'ನಿರೀಕ್ಷೆ' ಗಿರೀಶ್ ಕುಮಾರ್ ಎಚ್.ಆರ್. ಅವರ ಪ್ರಾಸಬದ್ಧ ಕವಿತೆಗಳ ಸಂಕಲನ. ಈ ಕೃತಿಗೆ ಹಾಸನ ಕ.ಸಾ.ಪ.ಅಧ್ಯಕ್ಷರಾದ ಡಾ.ಎಚ್.ಎಲ್. ಮಲ್ಲೇಶಗೌಡ ಅವರು ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ 'ಪಂಚಾಯ್ತಿ ಅಭಿವೃದ್ಧಿ ಅಧಿಕಾಲಯಾಗಿರುವ ಮಿತ್ರ ಅವರು ಸತ್ಯ ರಂಗಸುತ ఎంబ ಕಾವ್ಯ ನಾಮದೊಂದಿಗೆ ಸಮರ್ಪಿಸಿರುವ ಕಾವ್ಯ ಗುಚ್ಛ ಕೃತಿ ನನಗೆ ವಿಶಿಷ್ಟ ಎನಿಸಿತು. ಭಿನ್ನ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯುವ ಮಿತ್ರರು ಸಾರಸ್ವತ ಲೋಕಕ್ಕೆ ತೆರೆದುಕೊಳ್ಳುತ್ತಿರುವುದು ಕನ್ನಡದ ಮಟ್ಟಗೆ ವಿಶೇಷ ಎನಿಸುತ್ತದೆ. ಆಧುನಿಕ ಕಾಲದ ಚಿನ್ನ ಭಿನ್ನ ಅನುಭವಗಳು ಕಾವ್ಯ ರೂಪದಲ್ಲಿ ಅನಾವರಣಗೊಳ್ಳುತ್ತವೆ. ಇದರಿಂದಾಗಿ ಕಾವ್ಯ ಕ್ಷೇತ್ರ ಗಟ್ಟಿಗೊಳ್ಳುವುದಲ್ಲದೇ ಅದರ ಪರಿಧಿ ವಿಸ್ತೃತಗೊಳ್ಳುತ್ತದೆ. ಆಯಾ ಕಾಲಮಾನದ ಒಟ್ಟು ಜೀವನಾನುಭವ ದಾಖಲಾಗುತ್ತದೆ. ಈ ಕಾರಣದಿಂದಾಗಿ ಕನ್ನಡ ಸಾಹಿತ್ಯ ಜೀವಂತಿಕೆಯನ್ನು ಉಳಿಸಿಕೊಂಡಿದೆ ಎಂದು ಹೇಳಬೇಕು.
ಕೃತಿಕಾರರಾದ ಗಿಲೀಶ್ ಅವರು ಕಾವ್ಯದ ಹುಟ್ಟುವಿಕೆಯನ್ನು ಪ್ರಸವ ಪ್ರಕ್ರಿಯೆಗೆ ಹೋಲಿಸಿರುತ್ತಾರೆ. ಕವಿಯ ಗರ್ಭೀತ ಭಾರಗಳಿಗೆ ನೀಡುವ ಜನ್ನವೇ ಕಾವ್ಯ, ಅದು ಜನಿಸದ ಹೊರತು ಕವಿಗೆ ಸುಖವಿಲ್ಲ, ಎಲ್ಲ ಕವಿತೆಗಳು ಹೀಗೆ ಹುಟ್ಟುತ್ತವೆ ಎನ್ನುವಂತಿಲ್ಲ, ಆದರೆ ಒಂದು ಶ್ರೇಷ್ಠ ಕಾವ್ಯ ಹುಟ್ಟುವುದು ಹೀಗೆ. ತಮ್ಮ ಈ ಕೃತಿಯಲ್ಲಿ ಆಧುನಿಕ ಕಾಲಮಾನದ ಮಾನವ ಜೀವನದ ಒಟ್ಟು ತಲ್ಲಣಗಳನ್ನು ದಾಖಲಿಸಿದ್ದಾರೆ. ಹಿಂದಿನ ಕಾಲದ ಜನ ಸಮುದಾಯ ಅನುಭವಿಸಿದ್ದ ಎಷ್ಟೋ ಮಹತ್ವದ ಸಂಗತಿಗಳು ಈ ಕಾಲಮಾನದವರಿಗೆ ಇಲ್ಲವಾಗಿರುವುದರ ಬಗ್ಗೆ ಕೃತಿಯಲ್ಲಿ ಕೊರಗಿದೆ. ಆದರೆ ಅವೆಲ್ಲವುಗಳನ್ನು ನಾವೇ ಕಳೆದುಕೊಂಡಿದ್ದೇವೆ ಎಂಬ ವ್ಯಥೆ, ಪಶ್ಚಾತ್ತಾಪ ಈ ಕೃತಿಯ ಫಲಿತ. ಸರಳ ಜೀವನದಲ್ಲಿನ ನಿಜವಾದ ಸುಖ, ಸಂಬಂಧಗಳಲ್ಲಿದ್ದ ಮಧುರ ಅನುಭವ, ಹೃದಯ ಶ್ರೀಮಂತಿಕೆಯಲ್ಲಿದ್ದ ತೃಪ್ತಿ ಇಲ್ಲವಾಗಿ ಬದುಕು ಬರಡಾಗಿರುತ್ತದೆ. ಅದರ ಜೊತೆಗೆ ಪ್ರಕೃತಿಯಲ್ಲಿನ ನಿಜವಾದ ಸೊಬಗಿನಿಂದ ವಂಚಿತರಾದ ಮಾನವ ಮನಸ್ಸು ಬಿಕೋ ಎನ್ನುತ್ತಿದೆ. ಇಂತಹ ದುರ್ನಡತೆಯ ನಡುವೆಯೂ ನಾವು ಸುಖಿಸಬಹುದಾದ ಮಾರ್ಗಗಳ ಶೋಧ ನಡೆದಿದೆ, ಇದು ಕಾಲಮಾನದ ಅನಿವಾರ್ಯ. ಮಿತ್ರ ಗಿರೀಶ್ ಅವರಿಂದ ಇನ್ನೂ ಹೆಚ್ಚಿನ ಮತ್ತು ಮಹತ್ವದ ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಲಭಿಸುವಂತಾಗಲಿ ಎಂದು ಹಾರೈಸಿದ್ದಾರೆ.
ಗಿರೀಶ್ ಕುಮಾರ್ ಎಚ್.ಆರ್. ಹುಟ್ಟಿದ್ದು ಹೊಳೇನರಸೀಪುರದಲ್ಲಿ ತಾಯಿ - ಸತ್ಯಭಾಮ, ತಂದೆ- ರಂಗನಾಥ. ವೃತ್ತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ಗಿರೀಶ್ ಕುಮಾರ್ ಪ್ರವೃತ್ತಿಯಾಗಿ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ಪ್ರಕಟಿತ ಕೃತಿಗಳು: ನಿರೀಕ್ಷೆ (ಪ್ರಾಸಬದ್ಧ ಕವಿತೆಗಳು) ಬನ್ನಿ ಒಮ್ಮೆ ಪ್ರಯತ್ನಿಸೋಣ(ಲೇಖನ ಸಂಕಲನ) ...
READ MORE