‘ಸ್ಪರ್ಶ ಶಿಲೆ’ ಲೇಖಕಿ ಕೆ.ಎನ್. ಲಾವಣ್ಯಪ್ರಭ ಅವರ ಕವಿತೆಗಳ ಸಂಕಲನ. ಇಲ್ಲಿ ಲಾವಣ್ಯ ಪ್ರಭಾ ಅವರ ಮೂವತ್ತಾರು ಕವಿತೆಗಳು ಸಂಕಲನಗೊಂಡಿವೆ. ಇಲ್ಲಿನ ಕವಿತೆಗಳ ವಿಶೇಷತೆ ಅಂದರೆ ವಸ್ತು ವೈವಿಧ್ಯತೆ. ಕವಿ ತನ್ನ ವೈಯಕ್ತಿಕ ನೆಲೆಯ ಅನುಭವಗಳನ್ನು ತನ್ಮಯತೆಯಿಂದ ನೋಡುತ್ತ ಅವನ್ನು ಸಾರ್ವತ್ರಿಕಗೊಳಿಸುವ ಬಗೆಯನ್ನು ಒಂದೆಡೆಯಲ್ಲಿ ಹುಡುಕುತ್ತಿದ್ದರೆ, ಸಾಮಾಜಿಕ ಅನುಭವವನ್ನು ಭಾವತೀವ್ರತೆಯಲ್ಲಿ ಕಟ್ಟುತ್ತ ತನ್ನದನ್ನಾಗಿಸಿಕೊಳ್ಳುವ ಬಗೆ ಹೇಗೆ ಎಂಬುದನ್ನು ಇನ್ನೊಂದೆಡೆ ಹುಡುಕುತ್ತಿರುವುದು ಕಾಣುತ್ತದೆ. ಆ ಅರ್ಥದಲ್ಲಿ ಇಲ್ಲಿನ ಕವಿತೆಗಳನ್ನು ವಿಶಾಲವಾಗಿ ಎರಡು ಗುಂಪುಗಳನ್ನಾಗಿ ಮಾಡಿ ಓದಲು ಸಾಧ್ಯವಿದೆ. ನವಿರುತನ, ಬೆಚ್ಚಗಿನ ಸಂವೇದನೆ, ಆರ್ದತೆಗಳನ್ನು ಅಭಿವ್ಯಕ್ತಿಸುವ, ಖಾಸಗಿಯಾಗಿರುತ್ತಲೇ ತನ್ನ ಬೆಚ್ಚಗಿನ ಭಾವವನ್ನು ವಿಸ್ತರಿಸಲು ಹವಣಿಸುವ ಕವಿತೆಗಳದ್ದು ಒಂದು ಗುಂಪು, ಇನ್ನೊಂದು ಸಾಮಾನ್ಯ ಲೋಕಾನುಭವವನ್ನು ಅಂತರಂಗದಲ್ಲಿ ಅನುಭವಿಸುತ್ತ ತಾನು ಸಾರ್ವತ್ರಿಕಗೊಳ್ಳುವ ವಿಧಾನವನ್ನು ಕಂಡುಕೊಳ್ಳುವುದು. ಕಾವ್ಯ ಅಥವಾ ಒಟ್ಟಾರೆ ಸಾಹಿತ್ಯ ಉದ್ದೇಶವೇ ಏಕಾಂತ- ಲೋಕಾಂತಗಳ ಅಂತರವನ್ನು ಅಳಿಸಿ ಹಾಕುತ್ತ ಇಲ್ಲವೇ ಅವುಗಳ ನಡುವಿರುವ ಸಾವಯವ ಸಂಬಂಧವನ್ನು ಅರಿಯುತ್ತ ಹೊಸ ಪ್ರಜ್ಞೆಯನ್ನು ಪಡೆಯುವುದಾಗಿರುವುದರಿಂದ ಇಲ್ಲಿ ಕೊಡು- ಕೊಳೆ ಎರಡೂ ಇರುತ್ತವೆ. ಅವು ಸಮಸಮವಾಗಿ ಬೆರೆತಾಗ ಓದುಗ ಹೊಸ ಅನುಭವವನ್ನು ಪಡೆಯಬಲ್ಲ. ಲಾವಣ್ಯ ಪ್ರಭಾ ಅವರು ಎರಡನ್ನೂ ಸಾಧಿಸುವ, ಪಡೆಯುವ ಪ್ರಯತ್ನದಲ್ಲಿದ್ದಾರೆ ಮತ್ತು ಆ ಪ್ರಯತ್ನಶೀಲತೆ ಗಂಭೀರವಾಗಿದೆ ಎನ್ನಬಹುದು
ಕವಯತ್ರಿ ಕೆ.ಎನ್.ಲಾವಣ್ಯ ಪ್ರಭಾ ನವೆಂಬರ್ 2 ,1971 ರಂದು ಕನಕಪುರದಲ್ಲಿ ಜನನ.ಅಲ್ಲಿಯ ರೂರಲ್ ಕಾಲೇಜಿನಲ್ಲಿ ಬಿಎಸ್ಸಿ ವರೆಗೆ ವ್ಯಾಸಂಗ. ಇಂಗ್ಲಿಷ್ ಅಧ್ಯಾಪಕರಾಗಿದ್ದ ಹೆಸರಾಂತ ಕವಿ ವೇಣುಗೋಪಾಲ ಸೊರಬರು ,ಇತರ ಕನ್ನಡ ಅಧ್ಯಾಪಕರುಗಳು, ಎಲ್ಲೇಗೌಡ ಬೆಸಗರಹಳ್ಳಿ ಅವರ ಮತ್ತು ಕುಟುಂಬದ ಆತ್ಮೀಯ ಮಿತ್ರರಾಗಿದ್ದ ಪ್ರಸಿದ್ಧ ಕವಿ ಡಾ.ಹೆಚ್.ಎಸ್. ವೆಂಕಟೇಶಮೂರ್ತಿ ಅವರ ಪ್ರೋತ್ಸಾಹ ,ಮಾರ್ಗರ್ಶನದಿಂದ ಪಿಯುಸಿಯಿಂದಲೇ ಅಂದರೆ ಹದಿನೆಂಟನೇ ವಯಸ್ಸಿನಿಂದ ಕಾವ್ಯ ರಚನೆ ಆರಂಭವಾಗಿ ಅಂತರಕಾಲೇಜು ಕವಿಗೋಷ್ಟಿಗಳಲ್ಲಿ ನಿರಂತರ ಭಾಗವಹಿಸುವಿಕೆಯಿಂದಾಗಿ ಮುಂದೆ ಕ್ರೈಸ್ಟ್ ಕಾಲೇಜಿನ ಚಿ.ಶ್ರೀನಿವಾಸರಾಜು ಅವರಿಂದ ಗುರುತಿಸಲ್ಪಟ್ಟು ಬೆಳಕಿಗೆ ಬಂದ ಅನೇಕ ಪ್ರಮುಖ ಕವಿಗಳಲ್ಲಿ ಇವರೂ ಸಹಾ ಒಬ್ಬರು. ...
READ MORE