ಪಾದಗಂಧ

Author : ಭಾಗ್ಯಜ್ಯೋತಿ ಹಿರೇಮಠ

Pages 88

₹ 70.00




Year of Publication: 2019
Published by: ಅನ್ವೇಷಣೆ ಪ್ರಕಾಶನ
Address: #10-11, ಮಾತಾ ತನಿಷ ಅಪಾರ್ಟ್ಮೆಂಟ್‌, ಕೆ.ಎಸ್.ಆರ್‌.ಟಿ.ಸಿ ಲೇಔಟ್‌, ಚಿಕ್ಕಲ್ಲಸಂದ್ರ, ಬೆಂಗಳೂರು - 560061
Phone: 9900566020

Synopsys

ಭಾಗ್ಯಜ್ಯೋತಿ ಹಿರೇಮಠ ಅವರ 'ಪಾದಗಂಧ' ಸಂಕಲನದಲ್ಲಿನ ಕವಿತೆಗಳನ್ನು ಓದುವಾಗ ಹಲವು ಪ್ರಶ್ನೆಗಳು ತಂತಾನೇ ಎದುರಿಗೆ ನಿಲ್ಲುತ್ತವೆ. ಪುರುಷ ಸಹಾನುಭೂತಿಯಿಂದ ದೇವತೆಯೆಂಬಂತೆ, ಆದರ್ಶ ಗೃಹಿಣಿಯೆಂಬಂತೆ ಚಿತ್ರಿಸಿದ ಚಿತ್ರಗಳು ಅವಳನ್ನು ಪ್ರತಿಮೆಯನ್ನಾಗಿಸಿದವು. ಈ ಕಲ್ಪಿತ ಆದರ್ಶಗಳು ಗೃಹ ಬಂಧಿಯಾಗಿಸಿದವು. ಪುರುಷ ಅವಳನ್ನು ತನ್ನ ವ್ಯಕ್ತಿತ್ವದ ಶೋಧದಲ್ಲಿ ಭಾಗಿಯಾಗಿಸಿಕೊಂಡಾಗ ಅವಳೊಂದು ಜೀವಶಾಸ್ತ್ರದ ಪ್ರಯೋಗಾಲಯದಲ್ಲಿ ಟೇಬಲ್ ಮೇಲೆ ಬಳಸಲ್ಪಡುವ ಕಪ್ಪೆಯೋ, ಜಿರಲೆಯೋ, ಎರೆಹುಳವೋ ಎನ್ನುವಂತೆ ನೋಡಲ್ಪಟ್ಟವಳಾ ಎಂಬ ಪ್ರಶ್ನೆಗಳೇಳುತ್ತವೆ. ’ಪಾದಗಂಧ' ಎನ್ನುವ ಕವಿತೆಯಲ್ಲಿ ಹೆಣ್ಣು ಗಂಡೆಂಬ ದೈಹಿಕ ದ್ವಂದ್ವ ಮೀರಿದ ಚಿತ್ರವನ್ನು ದ್ವಂದ್ವಗಳಿಂದಲೇ ಕಟ್ಟಿಕೊಡಲಾಗಿದೆ. ಈ ಕೃತಿಗೆ ಕ.ಸಾ.ಪ ಕೊಡಮಾಡುವ 2019ನೇ ಸಾಲಿನ ದಿ|| ಶ್ರೀಮತಿ ಕೆ. ವಿ. ರತ್ನಮ್ಮ ದತ್ತಿ ಪ್ರಶಸ್ತಿ ದೊರೆತಿದೆ.

About the Author

ಭಾಗ್ಯಜ್ಯೋತಿ ಹಿರೇಮಠ

ಭಾಗ್ಯಜ್ಯೋತಿ ಹಿರೇಮಠ ಅವರು ಧಾರವಾಡದ ಗುಡಗೇರಿಯಲ್ಲಿ 1984 ರಲ್ಲಿ ಜನಿಸಿದರು. ಹುಬ್ಬಳ್ಳಿಯ ಕೆ.ಎಲ್.ಇ ಸಂಸ್ಥೆಯ ಪಿ.ಸಿ.ಜಾಬಿನ್‌ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕಿಯಾಗಿದ್ದಾರೆ. ‘ಕನ್ನಡ ಚಲನಚಿತ್ರರಂಗಕ್ಕೆ ನರಸಿಂಹರಾಜು ಅವರ ಕೊಡುಗೆ' ವಿಷಯದ ಮೇಲೆ ನಡೆಸಿದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಹುಬ್ಬಳ್ಳಿಯ ಕೆ.ಎಲ್.ಇ 'ಧ್ವನಿ' ಎಫ್.ಎಂ ಕೇಂದ್ರದಲ್ಲಿ ಸುಮಾರು ನಾಲ್ಕು ವರ್ಷಗಳಿಂದ ನಿರಂತರವಾಗಿ ಅನೇಕ ಕಾರ್ಯಕ್ರಮಗಳಿಗೆ ಧ್ವನಿಯಾಗಿದ್ದಾರೆ. ಕವಿತೆ ಮತ್ತು ಬದುಕನ್ನು ಅಭೇದವಾಗಿ ಕಾಣುವ ಭಾಗ್ಯಜ್ಯೋತಿ, ಎರಡರಲ್ಲೂ ಉತ್ತಟತೆಯನ್ನೇ ಪ್ರಕಟಪಡಿಸುತ್ತಿದ್ದು,  2018 ರ ‘ಸಂಕ್ರಮಣ ಕಾವ್ಯ ಪ್ರಶಸ್ತಿ’ ಸಂದಿದ್ದು ’ಪಾದಗಂಧ’ ಇವರ ಮೊದಲ ಕವನ ಸಂಕಲನ. ...

READ MORE

Awards & Recognitions

Reviews

ಹೊಸದನಿಯ ಹಾಡುಹಕ್ಕಿ ಪಾದಗಂಧ-ನರೇಂದ್ರ ಪೈ-ಟಿಪ್ಪಣಿ ಪುಸ್ತಕ

ಒಟ್ಟು 45 ಕವಿತೆಗಳ ಸಂಕಲನವಿದು. ‘ಅನಂತ ಸುಖದ ಹಸಿವು ಹೆಚ್ಚಾದಾಗ/ ದಿಢೀರನೆ ನಿಚ್ಚಳಾಗುತ್ತೇನೆ ನಿದ್ದೆಯಲ್ಲಿ/ ಜಾಗರದಲ್ಲೂ ಜಾರುವ ಜಾಣೆಯಂತೆ/ ಎಚ್ಚರದಲ್ಲೂ ಎಳೆಯುವ ಜೋಂಪಿನಂತೆ/ ಮತ್ತೆ ಮತ್ತೆ ಕಾಡುತ್ತಾಳೆ ಅಕ್ಕ/ ಕರೆಯಲೊಲ್ಲಳೇಕೆ ಕದಳಿಗೆ..’ ಎನ್ನುವ ಕವಯತ್ರಿ ಬಿಸಿಯುಸಿರ ಭಾವದ ಹಲವು ಕವನಗಳಿಗೆ ಇಲ್ಲಿ ಜೀವ ನೀಡಿದ್ದಾರೆ. ‘ಸಂಬಂಧಗಳೇ ರಕ್ತಗತವಾಗಿರುವಾಗ/ ಮನಸುಗಳ ಮಾತೇಕೆ/ ಆತ್ಮಗಳೇ ಒಂದಾಗಿರುವಾಗ/ ದೇಹಗಳ ಹಂಗೇಕೆ...’  ಹಾಗೂ ‘ಅವಳ ಕಣ್ಣೀರು/ ಹರಿದಷ್ಟೂ/ ಅಸಂಖ್ಯ ಭಗೀರಥರು/ ಭುವಿಗಿಳಿದರು...’ ಎನ್ನುವ ಹಲವು ಪುಟ್ಟ ಮಿಂಚುಗಳನ್ನೂ ಅಲ್ಲಲ್ಲಿ ಹೊಳೆಯಿಸುತ್ತಾರೆ. ಪಾದಗಂಧ, ಬೆಳಕಿನಂಗಡಿ, ಕೆಂಪುಮೀಸೆ ಮುಂತಾದ ಕವಿತೆಗಳಲ್ಲಿ ಭಾವಕ್ಕೆ ಹದವಾಗಿ ಜೀವತುಂಬಿ ಗಮನ ಸೆಳೆಯುತ್ತಾರೆ. ಆದರೆ ಸಂಕಲನದ ಹಲವು ಕವಿತೆಗಳು ಆಕಾಶದಲ್ಲಿ ಹೆಪ್ಪುಗಟ್ಟಿದ ಮೋಡ ಮಳೆ ಸುರಿಸದೆ ಮುಂದಕ್ಕೆ ಸರಿದಂತೆ, ನಿರಾಶೆ ಹುಟ್ಟಿಸುವುದು ಸುಳ್ಳಲ್ಲ. ಇತ್ತೀಚೆಗೆ ಕವಿಗಳ ಮೊದಲ ಸಂಕಲನದಲ್ಲಿ ಸಹಜವೇ ಎನ್ನಿಸುವ ಭಾವಗಳ ಬಿಕ್ಕಳಿಕೆಗಳಿಂದ ಹೊರಬಂದರೆ ಈ ಕವಯತ್ರಿಯಿಂದ ಇನ್ನಷ್ಟು ಉತ್ತಮ ಕವನಗಳನ್ನು ನಿರೀಕ್ಷಿಸಬಹುದು.

ಕೃಪೆ : ಪ್ರಜಾವಾಣಿ (2020 ಫೆಬ್ರುವರಿ 16)

Related Books