರನ್ನು ನೆನಪುಗಳಲ್ಲಿ ಮೀಯಿಸುತ್ತವೆ. ಪ್ರತಿಯೊಂದು ಪದ್ಯಕ್ಕೂ ಶೀರ್ಷಿಕೆ ಇದ್ದಿದ್ದರೆ ಗದ್ಯಗಂಧಿಯ ಗಮಲು ನಮ್ಮೊಳಗೂ ಇಳಿಯಲು ಸಹಾಯಕವಾಗುತ್ತಿತ್ತು.

( ಕೃಪೆ: ಪುಸ್ತಕಾವಲೋಕನ ನವೆಂಬರ್‌ ೨೦೨೦, ಬರಹ- ಮಂಜುಳಾ ಎಂ. ರಾಜು)

Related Books