ರತ್ನನ ಪದಗಳು-ಜಿ.ಪಿ. ರಾಜರತ್ನಂ ಅವರು ಬರೆದ ಕವನಗಳ ಸಂಕಲನ. 1934ರಲ್ಲಿ ಮೊದಲ ಮುದ್ರಣ ಕಂಡಿತ್ತು. ಪ್ರಸ್ತುತ ಕೃತಿ ದ್ವಿತೀಯ ಆವೃತ್ತಿ. ಜಿ.ಪಿ. ರಾಜರತ್ನಂ ಅವರು ಹತ್ತು ಹಲವು ಕೃತಿಗಳನ್ನು ಬರೆದಿದ್ದರೂ ರತ್ನನ ಪದಗಳ ಮೂಲಕವೇ ಹೆಚ್ಚು ಪ್ರಸಿದ್ಧಿಗೆ ಬಂದರು. ಕನ್ನಡಾಭಿಮಾನಕ್ಕೆ ರತ್ನನ ಪದಗಳನ್ನು ಆಕರವಾಗಿ, ಮಾದರಿಯಾಗಿ ಇಂದಿಗೂ ಸ್ವೀಕರಿಸಲಾಗುತ್ತಿದೆ. ರತ್ನನ ಮುಕಾಬಿಲ್, ಬುಂಡೆ ಬಕ್ತ ರತ್ನ, ಪುಟ್ನಂಜಿ ರತ್ನ, ಅ ಆ ಇ ಈ ಪದಗಳ ಪಟ್ಟಿ, ಪದಗಳ ಪೈಲಾ ಪಂಕ್ತಿ ಹೀಗೆ ಒಟ್ಟು 10 ಕವನಗಳಿವೆ. ಈ ಕವನಗಳಿಗೆ ಚಿತ್ತಾರವನ್ನು ಬಿಡಿಸಿದವರು ಕೋ. ಶಿವರಾಮ ಕಾರಂತರು. ರತ್ನನ ಕನ್ನಡಕ್ಕೆ ಕನ್ನಡಿ ಹಿಡಿಯುವ ಪದಗಳ ಅರ್ಥವನ್ನು ಸಹ ನೀಡಿದ್ದು, ಓದುಗರಿಗೆ ಈ ಕವನಗಳು ಸರಳ ಹಾಗೂ ಸುಲಭವಾಗುತ್ತವೆ.
ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...
READ MORE