ವಿಶ್ವಾಸದ ಹೆಜ್ಜೆಗಳು

Author : ಸುರೇಶ ಎಲ್. ರಾಜಮಾನೆ

₹ 100.00




Year of Publication: 2021
Published by: ಮೊಹಾಲಿಯಾ ಪ್ರಕಾಶನ
Address: ಮದ್ದೂರು

Synopsys

ಕವಿ ಸುರೇಶ್ ಎಸ್ ರಾಜಮಾನೆ ಅವರ ಬೆಳಗುಗವಿತೆಗಳು ‘ವಿಶ್ವಾಸದ ಹೆಜ್ಜೆಗಳು’. ಈ ಕೃತಿಗೆ ಶಿವಾನಂದ ಕುಬಸದ ಅವರ ಬೆನ್ನುಡಿ ಇದ್ದು, ’ಇಲ್ಲಿ ಶಿಸ್ತಾಗಿ ಜೋಡಿಸಿದ ನೂರಾರು 'ಹೃತ್ವ' ಕವಿತೆಗಳ ತುಂಬಾ ಜಗದ ಜಾದೂಗಾರ ಸೂರ್ಯ'ದೀರ್ಘ'ವಾಗಿ ವಿಜೃಂಭಿಸಿದ್ದಾನೆ. ರಸ್ತೆ ಪಕ್ಕದ ಕಸ ಕೂಡ ರಾತ್ರಿ ಮಳೆಯಲಿ ನೆನೆದು ಧರೆಯ ದೊರೆಯಿಂದ ಧನ್ಯನಾಗಿದ್ದು, ನಿಶ್ಚಿಂತೆಯಿಂದ ಮಲಗಿದ್ದ ಟಾರು ರಸ್ತೆಗಳಿಗೆಲ್ಲ ಭಾನು ಬೆಳಕ ಸುರಿದು ಜಳಕ ಮಾಡಿಸಿದ್ದು, ಮುಗಿಲೂರ ಮನ್ಮಥ ಧರೆಗೆ ನೀಡಿದ ಮನಮೋಹಕ ಬೆಳಗು, ಮೈಗಂಟಿದ ಹೊದಿಕೆಯ ಬಿಡಿಸಿ ಮನದಂಗಳದ ಕಸಗುಡಿಸಿ ಮಧುರತೆಯ ಮುಂಜಾವನು ತಂದಿದ್ದು, ಮುಗಿಲೊಡಲಿಂದ ಮುಗಿಬಿದ್ದ ಹೊನ್ನ ಕಿರಣಗಳು ಭೂರಮೆಯ ಮೈ ಸವರಿ ಬೆಚ್ಚಗಾಗಿಸಿದ್ದು, ಸೂರ್ಯ ಜಗದ ಜೀವರಾಶಿಗೆಲ್ಲ ಜೀವದುಸಿರಾದದ್ದು, ದುಡಿಯುವ ಬಡವನ ಮನೆಯಂಗಳದಲೂ ಸೂರ್ಯೋದಯದ ಚಿತ್ತಾರ ಮೂಡಿದ್ದು, ಮುಂತಾದ ಪ್ರಯೋಗಗಳೆಲ್ಲ ಮನಕ್ಕೆ ಮುದ ನೀಡುತ್ತವೆ. ಸುರೇಶರ ಈ ಕವಿತೆಗಳು ಸೂರ್ಯನಂತೆಯೇ ಮನದಂಗಣವ ಬೆಳಗುತ್ತವೆ. ಓದುತ್ತಾ ಓದುತ್ತಾ ಭಾನುವಿನ ಹಲವು ರೂಪಗಳನ್ನು ಹರಿವಾಣದಲ್ಲಿಟ್ಟು ಉಣಬಡಿಸಿದ ಅನುಭವ ನೀಡುತ್ತವೆ. ಸರ್ವರೊಳಗೊಂದಾಗುವ ಮನುಷ್ಯರಾಗಲು ಮಾನವೀಯತೆಯ ಬೆಳಕು ಎಂಬಲ್ಲಿ ಸುರೇಶರ ಮನದಲ್ಲಿರುವ ಉದಾತ್ತಭಾವ ಗೋಚರಿಸುತ್ತದೆ. ಅಲೌಕಿಕವಾದುದನ್ನು ಹೇಳುತ್ತಲೇ, ಹೊದ್ದ ಕೌದಿಯ ಕಿಂಡಿಯಿಂದ ಕುಕ್ಕಿ ಎಬ್ಬಿಸಿದ ಸೂರ್ಯ ಬದುಕಿಗೆ ಬೆಳಕ ನೀಡಿದರೂ ಬದುಕು ಹರಿದಿರುವುದನ್ನು ತೋರಿಸಿದ ಕಟು ವಾಸ್ತವವನ್ನೂ ಹೇಳುತ್ತ. ಲೌಕಿಕ ಬದುಕಿನ ಕಠೋರ ಸತ್ಯವನ್ನು ತಿಳಿಯಾದ ಮಾತಿನಲ್ಲಿ ತಿಳಿಸುತ್ತಾರೆ. ಅಂಗಳದ ಕಸ ಹೊಡೆದು ರಂಗೋಲಿ ಇಟ್ಟಂತಹ ಅವರ ಕವಿತೆಗಳು ಮನದಲ್ಲಿಯ ಕಸ ಹೊಡೆದು ಚಂದದ ಚಿತ್ತಾರದ ಜನೋಪಯೋಗಿ ರಂಗೋಲಿ ಇಡುವಲ್ಲಿ ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ’ ಎಂಬುದಾಗಿ ಹೇಳಿದ್ದಾರೆ.

About the Author

ಸುರೇಶ ಎಲ್. ರಾಜಮಾನೆ

ಸುರೇಶ ಎಲ್. ರಾಜಮಾನೆ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೋಕಿನವರು. ಸದ್ಯ ರಾಯಚೂರು ಜಿಲ್ಲೆ ಲಿಂಗಸಗೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಸುರೇಶ್ ಅವರು 'ಸುಡುವ ಬೆಂಕಿಯ ನಗು' ಮತ್ತು 'ಮೌನ ಯುದ್ಧ' ಎಂಬ ಎರಡು ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ.  ...

READ MORE

Related Books