‘ಭವದ ಅಗುಳಿ’ ಸಂತೋಷ ಅಂಗಡಿ ಅವರ ಕವನ ಸಂಕಲನ. ಈ ಕೃತಿಗೆ ಎಚ್.ಎಲ್. ಪುಷ್ಪ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಇಲ್ಲಿನ ಕವಿತೆಗಳಲ್ಲಿ ತಾನು ಕಂಡ, ಅರ್ಥೈಸಿಕೊಂಡ ಬದುಕನ್ನು ಹಿಡಿಯಲೆತ್ನಿಸುವ ಒಬ್ಬ ಕವಿಯಿದ್ದಾನೆ. ಇಲ್ಲ ಲೋಕ ಸಾಂಗತ್ಯದ ಜೊತೆಗೆ, ಅವನಿಗೆ ಆತ್ಮ ಸಾಂಗತ್ಯವೂ ಸಹ ಸಾಧ್ಯ. ಹೀಗಾಗಿ ಅವನು ಹೊರಗೂ, ಒಳಗೂ ಸಂವಾದಿಸಬಲ್ಲವನು. ಹೊರಗನ್ನು ಒಳಗೆ ತೆಗೆದುಕೊಳ್ಳುತ್ತಾ ತನ್ನ ಗ್ರಹಿಕೆಯ ಲೋಕಕ್ಕೆ ಪರಿಚಿತ ವಸ್ತು, ಶಬ್ದಗಳನ್ನು ಸೇರಿಸುತ್ತಾ ಓದುಗನನ್ನು ಒಳಗೊಳ್ಳುವ ಇನ್ನೊಂದು ಲೋಕವನ್ನು ಸೃಷ್ಟಿಸುತ್ತಾನೆ. ಇಲ್ಲ ಕವಿತೆಯೆಂಬುದು ಕವಿಯ ಇಹ-ಪರಗಳನ್ನು ತೆರೆದಿಡುವ ಲೋಕ. ಹೀಗಾಗಿಯೇ ಬರೆಯುವ ಸಂದರ್ಭದಲ್ಲಿ ಕವಿಗೂ, ಕವಿತೆಗೂ ಕಾಲದೇಶಗಳ ಚೌಕಟ್ಟಿರುತ್ತದೆ. ನಿಜವಾದ ಕವಿತೆ ಈ ಚೌಕಟ್ಟೆಂಬ ರೇಷ್ಮೆಯ ಗೂಡನ್ನು ಒಡೆದು ಸೀಮೋಲ್ಲಂಘನ ಮಾಡುತ್ತಾ ಚಿಟ್ಟೆಯಾಗಿ ಹಾರುತ್ತದೆ. ಕವಿ ಚಿಟ್ಟೆಯಾಗಲೇಬೇಕು. ಈ ಚಿಟ್ಟೆಯಾಗುವ ಕ್ರಿಯೆ ಸಂತೋಷ್ ಅವರ ಕವಿತೆಗಳಲ್ಲಿ ಕಂಡುಬರುತ್ತದೆ. ಪ್ರತಿ ಜೀವಿಗೂ ಅದರದೇ ಆದ ಆವರಣವಿದೆ. ಸತತವಾಗಿ ಆ ಅವರಣ ಒಡೆದು ಅವನು ಹೊರಬರಲು ಯತ್ನಿಸುತ್ತಲೇ ಇರುತ್ತಾನೆ. ಸಂತೋಷ ಅವರ ಬಹುತೇಕ ಕವಿತೆಗಳು ತಮ್ಮ ಚೌಕಣ್ಣನಿಂದಾಚೆ ಬಂದು ಸಂವಾದಿಸುವ ಕೆಲಸ ಮಾಡುತ್ತವೆ ಎಂದಿದ್ದಾರೆ ಕವಿ ಡಾ. ಎಚ್.ಎಲ್.ಪುಷ್ಪ.
ಲೇಖಕ, ಕವಿ ಸಂತೋಷ ಅಂಗಡಿ ಮೂಲತಃ ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ರಣತೂರು ಗ್ರಾಮದವರು. 1987ರಲ್ಲಿ ಜನಿಸಿದ ಅವರು ಬಿ.ಎಸ್.ಸಿ ಪದವೀಧರರಾಗಿದ್ದು, ಸಾಣೀಹಳ್ಳಿಯ ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆಯಲ್ಲಿ ರಂಗಶಿಕ್ಷಣದಲ್ಲಿ ಪದವಿ ಪೂರೈಸಿದ್ದಾರೆ. ಶಿವಸಂಚಾರದಲ್ಲಿ ನಟರಾಗಿ 145ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಭಾಗಿಯಾಗಿರುವ ಅವರು ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಕಥೆ ಮತ್ತು ಕವಿತೆಗಳ ರಂಗ ಪ್ರಸ್ತುತಿ ಹಾಗೂ ಅಭಿನಯ ವಾಚಿಕೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಪ್ರಸ್ತುತ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಫೋಟೋಗ್ರಫಿ, ಸಂಗೀತ, ಅನುವಾದ, ಚಿತ್ರಕಲೆ, ಇವರ ಆಸಕ್ತಿಯ ಕ್ಷೇತ್ರಗಳು. ಕೃತಿಗಳು: ಮಾಬೂನ ...
READ MORE