ಕವಿ ಗೋಪಾಲಕೃಷ್ಣ ಅಡಿಗರ ವರ್ಧಮಾನ ಕವನ ಸಂಕಲನವು ವಿಶಿಷ್ಠವಾಗಿದೆ. ಇದರಲ್ಲಿ ವರ್ಧಮಾನ ಕವನವು ಒಂದು. ಇದು ವರ್ತಮಾನವನ್ನು ಕುರಿತು ಮಾಡಿದ ಮನೋಹರವಾದ ಕಾವ್ಯಭಾಷ್ಯ ಎನ್ನಬಹುದು. ಹಳೆಯ ಜೀವನ ರೀತಿಯಿಂದ ಸಿಡಿದು ಸಾಗುತ್ತಿರುವ ಕಿರಿ ಪೀಳಿಗೆಯ ಅವ್ಯಾಪಾರ, ಅದನ್ನು ಕಂಡು ದಿಕ್ಕೆಟ್ಟ ಹಿರಿ ತಲೆಮಾರಿನ ಕಳವಳ ಎರಡನ್ನೂ ಕವಿ ಸೂಕ್ಷ್ಮವಾಗಿ ವಿಡಂಬಿಸುತ್ತಾರೆ. ವ್ಯಂಗ್ಯವು ಗೇಲಿಯ ದನಿಗೆ ತಿರುಗಿರುವ ಕಡೆಯಲ್ಲಿ ಸಹ ಅದರ ಹಿಂದೆ ಕ್ರೌರ್ಯ ಸಿನಿಕತೆಗಳಿಲ್ಲ. ಅದಕ್ಕೆ ಬದಲಾಗಿ ಪರಿಸ್ಥಿತಿ ಅನಿವಾರ್ಯವಾಗಿತ್ತೆನ್ನುವ ಅರಿವು, ಆ ಅರಿವಿನ ಬೆನ್ನಿಗೇ ಮೂಡುವ ಅನುಕಂಪಗಳು ವಿಡಂಬನೆಗೆ ಒಂದು ಘನತೆ ಕೊಡುತ್ತವೆ. ವಿಡಂಬಿತ ಪಾತ್ರವೊಂದನ್ನು ಕವಿಯೇ ಅಭಿನಯಿಸುವಾಗಲಂತೂ ಇದು ಆರೋಗ್ಯಕರವಾದ ಆತ್ಮವ್ಯಂಗ್ಯವಾಗುತ್ತದೆ. ಕವಿತೆಯ ಕಡೆಯ ಭಾಗದಲ್ಲಿ ವರ್ಧಿಷ್ಣುವಾದ ಕಾಯಿಹರೆಯ ತನ್ನ ಒಗರು ಹುಳಿ ನೀಗಿ ಸ್ವಸ್ವರೂಪದ ಅರಿವಿನಿಂದ ಕಳಿತು ಹಣ್ಣಾಗುವ ರೀತಿಯನ್ನು ವರ್ಣಿಸುವಾಗ ಮಾತು ಸ್ವಗತದ ಕೆಳದನಿ ಗಳಿಸಿಕೊಳ್ಳುವುದನ್ನು ಗಮನಿಸಬಹುದು.
ವರ್ಧಮಾನ ಗೋಪಾಲಕೃಷ್ಣ ಅಡಿಗರ ಹತ್ತು ವಿಶಿಷ್ಟ ಕವನಗಳ ಸಂಕಲನ. ಕೂಪಮಂಡೂಕ, ವರ್ಧಮಾನ, ಅಜ್ಜನೆಟ್ಟಾಲ-ಇವು ಈ ಸಂಗ್ರಹದ ಮಹತ್ವದ ಕವನಗಳೆನ್ನಬಹುದು. ಕೂಪಮಂಡೂಕ ಒಂದು ಹೊಸ ಅನುಭವವನ್ನು ಸ್ವಕೀಯ ಪ್ರತಿಮೆಗಳಲ್ಲಿ ಹಿಡಿದ ಕವನ. ಸೃಷ್ಟಿ ಸಾಮರ್ಥ್ಯದಿಂದ ವಂಚಿತವಾದ ಪ್ರಾಣಶಕ್ತಿ ತನ್ನ ಸದ್ಯದ ನಿರುಪಯುಕ್ತ ಸ್ಥಿತಿಯನ್ನು ಪರಿಭಾವಿಸುತ್ತಿರುವಂತೆ ಕವನ ಮೊದಲಾಗುತ್ತದೆ. 'ಹಿಂಡು ಹಿಳ್ಳುಗಳಲ್ಲಿ ಪ್ರಾಣವೂರಿದ' ಬಾಳೆಗೊನೆ ಬಾಗಿ ಜೀವನ್ಮುಕ್ತ ಹಳಸುತ್ತಿರುವ ಚಿತ್ರ ವಿಸ್ಮಯಕರವಾದದ್ದು. ಜೀವಶಕ್ತಿ ತನಗೆ ಸೃಷ್ಟಿ ಶಕ್ತಿಯೊಡನೆ ಒದಗಿದ್ದ ದಾಂಪತ್ಯವನ್ನು ಧ್ಯಾನಿಸುವಾಗ ಗತಜೀವನ ಒಂದು ರಸಚಿತ್ರಮಾಲೆಯರಾಗಿ ಕವಿತೆಯಲ್ಲಿ ಪ್ರತ್ಯಕ್ಷವಾಗುತ್ತದೆ. ಸೃಷ್ಟಿಶಕ್ತಿ ತನಗೆ ಒಲಿದದ್ದು : ಅದರೊಡನೆ ತನಗೆ ದಾಂಪತ್ಯ ಬೆಳೆದದ್ದು ; ಆ ದಾಂಪತ್ಯದ ಚೆಲುವು ಮಾಯೆ ವೈಭವ: ಅವು ಬಾಳಿಗೆ ತಂದುಕೊಟ್ಟ ತನ್ಮಯತೆ, ಸಾಧಿಸಿಕೊಟ್ಟ ಕೃತಕೃತ್ಯತೆ- ಇವೆಲ್ಲ ಸ್ಫುಟವಾದ ಕಾಂತಿಮಯ ಪ್ರತಿಮೆಗಳಲ್ಲಿ ಮೈ ಪಡೆಯುತ್ತ ಹೋಗುತ್ತದೆ.
ಕವಿತೆಯ ಕಡೆಯ ಭಾಗ ಅದರ ಅತ್ಯಂತ ಗಂಭೀರ ಭಾಗ. ಸೃಷ್ಟಿಗೆ ತಾನೀಗ ಎಷ್ಟು ಅಗತ್ಯವೆನ್ನುವುದನ್ನು ಕವನದ ನಾಯಕ ತಟಸ್ಥ ನೆಲೆಯಲ್ಲಿ ನಿಂತು ಪರಿಭಾವಿಸುತ್ತಾನೆ. ತನ್ನ ನಿರ್ಗಮನವನ್ನು ಭೀತಿ ವ್ಯಥೆಗಳಿಲ್ಲದೆ ತಾನೇ ಕಲ್ಪಿಸಿಕೊಳ್ಳುತ್ತಾನೆ. ಚಿರಂತನವಾದ ಸೃಷ್ಟಿಶಕ್ತಿ ತನ್ನ ಪರೋಕ್ಷದಲ್ಲಿಯೂ ಲೋಕವನ್ನು ಹರಸುತ್ತದೆ ಎನ್ನುವುದನ್ನು ಭಾವಿಸಿ ಆನಂದಿಸುತ್ತಾನೆ. ತನ್ನ ಭಯ ಅಹಂಕಾರಗಳನ್ನೇ ಪಾದುಕೆ ಮಾಡಿಕೊಂಡು ಅವುಗಳನ್ನು ಮೆಟ್ಟಿ ನಿಂತಿರುವ ಅವನ ಶಾಂತ ಚಿತ್ರದೊಡನೆ ಕವನ ಸಹಜವಾದ ನಿಲುಗಡೆಗೆ ತಲುಪುತ್ತದೆ.
ವರ್ಧಮಾನ ಕವನ ವರ್ತಮಾನವನ್ನು ಕುರಿತು ಮಾಡಿದ ಮನೋಹರವಾದ ಕಾವ್ಯಭಾಷ್ಯ ಎನ್ನಬಹುದು. ಹಳೆಯ ಜೀವನ ರೀತಿಯಿಂದ ಸಿಡಿದು ಸಾಗುತ್ತಿರುವ ಕಿರಿ ಪೀಳಿಗೆಯ ಅವ್ಯಾಪಾರ, ಅದನ್ನು ಕಂಡು ದಿಕ್ಕೆಟ್ಟ ಹಿರಿ ತಲೆಮಾರಿನ ಕಳವಳ ಎರಡನ್ನೂ ಕವಿ ಸೂಕ್ಷ್ಮವಾಗಿ ವಿಡಂಬಿಸುತ್ತಾರೆ. ವ್ಯಂಗ್ಯವು ಗೇಲಿಯ ದನಿಗೆ ತಿರುಗಿರುವ ಕಡೆಯಲ್ಲಿ ಸಹ ಅದರ ಹಿಂದೆ ಕ್ರೌರ್ಯ ಸಿನಿಕತೆಗಳಿಲ್ಲ. ಅದಕ್ಕೆ ಬದಲಾಗಿ ಪರಿಸ್ಥಿತಿ ಅನಿವಾರ್ಯವಾಗಿತ್ತೆನ್ನುವ ಅರಿವು, ಆ ಅರಿವಿನ ಬೆನ್ನಿಗೇ ಮೂಡುವ ಅನುಕಂಪಗಳು ವಿಡಂಬನೆಗೆ ಒಂದು ಘನತೆ ಕೊಡುತ್ತವೆ. ವಿಡಂಬಿತ ಪಾತ್ರವೊಂದನ್ನು ಕವಿಯೇ ಅಭಿನಯಿಸುವಾಗಲಂತೂ ಇದು ಆರೋಗ್ಯಕರವಾದ ಆತ್ಮವ್ಯಂಗ್ಯವಾಗುತ್ತದೆ. ಕವಿತೆಯ ಕಡೆಯ ಭಾಗದಲ್ಲಿ ವರ್ಧಿಷ್ಣುವಾದ ಕಾಯಿಹರೆಯ ತನ್ನ ಒಗರು ಹುಳಿ ನೀಗಿ ಸ್ವಸ್ವರೂಪದ ಅರಿವಿನಿಂದ ಕಳಿತು ಹಣ್ಣಾಗುವ ರೀತಿಯನ್ನು ವರ್ಣಿಸುವಾಗ ಮಾತು ಸ್ವಗತದ ಕೆಳದನಿ ಗಳಿಸಿಕೊಳ್ಳುವುದನ್ನು ಗಮನಿಸಬಹುದು. ಭೂತ ವರ್ತಮಾನಗಳ ನಿಕಟ ಸಂಬಂಧದ ಬಗ್ಗೆ ಸ್ಪಷ್ಟವಾದ ನಿಲುವಿರುವ ಈ ಕವಿ ಭೂತ ಕವನದ ಒಂದೆರಡು ಚಿತ್ರ ಪದಪುಂಜಗಳನ್ನು ವರ್ಧಮಾನದ ಒಡಲಲ್ಲಿ ಹೆಣೆದಿರುವುದು ಅರ್ಥವತ್ತಾದ ಕಾವ್ಯತಂತ್ರವೆನಿಸುತ್ತದೆ.
ವರ್ಧಮಾನದಲ್ಲಿ ಮುಂದಿನ ಪೀಳಿಗೆಯನ್ನು ಕುರಿತ ಕವಿಯು ಚಿಂತನೆಯಿದ್ದರೆ ’ಅಜ್ಜ ನೆಟ್ಟಾಲ’ ಕವನದಲ್ಲಿ ವರ್ತಮಾನವು ಪರಂಪರೆಯ ಬಗ್ಗೆ ತೋರುವ ಪ್ರತಿಕ್ರಿಯೆ ಇದೆ. ಕವಿತೆಯ ಮೊದಲೆರಡು ಭಾಗಗಳಲ್ಲಿ ಆನೆಗಳ ಮನೋಹರ ಪ್ರತಿಮೆಗಳ ಕೌಶಲಪೂರ್ಣ ವರ್ಣನೆ ಬರುತ್ತದೆ. ಹಬ್ಬ ಉತ್ಸವಗಳ ರೂಪದಲ್ಲಿ, ಎಳೆಯರಿಗೆ ಪ್ರಿಯವಾಗುವ ಪರಂಪರೆ ಅವರ ಮನಸ್ಸನ್ನು ಆಕ್ರಮಿಸುವ ರೀತಿಯನ್ನು ವಿಶಾಲ ಆಲದ ಅಡಿಯಲ್ಲಿ ಮಕ್ಕಳ ಆಡುವ ಆಟ ಪಾಟ ನಾಟಕಗಳ ಮೂಲಕ ಕವಿ ಸೂಚಿಸುತ್ತಾರೆ. ಪರಂಪರೆಯ ವಿರುದ್ಧ ಬಂಡಾಯವೇಳುವ ಹರೆಯದ ಯುವಕನ ಆಕ್ರೋಶ, ಕೆರಳು, ಅಹಂಕಾರ ತಪ್ತತೆಗಳನ್ನು ಆಲದ ಮರವನ್ನು ಕಂಡು ರೂಪಗೊಳ್ಳುವ ಒಂಟಿ ಸಲಗನ ಪ್ರತಿಮೆ ಮನೋಜ್ಞವಾಗಿ ಧ್ವನಿಸುತ್ತದೆ. ಆನೆಯ ಪ್ರತಿಮೆಯ ಪ್ರಾಣ ರೇಖೆಗಳು ಆಲದ ಒಡಲಿನಿಂದಲೇ ಮೂಡುವುಉ ಕವನದ ವಿವಿಧಾಂಗಗಳಿಗಿರುವ ಗಾಢ ಸಂಬಂಧವನ್ನೂ ಕಾವ್ಯಶಿಲ್ಪದ ಬಿಕ್ಕಟ್ಟಿಗೂ ಸಾಕ್ಷಿ. ಹರಯದ ಸಾಹಸಗಳ ಲೇಖನವಂಬಂತೆ `ಮೈಯ ಮೇಲೆಲ್ಲ ದಾಖಲೆಪಟ್ಟಿ ಕೆತ್ತಿಕೊಂಡಿರುವ ಸಲಗ' ಮುಂದೆ 'ವಾಸ್ತವದ ರಾಜಪಥದಲ್ಲಿ ಹೊತ್ತಂಬಾರಿ ಭಾರಕ್ಕೆ ಕುಗ್ಗುವ ವಿಧೇಯ ಸೊಣಗ'ನಾಗುತ್ತದೆ. ಅನಂತರ ಪರಿವರ್ತನಶೀಲವಾದ ಪರಂಪರೆಯ ಉದಾರ ಸ್ವರೂಪದ ವರ್ಣನೆಯಿದೆ, ಮೇಲೇರುವ ಕೊಂಬೆಗಳು ಕೆಳಗೆ ಬಿಳಲನೂ ಊರುತ್ತಾ, ಆಲದ ಆಕಾರವನ್ನು ಬೆಳೆಸುವುದರ, ವರ್ಣನೆ ಪರಂಪರೆಯಿಂದ ಹೊರಟ ಹೊಸ ತಿರುವುಗಳ ಕಡೆಗೆ ಪರಂಪರೆಯ ಒಂದು ಭಾಗವೇ ಆಗಿ ನಿಲ್ಲುವ ವಿಸ್ಮಯಕ್ಕೆ ಸೊಗಸಾದ ಪ್ರತಿ ರೂಪವೆನ್ನಬಹುದು. ತನ್ನ ಸಾಮಾಜಿಕ ಆಕಾರವನ್ನು ಕಳೆದುಕೊಂಡು ಜನಾಂಗದ ಚಿತ್ರದ್ರವ್ಯದಲ್ಲಿ ಮಾತ್ರ ಉಳಿದ 'ಸಾವಿರದ ಕಂಬದ ಬಸದಿ'ಯನ್ನು ಪಡೆಯಲು ಕಾಯುತ್ತಿರುವ ವ್ಯಕ್ತಿಯ ಪ್ರಸ್ತಾಪದೊಂದಿಗೆ ಕವನ ಕೊನೆಯಾಗುತ್ತದೆ.
'ಶ್ರೀರಾಮ ನವಮಿಯ ದಿವಸ' ಮತ್ತು 'ಆನಂದತೀರ್ಥರಿಗೆ' ಎಂಬ ಕವಿತೆಗಳಲ್ಲಿ ತತ್ವವಾಗಿ ಉಳಿಯುವಂತೆ ಬಾಳಿದ ಎರಡು ಸಾರ್ಥಕ ವ್ಯಕ್ತಿತ್ವಗಳನ್ನು ಮೆಚ್ಚುಗೆ ಗೌರವಗಳೊಂದಿಗೆ ಕವಿ ಚಿಂತಿಸಿದ್ದಾರೆ. ಅಂಥ ವ್ಯಕ್ತಿತ್ವಗಳ ಪುನರಾಗಮನವನ್ನು ಕಾತರದಿಂದ ಕಾಯುತ್ತಿರುವ ರೀತಿಯಾಗಿ ಈ ಕವಿತೆಗಳ ಕೊನೆಯಿದೆ. ಈ ಸಂಗ್ರಹದಲ್ಲಿರುವ ನಾಲ್ಕು ರಾಜಕೀಯ ವಿಡಂಬನೆಗಳಲ್ಲಿ ’ಬರುತ್ತಾರೆ ಮತ್ತು ಗಜೇಂದ್ರಮೋಕ್ಷ’ ಉತ್ತಮವಾಗಿದೆ ಎನ್ನಬಹುದು. ಅರುವತ್ತರ ತೊಗಲು ತೊಟ್ಟ ಹದಿನೆಂಟರ ಬಂಟರ ಹುಚ್ಚು ಆಡಳಿತ ವೈಖರಿ ಮತ್ತು ತನ್ನನ್ನೇ ತಾನು ತಿಳಿದುಕೊಳ್ಳದೆ ಸದಾ ಕನವರಿಕೆಯಲ್ಲಿ ಹೊರಳುತ್ತಿರುವ ತಟಸ್ಥ ರಾಷ್ಟ್ರದ ರಾಜಕಾರಣ ಪ್ರಜ್ಞೆ-ಇವು ಮೇಲಿನ ಕವನಗಳಲ್ಲಿ ಪರಿಣಾಮಕಾರಿಯಾದ ವಿಡಂಬನೆಗೆ ಸಿಕ್ಕಿದೆ.
ಈ ಕವನಗಳನ್ನು ಓದುವಾಗ ಒಂದೊಂದು ಕಡೆ ಆಡಿಗರ ನುಡಿವಂತಿಕೆ - ಕವನದಿಂದ ಕವನಕ್ಕೆ ಬದಲಾಗದೆ ಏಕದಿಕ್ಕಿನಲ್ಲಿ ಸಾಗುತ್ತಿದೆಯೆಂಬ ಭಾವನೆ ಬರುತ್ತದೆ. ಐದು ಮಾತ್ರೆಯ ಪ್ರಧಾನ ನಡಿಗೆಯ ಅವರ ಲಯವಿಧಾನ ಕೂಡ ಅವರೇ ಸಾಕಷ್ಟು ಬಳಸಿ ಹಳತು ಮಾಡಿರುವಂಥದು. ಇದನ್ನೆಲ್ಲ ಗಮನಿಸಿದ ಮೇಲೂ ವರ್ಧಮಾನ ಕವಿತಾ ಸಂಗ್ರಹ ಅಡಿಗರ ಉತ್ತಮ ಕೃತಿಗಳಲ್ಲಿ ಒಂದೆಂದು ಧಾರಾಳವಾಗಿ ಹೇಳಬಹುದು.
-ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ವರ್ಧಮಾನ (ಕವನ ಸಂಕಲನ)
ಮೊದಲನೆಯ ಆವೃತ್ತಿ 1972
ಅಕ್ಷರ ಪ್ರಕಾಶನ ಸಾಗರ 577401
ಡೆಮ್ಮೆ ಅಷ್ಟ 49 ಪುಟಗಳು ಬೆಲೆ ರೂ.5-00
ಕೃಪೆ: ಗ್ರಂಥಲೋಕ, ಜನೆವರಿ 1981
©2024 Book Brahma Private Limited.