ಕವಿ-ಅನುವಾದಕಿಯಾಗಿ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಎಂ.ಆರ್. ಕಮಲಾ ಅವರು ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಮೇಟಿಕುರ್ಕೆಯವರು. 1959ರ ಮಾರ್ಚ್ 27ರಂದು ಜನಿಸಿದರು. ತಂದೆ ಎಂ.ಎಚ್. ರಾಮಸ್ವಾಮಿ, ತಾಯಿ ವಿಶಾಲಾಕ್ಷಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ಎಲ್.ಎಲ್.ಬಿ. ಪದವಿ, ಸ್ನಾತಕೋತ್ತರ ಪರೀಕ್ಷೆಯಲ್ಲಿ ಪಾಶ್ಚಿಮಾತ್ಯ ಸಾಹಿತ್ಯ ಅಧ್ಯಯನಕ್ಕಾಗಿ ಬಿಎಂಶ್ರೀ ಚಿನ್ನದ ಪದಕ ವಿಜೇತರು. ಫ್ರೆಂಚ್ ಭಾಷೆಯಲ್ಲಿ ಪದವೀಧರರು.
ಶಕುಂತಲೋಪಾಖ್ಯಾನ (1988), ಜಾಣೆ ಮತ್ತು ಇತರ ಕವಿತೆಗಳು (1992), ಹೂವು ಚೆಲ್ಲಿದ ಹಾದಿ (2007), ಮಾರಿಬಿಡಿ (2017) ಕವನ ಸಂಕಲನಗಳು. ಆಫ್ರಿಕನ್-ಅಮೆರಿಕನ್ ಮತ್ತು ಅರಬ್ ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ’ಕತ್ತಲ ಹೂವಿನ ಹಾಡು (1989) ಕನ್ನಡದಲ್ಲಿ ಕಪ್ಪು ಕವಿಗಳನ್ನು ಪರಿಚಯಿಸುವ ಪ್ರಯತ್ನ. ಗುಲಾಮಗಿರಿಯ ವಿರುದ್ದ ಹೋರಾಟ, ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ಯ್ರ ಹೋರಾಟದ ಕತೆಗಳ ಸಂಕಲನ- ’ಕಪ್ಪು ಹಕ್ಕಿಯ ಬೆಳಕಿನ ಹಾಡು’ ಸರಣಿಯನ್ನು ನಾಲ್ಕು ಕೃತಿಗಳು ಅಂದರೆ ’ಕಪ್ಪು ಹಕ್ಕಿಯ ಬೆಳಕಿನ ಹಾಡು’, ’ಉತ್ತರ ನಕ್ಷತ್ರ’, ’ರೋಸಾ ಪಾರ್ಕ್’, ’ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ’ ಅವರ ಅನುವಾದಿತ ಕೃತಿಗಳು.
ಬಂಗಾಲಿ ಕವಿ ಜೀವನಾನಂದರ ಕವಿತೆಗಳು (2003) ಹಾಗೂ ಆಧುನಿಕೋತ್ತರ ಬಂಗಾಲಿ ಕವಿತೆಗಳ ಅನುವಾದ ’ಜೀರೊ ಪಾಯಿಂಟ್’ ಸಂಕಲನದಲ್ಲಿದೆ.
ಕಮಲಾ ಅವರಿಗೆ ಕುವೆಂಪು ಭಾಷಾ ಭಾರತಿಯ ಗೌರವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ (2018), ಎಸ್.ವಿ. ಪರಮೇಶ್ವರಭಟ್ ಸಂಸ್ಮರಣ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಸ್ಮಾರಕ ಪುರಸ್ಕಾರ, ಮುದ್ದಣ ಕಾವ್ಯ ಪ್ರಶಸ್ತಿ, ಅಮ್ಮ ಪ್ರಶಸ್ತಿಗಳು ಸಂದಿವೆ.