ಕವಯತ್ರಿ ಜೆ. ಆರ್. ಪರಿಮಳಾರಾವ್ ಅವರ ‘ಝೆನ್ ಹಾಯಿಕು’ ಕೃತಿಯು ಕವನಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ದೊಡ್ಡರಂಗೇಗೌಡರು ‘ಕೆಲವೇ ಪದಗಳಲ್ಲಿ ಕವಿ ಅನುಭವಿಸಿದ ಜೀವನಾನುಭವಗಳನ್ನು ಸುಂದರವಾಗಿ ಕಟ್ಟಿಕೊಡುವುದು ಅತ್ಯಂತ ಕೌಶಲದ ಕಾರ್ಯ ಎಂಬುವುದು ನನ್ನ ಅನಿಸಿಕೆ. ಇಂಥ ಕಲಾತ್ಮಕ ಸೃಜನಶೀಲತೆ ಮೆರೆಸುವಲ್ಲಿ ಕವಯಿತ್ರಿ ಪರಿಮಳಾ ಅವರ ಸಾಧನೆ : ಸಿಂಪ್ಲಿ ಸೂಪರ್ಸ್! ಕಿರಿದರಲ್ಲಿ ಹಿರಿದು ಅಡಗಿಸುವುದು ಯಾವತ್ತೂ ಶ್ರಮದಾಯಕವೇ; ತಾಪದಾಯಕವೇ! ಆದರೆ ಈ ಕವಿಗೆ ಇದು ಸಲೀಲ; ಮನಸ್ಸು ನಿರ್ಮಲ ಆದ್ದರಿಂದ ಬರಹವೂ ನಿರ್ಮಲ! ಸಾವಿರ ಪದಗಳನ್ನು ಬರೆಯುವುದನ್ನು ತೊರೆದು ಪುಟ್ಟ ಹಣತೆ ಹಚ್ಚಿಡುವ ಈ ಬಗೆ ಕವಿತೆ. ಕಾವ್ಯ ಕ್ಷಿತಿಜದ ಮಿನಿಯೇಚರ್! ಇದು ಕವಯಿತ್ರಿಯ ಅಂತರಂಗದ ಅಲೆ ಅಲೆ ಆಲಾಪ! ಕನ್ನಡ ಹಾಗೂ ಇಂಗ್ಲೀಷ್ ಎರಡರಲ್ಲೂ ಅಭಿವ್ಯಕ್ತಿ ಕಂಡುಕೊಂಡ ಈಕೆ, ಕುಂಚಕ್ಕೆ ಹಾಗೂ ಹಾಯಿಕು ಕ್ರೌಂಚಕ್ಕೆ ಜೋತು ಬಿದ್ದಿದ್ದಾರೆ. ಹೀಗಾಗಿ ,ಇಲ್ಲೊಂದು ಕಲ್ಪನಾ ಸಾಮ್ರಾಜ್ಯವೇ ಸದ್ದಿಲ್ಲದೆ ಅನಾವರಣವಾಗಿದೆ. ‘ಹಕ್ಕಿಯ ನೋಡಿ ಮೋಡವು, ರೆಕ್ಕೆಯ ಮೊಳದುದ್ದ ನೇಯ್ದಿತ್ತು!’ ಇಲ್ಲಿ ಕವಯಿತ್ರಿಯ ಕಲ್ಪನೆ ನಿಜಕ್ಕೂ ಚೆನ್ನಾಗಿದೆ. ಕಾರಣ ಇಷ್ಟೇ, ಈ ಬರಹಗಾರ್ತಿಯ ಗಮನವೆಲ್ಲಾ ವಾಚ್ಯಾರ್ಥದ ಕಡೆಗಲ್ಲ! ವ್ಯಂಗ್ಯಾರ್ಥದಲ್ಲೇ ಇಲ್ಲಿಯ ಬರಹ ಅಭಿಮುಖವಾಗಿದೆ. ಕಿರಿದರಲ್ಲಿ ಹಿರಿದಾದುದನ್ನು ಹಿಡಿದಿಡುವ ಒಮ್ಮೆಗೆ ಗೂಡಾರ್ಥ ಸ್ಪೋಟಿಸುವ ತಂತ್ರ ಇದು’. ‘ಸ್ವರ್ಣ ಚಂಪ’ ಸಂಕಲನದಲ್ಲಿ ಸಾವಿರದ ಶಬ್ಧ ಚಿತ್ರಗಳಿವೆ. ಪದ ಮೈತ್ರಿ ಲಾಲಿತ್ಯ ಪೂರ್ಣ; ತಮ್ಮ ಬಾಳಿನ ರಂಗಿನ ಅನುಭವಗಳಿಗೆ ಪದಪದದಲ್ಲೂ ಬಣ್ಣ ತುಂಬಿ ತಾನು ‘ನುಡಿ ಚಿತ್ರ’ ಬಿಡಿಸುವಲ್ಲೂ ‘ಸೈ’ ಎನ್ನಿಸಿಕೊಳ್ಳುತ್ತಾರೆ ಕವಯಿತ್ರಿ ಪರಿಮಳಾ ಅವರು. ಇದು ವಾಸ್ತವವಾಗಿ ಕಡಿಮೆ ಸಾಧನೆಯೇನಲ್ಲ’ ಎಂದು ಪ್ರಶಂಸಿಸಿದ್ದಾರೆ.
ಹನಿಗವನಗಳ ರಚನೆಯಲ್ಲಿ ಆಸಕ್ತಿಯುಳ್ಳ ಪರಿಮಳಾರಾವ್ ಜಿ. ಆರ್. ತಮ್ಮ ದಿನನಿತ್ಯದ ಅನುಭವಗಳ ಮನಸ್ಸಿನ ಮಾತುಗಳನ್ನು ಹನಿಗವನಗಳಿಗೆ ಇಳಿಸುತ್ತಾರೆ. 1941 ಜನವರಿ 06 ರಂದು ಆಂಧ್ರ ಪ್ರದೇಶದ ಕರ್ನೂಲ್ನಲ್ಲಿ ಜನಿಸಿದರು. ’ಮಂದಾರ ಮಾಲಿನಿ’ ಅವರ ಕವನ ಸಂಕಲನ. ’ಬರ್ಥ್ ಆಫ್ ಹೋಪ್, ಅಲೆಯ ಆಲಾಪ, ಅಂತರಂಗಯಾನ, ಸ್ವರ್ಣ ಸಂಪಿಗೆ’ ಹೈಕುಗಳ ಕೃತಿ. ’ಮಿನುಗು ದೀಪ ಹನಿಗವನಗಳು, ಋತುಗಾನ’ ಅವರ ಮತ್ತಿತರ ಕೃತಿಗಳು. ‘ಸ್ಪಿಂಗ್ ಅವಾರ್ಡ್, ಸರ್ ಎಮ್. ವಿಶ್ವೇಶ್ವರಯ್ಯ ಪ್ರತಿಷ್ಠಾನದಿಂದ ಕಾವ್ಯಶ್ರೀ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಗಾರ್ಡನ್ ಆಫ್ ಪೊಯಟ್’ ಮುಂತಾದ ಗೌರವ ಪುರಸ್ಕಾರಗಳು ಸಂದಿವೆ. ...
READ MORE