ನಿಸರ್ಗ-ಸುಭಾಷ್ಚಂದ್ರ ದೇವರಗುಡ್ಡರವರ ಕವನ ಸಂಕಲನ, ಹಿರಿಯ ಸಾಹಿತಿಗಳು ಮತ್ತು ಸಾಹಿತ್ಯ ಹಿತೈಷಿಗಳಾದ ಸುಭಾಷ್ ಚಂದ್ರ ಅವರು ಸುಮಾರು ಎಂಟು ಪುಸ್ತಕಗಳನ್ನು ಹೊರ ತಂದು ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಇವರ ಲಯ, ಪ್ರಾಸ, ಛಂದಸ್ಸುಗಳ ಚೌಕಟ್ಟಿನಲ್ಲಿ ಬರೆದ ಕವನಗಳು ಮತ್ತೆ ಮತ್ತೆ ಓದಬೇಕು ಅನ್ನಿಸುವಂತೆ ಮಾಡುತ್ತವೆ. ‘‘ಶುಭ್ರ ನೀಲಾಗಸದಿ ಬೆಳ್ಮುಗಿಲ ತುಣುಕಾಗಿ ಬಾನಿನುದ್ದಗಲಕ್ಕೂ ತೇಲುವಾಸೆ’. ಎಂಬ ಕವನವೊಂದರ ಸಾಲುಗಳಾಗಿಯೇ ಅಲ್ಲ. ಸುಭಾಷ್ ಚಂದ ದೇವರಗುಡ್ಡರ ಕವಿತೆಗಳು ಅಂತಃ ಸ್ಫೂರ್ತಿಯಾಗಿಯೂ ಇರುವಂಥದ್ದು. ಕವಿಯ ಚಿಂತನೆಗಳು ಹಾಗೂ ನಿರೀಕ್ಷೆಗಳು ಇಲ್ಲಿ ಅನಾವರಣಗೊಳ್ಳುತ್ತವೆ. ಸರಳತೆಯಲ್ಲಿ ಸ್ಪಷ್ಟ ಸಂದೇಶ ನೀಡುವ ಕಾವ್ಯ ಸಹಜ ಶಕ್ತಿಯಾಗಿ ಹೊರಹೊಮ್ಮಿದೆ.
ಕನ್ನಡ ಕಾವ್ಯಧಾರೆಯಲ್ಲಿ ದೇವರಗುಡ್ಡರವರ ಕವಿತಾವಾಹಿನಿ ಕಳೆದ ಇಪ್ಪತ್ತೈದು ವರ್ಷಕ್ಕೂ ಮೇಲ್ಪಟ್ಟು ಸತತವಾಗಿ ನಿರರ್ಗಳವಾಗಿ ಹರಿಯುತ್ತಿದೆ. ಒಲಿದು ಬಂದ ಭಾಷೆಗೆ ಆಯಾ ಸಮಯಕ್ಕೆ ತಕ್ಕ ಹಾಗೆ ರೂಪವನ್ನು ಕೊಡುವುದು ಕವಿಯ ಲಕ್ಷಣ. ಅವರ 'ನಿಸರ್ಗ' ಕವನ ಸಂಕಲನದಲ್ಲಿ 'ಓ ಮಲ್ಲಿಗೆ' ಕವನದ ದೇವನ ಅಡಿಗೆ ಮಾತೆಯ ಮುಡಿಗೆ ಅರ್ಪಣಾಭಾವವು, ಹೃದಯದಲಿ ಕಲ್ಪವೃಕ್ಷ ಕುಸುಮಗಳೆ ಕವನ, ಜಾತಿಯು ಬೇರೆ ನೀತಿಯು ಒಂದೆ ಎನ್ನುವ ಐಕ್ಯತೆ ನಿಮಗೆಲ್ಲ ತಿಳಿಯಲು ತೆವಳುತ ನಡೆದರೆ ನಾನು ಮುಗಿಯದು ನನ್ನಯ ಬದುಕಿನ್ನು ಬಿಳಿಯ ಹಕ್ಕಿಯೆ ಧನ್ಯ ನಿನ್ನಯ ಬಾಳದು. ಹಕ್ಕಿ ನಮ್ಮದು ಬದುಕದು ಕರಿಚುಕ್ಕಿ ಎನ್ನುವ ಆತ್ಮ ವಿಮರ್ಶೆ ಕವಿತೆಯ ಹಂದರವನ್ನು ಸೊಗಸಾಗಿ ಕಟ್ಟಿಕೊಡುತ್ತವೆ. ಪ್ರತೀ ಕವನಗಳು ಸಹೃದಯರ ಚಿತ್ತವನ್ನು ಗೆದ್ದುಕೊಳ್ಳುತ್ತವೆ. ಪ್ರಕೃತಿಯ ಮತ್ತು ಬದುಕಿನ ಹಲವು ಚಿತ್ರಗಳಿಗೆ ಕವಿ ಜೀವ ತೋರುವ ವಿಸ್ಮಯದ ಪ್ರತಿಕ್ರಿಯೆ ಇಲ್ಲಿನ ಕವನಗಳಲ್ಲಿ ಹೊರಹೊಮ್ಮಿದೆ. ಕಾವ್ಯಜೀವ ಧಾರೆಯಾಗಿ ಅವ್ಯಾಹತವಾಗಿ ವೃತ್ತಿ-ಪ್ರವೃತ್ತಿಯಲ್ಲಿ ನಿರ್ಬಾಧಿತವಾಗಿ ಉಳಿಸಿಕೊಂಡಿರುವುದು ಇವರ ಕಾವ್ಯ ಪ್ರೀತಿಯನ್ನು ಇಮ್ಮಡಿಗೊಳಿಸಿದೆ.