ತನ್ ಹಾಯಿ

Author : ಎಚ್.ಎಸ್. ಮುಕ್ತಾಯಕ್ಕ

Pages 127

₹ 100.00




Year of Publication: 2021
Published by: ಆಶಿಯಾನಾ ಪ್ರಕಾಶನ
Address: ರಾಯಚೂರು
Phone: 9611933050

Synopsys

ಲೇಖಕಿ ಎಚ್. ಎಸ್. ಮುಕ್ತಾಯಕ್ಕ ಅವರ ಕವನ ಸಂಕಲನ ‘ತನ್ ಹಾಯಿ’. 'ತನ್‌ಹಾಯಿ'  ಅಂದರೆ  ಒಂಟಿತನ.  ಪ್ರತಿಯೊಬ್ಬರು ಒಂದಿಲ್ಲೊಂದು ಕಾರಣಕ್ಕೆ ಒಂಟಿತನವನ್ನು ಅನುಭವಿಸುವರು. ಅದು ಪ್ರೇಮದ ವಿಫಲತೆ ಇರಬಹುದು, ಅಥವಾ ಬೇರಾವುದೋ ಸಂದರ್ಭ ಇರಬಹುದು. ಇಲ್ಲಿಯ ಕವಿತೆಗಳಲ್ಲಿ ಒಂಟಿತನ-ಅದರೊಡನೆ ಬರುವ ಇತರೆ, ಸಂಚಾರಿ ಭಾವಗಳು ದಟ್ಟವಾಗಿವೆ. ಇಲ್ಲಿನ ಕವಿತೆಗಳ ಸ್ಥಾಯಿ ಭಾವವೆ ಒಂಟಿತನ, - ಅದಕ್ಕೆ ಸಂಬಂಧಿಸಿದಂತೆ ಬದುಕಿನಲ್ಲಿ ಹಲವಾರು, ಸಾವಿರಾರು, ಸಂದರ್ಭ, ಘಟನೆ, ಸಮಸ್ಯೆಗಳಿರುತ್ತವೆ - ಇವಕ್ಕೆ ತಕ್ಕಂತೆ ಪ್ರಕೃತಿಯಲ್ಲಿರುವ ಚುಕ್ಕೆ, ಚಂದ್ರ, ಬೆಟ್ಟ, ಗುಡ್ಡ, ಇವೆಲ್ಲ ಭಾವಕ್ಕೆ ತಕ್ಕಂತೆ ಬೇರೆಬೇರೆ ರೀತಿಯಾಗಿ ಕಾಣುತ್ತವೆ ಮತ್ತು ವರ್ತಿಸುತ್ತವೆ.’ ಎಂದು ಲೇಖಕಿ ತಮ್ಮ ಕೃತಿಯ ಕುರಿತಾಗೆ ಹೇಳಿದ್ದಾರೆ.

About the Author

ಎಚ್.ಎಸ್. ಮುಕ್ತಾಯಕ್ಕ
(28 January 1954)

ಎಚ್.ಎಸ್. ಮುಕ್ತಾಯಕ್ಕ ಅವರು 1954 ಜನವರಿ 28ರಂದು ಜನಿಸಿದರು. ಇವರು ಬರೆದ ಪ್ರಮುಖ ಕೃತಿಗಳೆಂದರೆ ನಾನು ಮತ್ತು ಅವನು, ನೀವು ಕಾಣಿರೇ ನೀವು ಕಾಣಿರೇ, ಡಕ್ಕೆಯ ಬೊಮ್ಮಣ್ಣ, ಶಿವಶರಣೆ ಮುಕ್ತಾಯಕ್ಕ, ಕಭೀ ಕಭೀ ಮುಂತಾದವು. ಇವ ನೀವು ಕಾಣಿರೇ ನೀವು ಕಾಣಿರೇ ಕವನ ಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ಮಮ್ಮ ಹೆಗ್ಗಡೆ ದತ್ತಿ ನಿಧಿ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ. ...

READ MORE

Reviews

ಸಲೀಂ ಅವರ ಕಥೆಗಳು- ಸಂಗಾತಿ ಪುಸ್ತಕ- ಕು.ಸ. ಮಧುಸೂದನರಂಗೇನಹಳ್ಳಿ

--

‘ತನ್ ಹಾಯಿ’ ಕೃತಿಯ ವಿಮರ್ಶೆ

ಕನ್ನಡದ ಕಾವ್ಯ ಓದುಗರನ್ನು ತನ್ನ ಕಾವ್ಯ ಕಾವ್ಯದ ಶೈಲಿಯಿಂದ ಬೆಚ್ಚಿಬೀಳಿಸಿದವರು ಕವಯಿತ್ರಿ ಎಚ್. ಎಸ್. ಮುಕ್ತಾಯಕ್ಕ, ಈಗ 'ತನ್‌ಹಾಯಿ' ಸಂಕಲನದ ನೂರಿಪ್ಪತ್ತೊಂದು ಕವನಗಳ ಮೂಲಕ 'ತನ್‌ಹಾಯಿ' ಒಂಟಿತನದ ವ್ಯಾಖ್ಯಾನ ಮಾಡಿದ್ದಾರೆ. ಇಲ್ಲಿನ ಯಾವ ಕವನಕ್ಕೂ ಹಣೆಪಟ್ಟಿ ಅಂದರೆ ಹೆಸರಿಲ್ಲ, ಆದರೆ ನಿರಂತರ ಮಿಡಿವ ಹೃದಯವಿದೆ. ಇಲ್ಲಿ ಒಂಟಿತನವೆನ್ನುವುದು ಒಂದು ಸಂಕೇತ ಮಾತ್ರ 'ಸಮುದ್ರವನೆ ಕುಡಿಯಬೇಕೆಂದಿದ್ದೆ. ನಿನ್ನ, ನೆನಪಿನ ಎರಡು ಹನಿ ಕಣ್ಣೀರಿನಲ್ಲಿ ಮುಳುಗಿ ಹೋದೆ' ಎಂದು ಒಂಟಿತನವನ್ನು ಅನುಭವಿಸುತ್ತಲೇ ನನ್ನ ನಿನ್ನ ನಡುವೆ ಇರುವ, ಈ ಗಾಜಿನ ಗಳಿಗೆಗಳ ಒಡೆದು ಬಿಡು, ಅದು ನಿನಗೆ ಅಸಾಧ್ಯವಲ್ಲ' ಎಂದು ಆದೇಶಿಸುತ್ತಾಳೆ. ವಿರೋಧಾಭಾವಗಳನ್ನು ಏಕೋಭಾವವಾಗಿಸುವ ನೇರವಾಗಿ ಹೃದಯಕ್ಕೆ ಸರ್ವಾಧಿಕಾರಿಯಂತೆ ನುಗ್ಗುವ ಇಲ್ಲಿನ ಕವಿತೆಗಳ ಭಾಷೆ, ಶೈಲಿ, ಕನ್ನಡಕ್ಕೆ ಅನುವಾದಿಸಿ ತಾವೇ ಶಕ್ತಿಯುತವಾಗಿದೆ. ‘ಗೆಳೆಯ ನೀನು ಸುಂದರವಾದ ಕಪ್ಪುರಾತ್ರಿ' ಇಂಥ ನೂರಾರು ಸಾಲುಗಳು ಇಲ್ಲಿನ ಕವನಗಳಲ್ಲಿವೆ. 'ನಾನು ನೋವ ನುಂಗಿದೆ, ಅವು ಶಬ್ದಗಳಾಗಿ ಮೂಡತೊಡಗಿದವು' ಇಲ್ಲಿನ ನೋವುಗಳು ಕೇವಲ ಪ್ರೇಯಸಿಯ ಒಂಟಿತನದ ನೋವುಗಳಲ್ಲ. ಬದುಕಿನ ಪಯಣದಲ್ಲಿ ಎಲ್ಲ ಕೋನಗಳಿಂದ ಕಾಡುವ ನೋವುಗಳು ಉದಾಸ, ವಿಷಾದ, ಉನ್ಮಾದ, ಸಾಂತ್ವನ, ಸಿಟ್ಟು, ಎಲ್ಲ ತೀವ್ರವಾಗಿದ್ದರೂ 'ಬಾ, ಬಂದು ಬಿಡು. ಎಲ್ಲಿದ್ದರೂ, ಚಿಕ್ಕೆಗಳ ಎಡವು' ಎನ್ನುವ ಬದುಕಿನ ಬಯಕೆಯೂ ಆಳವಾಗಿ ತಟ್ಟುತ್ತದೆ.

ಪ್ರತಿಮೆ, ಸಂಕೇತಗಳನ್ನೂ ಪಾತ್ರವಾಗಿಸುವ ಪರಿ ಮುಕ್ತಾಯಕ್ಕನ ಕಾವ್ಯದ ಶಕ್ತಿ. ಮತ್ತೆ ಮತ್ತೆ ಓದಬೇಕೆನಿಸುವ ಇಲ್ಲಿನ ಕವನಗಳು ಬಿಡಿಕವನಗಳೂ ಹೌದು, ಅವುಗಳಿಗೆ ಹೆಸರಿಲ್ಲದಿರುವುದರಿಂದ ಎಲ್ಲ ಕವನಗಳೂ ಒಂದೇ ನೀಳ್ಗವನವಾಗಿವೆ. ಓದುತ್ತ ಹೋದಂತೆ ನಮ್ಮನ್ನು ತಮ್ಮೊಡನೆ ಮಾತಿಗೆಳೆಯುತ್ತವೆ. 'ತನ್‌ಹಾಯಿ' ಅಂದರೆ 'ಒಂಟಿತನ'ವನ್ನು ದೂರಮಾಡುತ್ತವೆ.

(ಕೃಪೆ: ಹೊಸತು)

-----

ಎಚ್. ಎಸ್. ಮಕ್ತಾಯಕ್ಕ ಅವರದು ಆಧುನಿಕ ಕನ್ನಡ ಕಾವ್ಯದಲ್ಲಿ ಸುಪರಿಚಿತವಾದ ಹೆಸರು. ಅವರ “ನಾನು ಮತ್ತು ಅವನು ಕವಿತಾ ಸಂಕಲನವು ಕನ್ನಡ ಮಹಿಳಾ ಕಾವ್ಯ ಚರಿತ್ರೆಯಲ್ಲಿ ತನ್ನ ದಿಟ್ಟ ಅಭಿವ್ಯಕ್ತಿಯಿಂದಾಗಿ ಒಂದು ಹೊಸ ದಾಖಲೆಯನ್ನು ಸೃಷ್ಟಿಸಿದೆ. ತೋಟದಲ್ಲಿ ಇವರ “ನಾವು ಪತಿವ್ರತೆಯರಲ್ಲ" ಕವಿತೆ ಆ ದಿನಗಳಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿತು!

ಮುಕ್ತಾಯಕ್ಕ ಅವರ ಗಜಲ್‌ಗಳಿಂದಾಗಿ ನೆನಪು ನನ್ನ ಮನಸ್ಸಿನಲ್ಲಿ ಬದಿಯಲ್ಲಿ ಹಸಿರಾಗಿಯೆ ಇದೆ. ಇವರ ತಂದೆ ಶಾಂತರಸರು ಗಜಲ್ ಕಾವ್ಯ ರಚನೆಯಲ್ಲಿ ನಾಲಿಗೆಗಳು ಎತ್ತಿದ ಕೈ. ತಂದೆಯಂತೆ ಇವರೂ ಗಜಲ್‌ಗಳ ಕಾವ್ಯ ರಚನೆಯ ಹಾದಿಯನ್ನೇ ಆಯ್ಕೆ ಮಾಡಿಕೊಂಡರೆಂದು ತೋರುತ್ತದೆ. ಪ್ರಸ್ತುತದಲ್ಲಿ ನೀವೇಕೆ ಹೀ ಪ್ರಕಟವಾದ "ತನ್ ಹಾಯಿ” (2021) ಕವನ ಸಂಗ್ರಹವು ತನ್ನ ಹಲವು ವಿಶಿಷ್ಟ ಗುಣಗಳಿಂದಾಗಿ ನನಗೆ ಮೆಚ್ಚುಗೆಯಾಗಿದೆ. ಗಜಲ್‌ಗಳಂತೆಯೇ ದೂರವಾಗ ವಿರಹದ ಹೂರಣವುಳ್ಳ ಇಲ್ಲಿಯ ಕವಿತೆಗಳು ಕನ್ನಡ ಸಾಹಿತ್ಯದಲ್ಲಿ ಭಿನ್ನ ಮಾದರಿಯನ್ನು ಸ್ಥಾಪಿಸಿವೆ ಎಂದು ನಾನು ಅಂದುಕೊಳ್ಳುತ್ತೇನೆ. ಉರ್ದು ಗಜಲ್‌ಗಳ ರಚನೆಯಲ್ಲಿಯ ನೀತಿ ನಿಯಮಗಳನ್ನು ತ್ಯಜಿಸಿ ತಮಗೆ ಬೇಕಿದ್ದ ಸ್ವಚ್ಛಂದದಲ್ಲಿ ರಚನೆಗೊಂಡ 121 ಕವಿತೆಗಳ ಆತ್ಮವು ಮಾತ್ರ ಗಜಲ್‌ಗಳದ್ದೇ! ಆದ್ದರಿಂದ ಇವನ್ನು ಕನ್ನಡದ ಗಜಲ್'ಗಳೆಂದು ಕರೆಯಬಹುದು.

ಈ ಪುಸ್ತಕದ ಶೀರ್ಷಿಕೆಯೂ ಉರ್ದು ಪದವೇ, 'ತನ್‌ಹಾಯಿ'ಯ 121 ಕವಿತೆಗಳ ಸರಣಿಯಲ್ಲಿ ಏಕಾಕಿತನ, ವಿರಹ ಮತ್ತು ನೆನಪುಗಳು ಮಾರ್ದನಿಗೊಳ್ಳುತ್ತ ನೋವಿನ ಹಲವಾರು ಮುಖಗಳನ್ನು ತೋರುತ್ತವೆ. ವಿರಹವು ಇಲ್ಲಿಯ ಒಟ್ಟು ಕವಿತೆಗಳಲ್ಲಿ ಸ್ಥಾಯೀಭಾವ. ಜಗತ್ತಿನಲ್ಲಿ ಬಿಡದಂತೆ, ಪ್ರೇಮಗೀತೆಗಳಿಗಿಂತ ವಿರಹಗೀತೆಗಳ ಸಂಖ್ಯೆಯೇ ಹೆಚ್ಚು. 'ತನ್ಹಾಯಿ' ಕವಿತೆಗಳು ಆಪ್ಯಾಯಮಾನವಾಗುವುದು ಅವು ಕಟ್ಟಿಕೊಡುವ ಪ್ರತೀಕಗಳಿಂದ, ವಿರಹಾಗಿ ಗ್ರಸ್ತ ಕವಿ, ಇಲ್ಲಿ ಚಿತ್ರಿಸಿದ ಸಂಜೆ, ರಾತ್ರಿ, ಮುಂಜಾವು ಇತ್ಯಾದಿ ಪ್ರಕೃತಿಯ ಮಾದಕ ಸಮಯದ ವರ್ಣನೆಗಳ ಹಲವಾರು ನಮೂನೆಗಳು ಸೃತಿ ಪಟಲದಲ್ಲಿ ಅಷ್ಟೊತ್ತಿ ನಿಲ್ಲುತ್ತವೆ. ಪ್ರಾಮಾಣಿಕ ಪ್ರಕೃತಿಯ ಈ ಸುಂದರ ಸರ್ವಕಾಲಿಕ ಸೌಂದರ್ಯವು ಅಲೆಯುತ್ತಿರುವ ಅಭಿವ್ಯಕ್ತಿಗಳ ದಗ್ಧಹೃದಯದ ವಿರಹಿಯ ಏಕಾಕಿತನವನ್ನು ಉಲ್ಬಣಗೊಳಿಸುತ್ತದೆ. ಗುಡ್ಡದ ಮೇಲಿನ ಗುಡಿಯಲ್ಲಿಯ ಘಂಟೆನಾದ, ಸಮುದ್ರದ ಅಲೆಗಳ ತಾಳಬದ್ಧ ಮೊರೆತಗಳು, ಕವಿಯ ನೆನಪಗಳ ಹಂತದ ತೀಕ್ಷ್ಯತೆಯನ್ನು ಅಧಿಕಗೊಳಿಸುತ್ತವೆ!

ಇಲ್ಲಿಯ ಕವಿತೆಗಳನ್ನು ಓದುತ್ತ ಸಾಗಿದಂತೆ ದಾವಾನಲಕ್ಕೆ ಬಲಿಯಾದ ಕಾಡಿನ ವ್ಯಕ್ತಿಗಳ ಪರಿಯಂತೆ ತಳಮಳವು ಉಲ್ಬಣಿಸುತ್ತ ನಡೆಯುತ್ತದೆ. ಇಲ್ಲಿಯ ಕವಿತೆಗಳಲ್ಲಿ ಹಲವಾರು ದ್ವಂದ್ವ ಭಾವಗಳಿವೆ. ಸ್ಥಿತಿಗಳಿವೆ. ಒಮ್ಮೆ ಬದುಕು ಸುಂದರವಾಗಿದ್ದರೆ ಬೇರೆ ಕಡೆಗೆ ಅದು ರೂಕ್ಷವಾಗುತ್ತದೆ. ಒಂದೆಡೆ ಪ್ರಿಯಕರ ಮನಮೋಹನವಾಗಿ ಕಂಡರೆ ಇನ್ನೊಂದೆಡೆ ಕ್ರೂರಿಯಾಗುತ್ತಾನೆ. ನೆನಪು ಅನೇಕ ಸಲ ಹೃದಯ ಸುಟ್ಟರೆ, ಬೇರೆ ಕಡೆ ನೆನಪುಗಳು ತೋಟದಲ್ಲಿಯ ಹೂಗಳಂತೆ ನಳನಳಿಸುತ್ತವೆ.

 ನೂರಿಪತ್ತೊಂದು ಕವಿತೆಗಳನ್ನು ಬರೆಯಲು ಮುಕ್ತಾಯಕ್ಕ ಅದ್ದಿಕೊಂಡ ಶಾಯಿಯು ಬೂದುಬಣ್ಣದ್ದೆ ಆದರೆ ಈ ನೆನಪಿಗೆ ಬೂದಿಯಲ್ಲಿ ಕಿಡಿಗಳಿವೆ, ನಿಗಿನಿಗಿ ಕೆಂಡಗಳಿವೆ, ಕುಣಿಯುವ ಉರಿಯ ನಾಲಿಗೆಗಳು ಇವೆ. ಕೆಲವು ಉದಾಹರಣೆಗಳನ್ನು ತೆಗೆದುಕೊಳ್ಳೋಣ.

ಆ ನೆನಪುಗಳೋ!
ನೀವೇಕೆ ಹಿಂಬಾಲಿಸಿ ಬರುವಿರಿ,
ಅವಕೆ ಕೇಳುವೆ,
ದೂರದಾಗಸದಲಿ ಚಿಕ್ಕೆಯೊಂದು
ಉರಿದು ಬೀಳುವುದನ್ನು
ನೋಡುತ್ತ..(ಕವಿತೆ-46)

ನಿನ್ನೊಲವಿನ ಬೆಂಕಿಯಲ್ಲಿ
ಉರಿಯ ಬಯಸುತ್ತೇನೆ,
ಕೊನೆಗೆ ನನ್ನಾತ್ಮವೂ
ಕರ್ಮರಂದತೆ ಉರಿದು
ಹೋಗಲಿ, ಯಾವ ಕುರುಹೂ
ಜಗತ್ತಿನಲ್ಲಿ ಬಿಡದಂತೆ,
ಎಂದೂ ಮತ್ತೆ ಹುಟ್ಟಿದಂತೆ(ಕವಿತೆ-60)

'ತನ್ ಹಾಯಿ'ಯ ಕವಿತೆಗಳಲ್ಲಿ ನಾನು ಮೆಚ್ಚಿಕೊಂಡದ್ದು ಇಲ್ಲಿಯ ಪ್ರಾಮಾಣಿಕ ಅಭಿವ್ಯಕ್ತಿಯನ್ನು ಕೃತಕತೆ ಎನಿತೂ ಇಲ್ಲದ ಸಹಜ ಸರಳ ಇತ್ತಿರುವ ಅಭಿವ್ಯಕ್ತಿಗಳು ಇಲ್ಲಿವೆ. ಭಾಷಾಪ್ರಯೋಗ ಪರಿಣಾಮಕಾರಿಯಾಗಿದೆ. ಚಿತ್ರಗಳ ಮೂಲಕ ಹೇಳುವ ವಿರಹದ ಕತೆಯು ಬಹಳ ಹೃದಯಸ್ಪರ್ಶಿಯಾಗುತ್ತವೆ. ಉಪಮೆ, ರೂಪಕ ಮತ್ತು ಪ್ರತೀಕಗಳ ಪ್ರಯೋಗಗಳ ಮೂಲಕ ತನ್ನ ವಿರಹದ ಆಳ, ಎತ್ತರಗಳನ್ನು ವಿಸ್ತರಿಸಿದ ಪರಿಯು ಅದ್ಭುತವಾಗಿದೆ.

ಮುಕ್ತಾಯುಕ್ಕನಲ್ಲಿ ಕಾವ್ಯಕೌಶಲವಿದೆ, ನಿರೂಪಣೆಯ ಕಲೆ ಇದೆ, ಮೌಲಿಕ ಅನುಭವಗಳಿವೆಯಾದ್ದರಿಂದ ಅವರು ಬರೆಯುತ್ತಿರಬೇಕು....ಬರೆಯುತ್ತಲೇ ಮುಂದುವರೆಯಬೇಕು ಎಂದು ನಾನು ಆಶಿಸುತ್ತೇನೆ.

(ಕೃಪೆ: ಸಮಾಜಮುಖಿ, ಬರಹ-ಮಾಲತಿ ಪಟ್ಟಣಶೆಟ್ಟಿ)

Related Books