‘ವಿರಕ್ತರ ಬಟ್ಟೆಗಳು’ ಲೇಖಕ ವಾಸುದೇವ ನಾಡಿಗ್ ಅವರ ಕವನ ಸಂಕಲನ. ಪರಂಪರೆಯ ಪ್ರಭಾವವನ್ನು ಅರಗಿಸಿಕೊಂಡು ತನ್ನ ಅಸ್ಮಿತೆಯನ್ನು ಪ್ರಕಾಶಮಾನ ಗೊಳಿಸುವುದು ಹೊಸ ತಲೆಮಾರಿನ ಕಾವ್ಯದ ಮುಂದಿರುವ ದೊಡ್ಡ ಸವಾಲು. ಇದು ಪ್ರಗತಿಶೀಲ, ನವ್ಯ, ಬಂಡಾಯ, ದಲಿತ ಹೀಗೆ ಕನ್ನಡ ಸಾಹಿತ್ಯದ ಎಲ್ಲ ಮಾರ್ಗಗಳೂ, ಎಲ್ಲಾ ಕಾವ್ಯ ಮಾರ್ಗಗಳು ಎದುರಿಸಿದ, ಎದುರಿಸುತ್ತಿರುವ ಸವಾಲಾಗಿದೆ.
ಅನ್ಯರೊರೆದುದನೆ, ಬರೆದುದನೆ ನಾ ಬರೆಬರೆದು
ಬಿನ್ನಗಾಗಿದೆ ಮನವು…
ಎಂದು ಹೊಸದಕ್ಕೆ ಹಂಬಲಿಸುತ್ತಲೆ ಪರಂಪರೆಗೆ ಸೆಡ್ಡು ಹೊಡೆದ ಗೋಪಾಲಕೃಷ್ಣ ಅಡಿಗರ ತುಡಿತ, ವಿಚಾರ, ಅಭಿವ್ಯಕ್ತಿಗಳಲ್ಲಿ ಅಸ್ಮಿತೆ-ಅನನ್ಯತೆ ಛಾಪಿಸಲೆತ್ನಿಸುವ ಹೊಸ ತಲೆಮಾರಿನ ಕವಿಗಳೆಲ್ಲರ ಪಾಲಿನ ನಿಜವಾಗಿದೆ. ಈ ಮಾತಿಗೆ ನವ್ಯೋತ್ತರ ಹೊಸ ತಲೆಮಾರಿನ ಗಮನಾರ್ಹ ಕವಿಗಳಾದ ವಾಸುದೇವ ನಾಡಿಗರೂ ಹೊರತಲ್ಲ. ಈವರೆಗೆ ಮೂರು ಕವನ ಸಂಕಲನಗಳನ್ನು ಪ್ರಕಟಿಸಿರುವ ಅವರ ಕಾವ್ಯ ಪ್ರತಿಭೆ ದಾಂಗುಡಿ ಇಡಲಾರಂಭಿಸಿದ್ದೂ…
‘ಪ್ರಭೂ
ಅರಗದಂಛ ಕಚ್ಚಾ ಗಾಳಿ ಗೀಳುಗಳ
ಕಾಗದದ ಮೇಲೆಲ್ಲಾ ಕಾರಿಕೊಳ್ಳದ ಹಾಗೆ
ಏರ್ಪಡಿಸು ಸಹಜ ಹೊರದಾರಿಗಳ’
ಎನ್ನುವ ಅಂತಃಪ್ರಚೋದನೆಯಿಂದಲೇ, ನವೋದಯ, ನವ್ಯಗಳ ಎಲ್ಲ ಆಕರ್ಷಣೆ, ಪ್ರಭಾವಗಳನ್ನು ಜೀರ್ಣಿಸಿಕೊಂಡು ಸ್ವಂತ ಲಯ. ದನಿಗಳ ಕಾವ್ಯ ಮಾರ್ಗವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯೋಗಶೀಲರಾಗಿರುವ ವಾಸುದೇವ ನಾಡಿಗರ ನಾಲ್ಕನೆಯ ಕವನ ಸಂಕಲನ ಇದು. ಈ ಸಂಕಲನದ ಶೀರ್ಷಿಕೆಯಲ್ಲಿನ ಶ್ಲೇಷೆ ಮತ್ತು ರೂಪಕಾಲಂಕಾರಗಳೇ ಇವರ ಕಾವ್ಯಲಯದ ಅಂತಃಸ್ಪುರಣೆಯನ್ನು ತೋರುಗಾಣಿಸುತ್ತವೆ.
ವಾಸುದೇವ ನಾಡಿಗ್ ಮೂಲತಃ ಶಿವಮೊಗ್ಗದ ಭದ್ರಾವತಿಯವರು. ಕುವೆಂಪು ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯ ದಲಿ ಬಿ. ಎಡ್. ಪದವಿ ಪಡೆದಿದ್ದಾರೆ. 20 ವರ್ಷಗಳಿಂದ ಜವಾಹರ ನವೋದಯ ವಿದ್ಯಾಲಯದಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ನಿನ್ನ ಧ್ಯಾನದ ಹಣತೆ, ವಿರಕ್ತರ ಬಟ್ಟೆಗಳು, ಅಲೆ ತಾಕಿದರೆ ದಡ, ಅವನ ಕರವಸ್ತ್ರ ಅನುಕ್ತ ( ಈವರೆಗಿನ ಕವಿತೆಗಳು) ಇವರ ಪ್ರಕಟಿತ ಕವನ ಸಂಕಲನಗಳು. ಬೇಂದ್ರೆ ಅಡಿಗ, ಕಡೆಂಗೋಡ್ಲು ಶಂಕರಭಟ್ಟ, ಮುದ್ದಣ, ಜಿ ಎಸ್ ಎಸ್ ಕಾವ್ಯ ...
READ MORE