‘ಸಂತಳ ಜೋಳಿಗೆಯ ರೊಟ್ಟಿ’ ಹಿರಿಯ ಕವಿ ಡಾ. ಕೆ. ಷರೀಫಾ ಅವರ ಕವನ ಸಂಕಲನ. ಇಲ್ಲಿರುವ ನೂರೊಂದು ಕವಿತೆಗಳಲ್ಲಿ ಕನಿಷ್ಠ ಹದಿನೈದು ಕವಿತೆಗಳು ತಾಯಿಯನ್ನುಕೇಂದ್ರೀಕರಿಸಿವೆ. ಈ ಕವಿಗೆ, ತಾಯಿಯ ಪರಂಪರೆಯನ್ನು ಮುಂದುವರಿಸುವ ಅದನ್ನು ವಿಶ್ಲೇಷಿಸುವ ಮತ್ತು ಅದನ್ನು ವಿರೋಧಿಸುವ ಉಪಕರಣವಾಗಿ ಒದಗಿ ಬರುತ್ತಾಳೆ. ಅಮ್ಮನ ಮಗಳು ಅಮ್ಮನೇ ಆಗಿಬಿಡುವ ಪ್ರಕ್ರಿಯೆಯಲ್ಲಿ ಈ ತಿಳಿವಳಿಕೆಯು ಮುಕ್ತಾಯವಾಗುತ್ತದೆ. ಆದರೆ, ಈ ಪೀಳಿಗೆಯು ಅಮ್ಮನ ಹಿಂದಿನ ಪೀಳಿಗೆಯ ಅಮ್ಮನಿಗಿಂತ ಒಂದಿಷ್ಟು ಮುಂದೆ ಹೋಗಿರುತ್ತಾಳೆ. ಅಷ್ಟೇ ಅಲ್ಲ, ಷರೀಫಾ ಅವರಿಗೆ ತಾಯಿಯ ವೈಯಕ್ತಿಕ ಮತ್ತು ಸಾರ್ವಜನಿಕತೆಯನ್ನು ಬೆಸೆಯುವ ಕೊಂಡಿಯಾಗುತ್ತಾಳೆ. ಅಮ್ಮನ ಬಗ್ಗೆ ಬರೆಯುವಾಗ ವಿವರಗಳು ಹೆಚ್ಚು ಮೂರ್ತವಾಗುತ್ತವೆ. ಭಾಷೆ ಹೆಚ್ಚು ಆರ್ದ್ರವಾಗುತ್ತದೆ ಮತ್ತು ಬೀಸುಮಾತುಗಳು ಕಡಿಮೆಯಾಗುತ್ತವೆ. ಮನೆ ಮುಂದೆ ದಟ್ಟ ಹಸಿರು ಹಂದರ ಅಮ್ಮನ ನೆರಳಾಗಿ, ಪಡಿಯಚ್ಚಾಗಿ ಮೂಡಿವೆ. ಉಳಿದಂತೆ ಎಲ್ಲ ಕವಿತೆಗಳು ಭಾವಪೂರ್ಣವಾಗಿ, ಕಟು ವಾಸ್ತವದ ವಿಮರ್ಶೆಯಾಗಿ ಧ್ವನಿಸುತ್ತವೆ.
ಲೇಖಕಿ ಕೆ.ಷರೀಫಾ ಅವರು 1957 ಮೇ 05ರಂದು ಗುಲಬರ್ಗಾದಲ್ಲಿ ಜನಿಸಿದರು. ತಂದೆ ಬಾಬುಮಿಯಾ, ತಾಯಿ ಪುತಲೀಬೇಗಂ. ಬಿಡುಗಡೆಯ ಕವಿತೆಗಳು, ನೂರೇನ್ಳ ಅಂತರಂಗ, ಪಾಂಚಾಲಿ, ಮುಮ್ರಾಜಳ ಮಹಲು, ಬುರ್ಖಾ ಪ್ಯಾರಡೈಸ್, ಸಂವೇದನೆ (ವಿಮರ್ಶೆ), ಮಹಿಳಾ ಮಾರ್ಗ (ಸಹ ಸಂಪಾದನೆ), ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಮಹಿಳಾ ಸಂವೇದನೆ (ಸಂಶೋಧನೆ), ಹೊಸ ಶತಮಾನದ ಕಾವ್ಯ (ಸಂಪಾದನೆ) ಅವರ ಪ್ರಕಟಿತ ಕೃತಿಗಳು. ಅವರಿಗೆ ಮಹಿಳೆ ಮತ್ತು ಸಮಾಜ ಪ್ರಶಸ್ತಿ, ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಶ್ರೀ ಪ್ರಶಸ್ತಿ, 2019ನೇ ಸಾಲಿನ ಕ.ಸಾ.ಪದ ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ ದತ್ತಿ ಪ್ರಶಸ್ತಿ ದೊರೆತಿದೆ. ...
READ MORE