'ದೇವರು ಕಳೆದಿದೆ ಹುಡುಕಿ ಕೊಡಿ' ಎಂಬುದು ಡಾ: ಸಂಗಮೇಶ್ವರ ಪಾಟೀಲ್ (ಸಂಪಾ) ಅವರ ಕವನ ಸಂಕಲನ. 40 ಕವನಗಳು ಈ ಸಂಕಲದಲ್ಲಿವೆ ಬಹುತೇಕ ಕವಿತೆಗಳು ಅಂತರಂಗ-ಬಹಿರಂಗಗಳಿಗೆ ಸಂಬಂಧಿಸಿದ ಕವಿತೆಗಳಿವೆ. ದೇವರು ಎಂದರೆ, ಭೌತಿಕ ಬಾಹ್ಯ ದೇವರಲ್ಲ, ಕಲ್ಲುಮಣ್ಣು ಲೋಹಗಳಿಂದ ತಯಾರಿಸಿದ ದೇವರಲ್ಲ, ಕವಿ ಹೇಳುತ್ತಿರುವುದು ಅಂತರಂಗದ ದೇವರಗಳ ಕುರಿತು.
ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರು ಸಂಕಲನಕ್ಕೆ ಮುನ್ನುಡಿ ಬರೆದು ‘ಪ್ರೀತಿ, ಸೌಹಾರ್ದತೆ, ಸುವಿಚಾರ, ಮೌಲ್ಯ ಪ್ರತಿಪಾದನೆಯ ವೈಚಾರಿಕತೆಯ ಡಾಂಭಿಕ ಭಕ್ತಿ ವಿರೋಧಿ ಆಶಯಗಳ ಪ್ರಧಾನ ಕವನ ಸಂಕಲನ ಇದು, ಕವಿಗೆ ಒಳ್ಳೆಯ ಆಶಯಗಳಿವೆ, ಕನಸುಗಳಿವೆ. ನಾಡು-ನುಡಿ ರಾಷ್ಟ್ರದ ಬಗ್ಗೆ ಅಪಾರ ಪ್ರೀತಿ ಇದೆ, ವ್ಯಕ್ತಿಗಳನ್ನು ರಾಜ್ಯ ರಾಷ್ಟ್ರದ ಹಾಗೂ ಅವುಗಳನ್ನು ನೋಡುವ ಚಿಕಿತ್ಸಕ ದೃಷ್ಟಿ ಇದೆ’ ಎಂದು ಪ್ರಶಂಸಿಸಿದ್ದಾರೆ.
ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ಕೃತಿಗೆ ಬೆನ್ನುಡಿ ಬರೆದು ‘ಪ್ರಸ್ತುತ ಸಮಾಜದ ವಿಕೃತಿಯನ್ನು ಸಾವು-ನೋವುಗಳನ್ನು ದೇವರ ಹೆಸರಿನಲ್ಲಿ ನಡೆಯುವ ಮೋಸ ವಂಚನೆಗಳನ್ನು ಕಂಡು, ಗುಡಿ ಮಸೀದಿ ಚರ್ಚುಗಳ ದೇವರಲ್ಲದೆ, ಅಂತರಂಗದ ದೇವರುಗಳು ಕಳೆದಿರುವ ಬಗ್ಗೆ ಅನುಮಾನಗೊಂಡು ಹೃದಯ ವೇದನೆಯನ್ನು ಕವನ ರೂಪದಲ್ಲಿ ಹೊರ ಹಾಕಲು ಪ್ರಯತ್ನಿಸಿದ್ದಾರೆ’ ಎಂದು ಶ್ಲಾಘಿಸಿದ್ದಾರೆ.
ಹಿರಿಯ ನಾಟಕಕಾರ ಈಶ್ವರ ಹತ್ತಿ ಅವರು ವಾಸ್ತವ ತಲ್ಲಣಗಳ ಮುಖಾಮುಖಿ ಈ ಸಂಕಲನದ ಕವಿತೆಗಳಲ್ಲಿ ಅನುಭವಿಸಿವೆ ಎಂದು ಹೇಳಿದರೆ, ಸಾಹಿತಿ ಚಂದ್ರಶೇಖರ ವಸ್ತ್ರದ ಅವರು ಆಧುನಿಕ ಜಗತ್ತು ತಲ್ಲಣಗೊಂಡಿದೆ, ವ್ಯಕ್ತಿ ಕುಟುಂಬ ಸಮಾಜ ಧರ್ಮ ಒಟ್ಟಾರೆಯಾಗಿ ಮನುಕುಲದ ಅಂತರಂಗ-ಬಹಿರಂಗದಲ್ಲಿಯೂ ಭ್ರಷ್ಟಗೊಂಡವೆ. ನಿದ್ರೆ ಹಿತ ಲಜ್ಜೆಗೆಟ್ಟ ಭ್ರಷ್ಟ ಮನಸ್ಥಿತಿಗೆ ಲಸಿಕೆ ಎಲ್ಲಿದೆ? ಇಂತಹ ಪ್ರಶ್ನೆಗಳು ಓದುಗನ ಮನಸ್ಥಿತಿಯನ್ನು ಪ್ರಶ್ನಿಸುತ್ತವೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಲೇಖಕ-ಕವಿ ಡಾ.ಸಂಗಮೇಶ್ವರ ಪಾಟೀಲ ( ಸಂಪಾ) ಅವರು ಮೂಲತಃ (ಜನನ: 21-05-1970) ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಎಂ.ಎ , ಎಂ.ಎಡ್ , ಎಂ.ಫಿಲ್, ಪಿ.ಹೆಚ್ ಡಿ.ಪದವೀಧರರು. ಕಳೆದ 21 ವರ್ಷಗಳಿಂದ ಕೊಪ್ಪಳ, ಉಜಿರೆ (ಧರ್ಮಸ್ಥಳ), ಸೇವೆ ಸಲ್ಲಿಸಿ, ಸದ್ಯ, ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿದ್ದಾರೆ. ‘ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾಗಿ, ಮುನಿರಾಬಾದ್ ಡಯಟ್ ನಲ್ಲಿ ಆಡಳಿತ ಪರಿಷತ್ ಸದಸ್ಯರಾಗಿಯೂ ಸೇವೆ.ಸಲ್ಲಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಭಾಗ್ಯನಗರದಲ್ಲಿ ವಾಸವಾಗಿದ್ದಾರೆ. ಕೃತಿಗಳು: ದೇವರು ಕಳೆದಿವೆ ಹುಡುಕಿ ಕೊಡಿ (ಕವನ ಸಂಕಲನ) ...
READ MORE